? ಕುಡೆಕಲ್ ಸಂತೋಷ್

ಮಡಿಕೇರಿ, ಆ.೬; ಕೊಡಗಿನ ಇತಿಹಾಸದಲ್ಲಿ ಅನೇಕ ಮಂದಿ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರ ಹುದ್ದೆಯನ್ನು ಅಲಂಕರಿಸಿದ್ದಾರೆ. ಪದೋನ್ನತಿಗಳ ಆಧಾರದಲ್ಲಿ ಜಿಲ್ಲಾ ನ್ಯಾಯಾಧೀಶರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಉಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳಾಗಿಯೂ ಉನ್ನತ ಹುದ್ದೆಯನ್ನೇರಿದ್ದಾರೆ. ಆದರೆ, ಜಿಲ್ಲಾ ನ್ಯಾಯಾಧೀಶರುಗಳಾಗಿ ನೇರವಾಗಿ ಆಯ್ಕೆಯಾದವರು ಇಬ್ಬರು ಮಾತ್ರ. ಈ ಪೈಕಿ ಇದೀಗ ಆಯ್ಕೆಯಾಗಿರುವ ಪಿ.ಕೆ. ದಿವ್ಯಾ ಅವರು ಎರಡನೇ ನ್ಯಾಯಾಧೀಶರಾಗಿದ್ದು, ಪ್ರಥಮ ಮಹಿಳಾ ನ್ಯಾಯಾಧೀಶರೆಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಜಿಲ್ಲೆಯಿಂದ ಹಲವಾರು ಮಂದಿ ಹಿರಿಯರು ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರುಗಳಾಗಿ ಆಯ್ಕೆಯಾಗಿದ್ದಾರೆ. ಸಿವಿಲ್, ಮುನ್ಸಿಫ್ ನ್ಯಾಯಾಧೀಶರುಗಳಾಗಿ ನೇರವಾಗಿ ಆಯ್ಕೆಯಾದವರು ಹಲವು ಮಂದಿ ಇದ್ದಾರೆ. ಆದರೆ, ನೇರವಾಗಿ ಜಿಲ್ಲಾ ನ್ಯಾಯಾಧೀಶರುಗಳಾಗಿ ಇಬ್ಬರು ಮಾತ್ರ ಆಯ್ಕೆಯಾಗಿದ್ದಾರೆ. ೧೯೮೩ರಲ್ಲಿ ಎಂ.ಪಿ. ಚಿಣ್ಣಪ್ಪ ಅವರು ಆಯ್ಕೆಯಾದ ಬಳಿಕ ಇದೀಗ ೨೦೨೧ರಲ್ಲಿ ಪ್ರಥಮ ಮಹಿಳಾ

(ಮೊದಲ ಪುಟದಿಂದ) ನ್ಯಾಯಾಧೀಶರಾಗಿ ದಿವ್ಯಾ ಅವರು ಆಯ್ಕೆಯಾಗಿದ್ದಾರೆ. ಪ್ರಸ್ತುತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾನೂನು ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ನಾಲ್ಕನೇ ರ‍್ಯಾಂಕ್..

೨೦೦೬ರಲ್ಲಿ ಕಾನೂನು ಪದವಿ ಮುಗಿಸಿ ಮಡಿಕೇರಿಯಲ್ಲಿ ವಕೀಲಿ ವೃತ್ತಿ ಆರಂಭಿಸಿದ ದಿವ್ಯಾ ಅವರು, ಹಲವಾರು ಮಂದಿ ಹಿರಿಯ ವಕೀಲರುಗಳೊಂದಿಗೆ ಸಹಾಯಕ ವಕೀಲೆಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಪ್ರಸ್ತುತ ಹಿರಿಯ ವಕೀಲ ಎಂ.ಎ. ನಿರಂಜನ್ ಅವರ ಸಹಾಯಕಿ ವಕೀಲೆಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ೨೦೨೦ರ ಅಕ್ಟೋಬರ್‌ನಲ್ಲಿ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಸಲ್ಲಿಸಿ ೨೦೨೧ರಲ್ಲಿ ಪ್ರಾಥಮಿಕ ಹಂತದ ಹಾಗೂ ಮಾರ್ಚ್ನಲ್ಲಿ ಪ್ರಮುಖ ಪರೀಕ್ಷೆಗಳನ್ನು ಬರೆದಿದ್ದರು. ಕಳೆದ ಜುಲೈನಲ್ಲಿ ವೈವಾ ಮುಗಿಸಿದ್ದು, ಕಳೆದ ತಾ. ೪ರಂದು ಹೊರಬಿದ್ದ ಫಲಿತಾಂಶದಲ್ಲಿ ಆಯ್ಕೆಯಾಗಿದ್ದಾರೆ. ರಾಜ್ಯದ ವಿವಿಧೆಡೆಗಳಿಂದ ನೂರಾರು ಮಂದಿ ಪರೀಕ್ಷೆ ಬರೆದಿದ್ದು, ಈ ಪೈಕಿ ಕೊನೆಯ ಹಂತದ ವೈವಾಗೆ ೪೦ ಮಂದಿ ಆಯ್ಕೆಯಾಗಿದ್ದರು. ಇದರಲ್ಲಿ ಹನ್ನೆರಡು ಮಂದಿ ಮಾತ್ರ ಜಿಲ್ಲಾ ನ್ಯಾಯಾಧೀಶರುಗಳಾಗಿ ಆಯ್ಕೆಯಾಗಿದ್ದು, ಅದರಲ್ಲೂ ದಿವ್ಯಾ ನಾಲ್ಕನೇ ರ‍್ಯಾಂಕ್ ಪಡೆದುಕೊಂಡಿರುವದು ಹೆಮ್ಮೆಯ ವಿಚಾರವಾಗಿದೆ. ಕೊಡಗು ಜಿಲ್ಲೆಯಿಂದಲೂ ೧೭ ಮಂದಿ ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ ಒಬ್ಬರು ಮಾತ್ರ ಆಯ್ಕೆಯಾಗಿದ್ದಾರೆ.

ಪದವಿಯಲ್ಲೂ ರ‍್ಯಾಂಕ್

ಮಡಿಕೇರಿಯ ಮಂಗಳೂರು ರಸ್ತೆಯ ಪಿ.ಎಂ. ಕುಮಾರನ್ ಹಾಗೂ ಇಂದಿರಾ ದಂಪತಿಯರ ಪುತ್ರಿಯಾಗಿರುವ ದಿವ್ಯಾ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸಂತ ಜೋಸೆಫರ ಶಾಲೆಯಲ್ಲಿ, ಪ್ರೌಢ ಹಾಗೂ ಪದವಿ ಶಿಕ್ಷಣವನ್ನು ಪುತ್ತೂರಿನ ಸಂತ ಫಿಲೋಮಿನ ಕಾಲೇಜಿನಲ್ಲಿ, ಹಾಗೂ ಕಾನೂನು ಪದವಿಯನ್ನು ಮೈಸೂರಿನ ಜೆಎಸ್‌ಎಸ್ ಕಾನೂನು ವಿದ್ಯಾಲಯದಲ್ಲಿ ಪೂರೈಸಿದ್ದಾರೆ. ಕಾನೂನು ಪದವಿಯಲ್ಲೂ ಮೈಸೂರು ಯೂನಿವರ್ಸಿಟಿಗೆ ಮೂರನೇ ರ‍್ಯಾಂಕ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ.

ನಿರAತರ ಕಲಿಕೆಯಿಂದ ಸಾಧ್ಯವಾಯಿತು

೨೦೨೦ರ ಅಕ್ಟೋಬರ್‌ನಲ್ಲಿ ಹುದ್ದೆಗೆ ಆಹ್ವಾನ ಬಂದಲ್ಲಿAದ ನಿರಂತರ ಕಲಿಕೆಯಲ್ಲಿ ತೊಡಗಿಸಿ ಕೊಂಡ ಕಾರಣ ಈ ಉನ್ನತ ಹುದ್ದೆಗೆ ಏರಲು ಸಾಧ್ಯ ವಾಯಿತು ಎಂದು ನ್ಯಾಯಾಧೀಶರಾಗಿ ಆಯ್ಕೆ ಗೊಂಡಿರುವ ದಿವ್ಯಾ ‘ಶಕ್ತಿ’ಯೊಂದಿಗೆ ತಮ್ಮ ಅಭಿಪ್ರಾಯ ಹಂಚಿ ಕೊಂಡರು. ಕೆಲವೊಮ್ಮೆ ದಿನದಲ್ಲಿ ೧೨ರಿಂದ ೧೩ ಗಂಟೆಗಳ ಕಾಲ ಅಭ್ಯಾಸದಲ್ಲಿ ನಿರತನಾಗಿರುತ್ತಿದ್ದೆ. ಹಲವು ಮಂದಿ ಹಿರಿಯ ವಕೀಲರುಗಳೊಂದಿಗೆ ಕೆಲಸ ಮಾಡಿರುವದರಿಂದ ಅವರುಗಳಿಂದಲೂ ಸಾಕಷ್ಟು ಕಲಿತಿದ್ದೆ, ಎಲ್ಲರೂ ಸಹಕಾರ ನೀಡಿದ್ದಾರೆ. ನ್ಯಾಯಾಧೀಶರ ಹುದ್ದೆಗೆ ಪರೀಕ್ಷೆ ಬರೆಯಲು ಹಿರಿಯ ವಕೀಲರಾದ ಕೆ.ಎಂ. ಕೃಷ್ಣಭಟ್ ಅವರು ಸಂಪೂರ್ಣ ಸಹಕಾರ ನೀಡಿದ್ದಾರೆ. ಅವರ ಮಾರ್ಗದರ್ಶನದಲ್ಲಿಯೇ ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದಾಗಿ ದಿವ್ಯಾ ನೆನಪಿಸಿಕೊಂಡರು. ನನ್ನ ಪರಿಶ್ರಮಕ್ಕೆ ಪೂರಕವಾಗಿ ತಂದೆ, ತಾಯಿ, ಸಹೋದರ ವಿವೇಕ್ ಹಾಗೂ ಪುತ್ರ ಸಂತ ಜೋಸೆಫರ ಶಾಲೆಯಲ್ಲಿ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅದ್ವೆöÊತ್ ಎಲ್ಲ ರೀತಿಯಲ್ಲಿಯೂ ಸಹಕಾರ ನೀಡಿದ್ದಾರೆ ಎಂದು ಹೇಳಿದರು. ವಕೀಲೆಯಾಗಿ ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡಿರುವ ಅನುಭವವಿದೆ, ಮುಂದೆ ನ್ಯಾಯಾಧೀಶೆಯಾಗಿ ಕಾನೂನಿನ ಚೌಕಟ್ಟಿನಡಿ ಸಮಾಜಕ್ಕೆ ಸಹಾಯ ಮಾಡುವ ಇರಾದೆ ಇರುವದಾಗಿ ಹೇಳಿದರು.

ಕಾನೂನು ಪದವಿ ಮುಗಿಸಿದಾಗಲೇ ಮುನ್ಸಿಫ್ ನ್ಯಾಯಾಧೀಶರ ಹುದ್ದೆಗೆ ಆಹ್ವಾನ ಮಾಡಿದ್ದರು. ಜೆಎಸ್‌ಎಸ್ ಕಾಲೇಜಿನಲ್ಲೂ ಪರೀಕ್ಷೆ ಬರೆಯಲು ಹೇಳಿದ್ದರು, ವಕೀಲೆಯಾಗಿ ಒಂದಷ್ಟು ಅನುಭವ ಹೊಂದುವ ಸಲುವಾಗಿ ಆಗ ಬರೆಯಲಿಲ್ಲ. ಆದರೆ, ಆ ಹುದ್ದೆಗೇರುವ ಆಸೆ ಇತ್ತು, ಅದು ಇಂದು ನೆರವೇರಿದೆ. ಇದು ನನ್ನ ಭಾಗ್ಯ, ತುಂಬಾ ಖುಷಿಯಾಗಿದೆ ಎಂದು ಹೇಳಲು ಮಾತ್ರ ಅವರು ಮರೆಯಲಿಲ್ಲ.

ತರಬೇತಿ ಬಳಿಕ ನೇಮಕ

ನ್ಯಾಯಾಧೀಶರುಗಳಾಗಿ ಆಯ್ಕೆಯಾಗಿರುವವರಿಗೆಲ್ಲರಿಗೂ ಮುಂದಿನ ದಿನಗಳಲ್ಲಿ ತರಬೇತಿಗೆ ಹಾಜರಾಗಲು ಆದೇಶ ಬರಲಿದೆ. ಆದೇಶದ ಬಳಿಕ ಬೆಂಗಳೂರಿನ ನ್ಯಾಯಾಂಗ ಅಕಾಡೆಮಿಯಲ್ಲಿ ಕೆಲವು ತಿಂಗಳುಗಳ ಕಾಲ ತರಬೇತಿ ನೀಡಲಾಗುವದು. ನಂತರದಲ್ಲಿ ಜಿಲ್ಲಾ ನ್ಯಾಯಾಲಯಗಳಿಗೆ ನೇಮಕಾತಿ ಮಾಡಲಾಗುತ್ತದೆ.