ಕಣಿವೆ, ಆ. ೬: ಗಿಡ-ಮರಗಳ ಪೈಕಿ ಅತ್ಯಂತ ಶ್ರೇಷ್ಠ ಸ್ಥಾನ ಪಡೆದಿರುವ ಮತ್ತು ಮಾರುಕಟ್ಟೆಯಲ್ಲಿ ಗರಿಷ್ಠ ಬೆಲೆಯೊಂದಿಗೆ ಬೇಡಿಕೆಯಲ್ಲೂ ಇರುವ ಶ್ರೀಗಂಧದ ಗಿಡಗಳನ್ನು ಮರವಾಗುವ ಮುನ್ನವೇ ಕಳ್ಳರು ಬುಡ ಸಹಿತ ತುಂಡರಿಸಿ ಅಕ್ರಮವಾಗಿ ಸಾಗಿಸುತ್ತಿರುವ ಚಿತ್ರಣ ಕುಶಾಲನಗರದ ಕಾವೇರಿ ನದಿ ದಂಡೆಯ ಆಸುಪಾಸಿನ ಗ್ರಾಮಗಳ ತೋಟಗಳಲ್ಲಿ ಕಂಡುಬರುತ್ತಿವೆ.
ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹೆಚ್.ವಿ. ಶಿವಪ್ಪ ಅವರಿಗೆ ಸೇರಿದ ಕಾವೇರಿ ನದಿ ದಂಡೆಯ ಚಿಕ್ಕಹೊಸೂರು ಗ್ರಾಮದ ಕಾಫಿ ತೋಟದಲ್ಲಿ ಸ್ವಾಭಾವಿಕವಾದ ಬೆಳವಣಿಗೆ ಹಂತದಲ್ಲಿದ್ದ ಶ್ರೀಗಂಧದ ಗಿಡಗಳ ಬುಡಕ್ಕೆ ಕೊಡಲಿ ಇಟ್ಟ ಕಳ್ಳರು ಅವುಗಳನ್ನು ಕದ್ದೊಯ್ದಿದ್ದಾರೆ.
ಶ್ರೀಗಂಧಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಇರುವ ಕಾರಣ ಆ ಗಿಡಗಳನ್ನು ಹಗಲಿನಲ್ಲಿ ಹುಡುಕಿ ರಾತ್ರಿ ವೇಳೆ ಕದ್ದು ಕಡಿದು ಸಾಗಿಸುವಲ್ಲಿ ಶ್ರೀಗಂಧದ ಚೋರರ ಗುಂಪೊAದು ಕುಶಾಲನಗರ, ಕೊಪ್ಪ, ಬೈಲಕೊಪ್ಪ ವ್ಯಾಪ್ತಿಯಲ್ಲಿ ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿದೆ ಎನ್ನಲಾಗಿದ್ದು, ಮಧ್ಯರಾತ್ರಿಯಾದೊಡನೆ ಶ್ರೀಗಂಧಕ್ಕೆ ಕೊಡಲಿ ಇಟ್ಟು ನೋಡಿದಾಗ ಗಂಧದ ಬುಡದಲ್ಲಿ ಚೇಗು ಕಂಡುಬAದರೆ ಹೊತ್ತೊಯ್ದು ಸಾಗಿಸಿ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ.
ಒಂದೆಡೆ ಬೇರೆ ಕಡೆ ಬೆಳೆದಿದ್ದ ಶ್ರೀಗಂಧದ ಗಿಡವೊಂದರ ಬುಡವನ್ನು ಕಡಿದು ಚಿಕ್ಕಹೊಸೂರಿಗೆ ತಂದು ಮೇಲಿನ ಸಿಪ್ಪೆಯನ್ನು ತೆಗೆದು ಒಳಗಿನ ಬಲಿತ ಕಾಂಡವನ್ನು ಹೊತ್ತೊಯ್ದಿರುವುದು ಕಂಡು ಬಂದಿದೆ.
ಜೊತೆಗೆ ಮಧ್ಯರಾತ್ರಿ ಅಥವಾ ನಸುಕಿನ ವೇಳೆ ಗ್ರಾಮೀಣ ಪ್ರದೇಶಗಳಲ್ಲಿ ಅಪರಿಚಿತ ವಾಹನಗಳು ಅಥವಾ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಚಿಕ್ಕಹೊಸೂರು ಗ್ರಾಮದ ಕೊಪ್ಪ ಪಂಚಾಯಿತಿ ಅಧ್ಯಕ್ಷ ಸಿ.ಸಿ. ರೇಣುಕಾ ಸ್ವಾಮಿ ತಿಳಿಸಿದ್ದಾರೆ. - ಮೂರ್ತಿ