ಸೋಮವಾರಪೇಟೆ, ಆ. ೪: ಮಕ್ಕಳ ಸಹಾಯವಾಣಿ ಕೇಂದ್ರ ಮತ್ತು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ಇಲ್ಲಿನ ವೆಂಕಟೇಶ್ವರ ಬ್ಲಾಕ್ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ, ವಿಶ್ವ ಸ್ತನ್ಯಪಾನ ಹಾಗೂ ವಿಶ್ವ ಪರಿಸರ ಸಂರಕ್ಷಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಣ್ಣಯ್ಯ ಅವರು, ಸರ್ಕಾರದ ವತಿಯಿಂದ ಇಲಾಖೆಯ ಮೂಲಕ ಪೋಷಣ್ ಅಭಿಯಾನ ಯೋಜನೆ ಜಾರಿಯಲ್ಲಿದ್ದು, ಗರ್ಭಿಣಿ ಹಾಗೂ ಬಾಣಂತಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ವಿಶ್ವ ಪರಿಸರ ಸಂರಕ್ಷಣಾ ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಈ ಸಂದರ್ಭ ಇಲಾಖೆಯ ಮೇಲ್ವಿಚಾರಕರಾದ ಸಾವಿತ್ರಮ್ಮ, ಗುರುಬಸಮ್ಮ, ಪ.ಪಂ. ಸದಸ್ಯರಾದ ಪಿ.ಕೆ. ಚಂದ್ರು, ಬಿ.ಆರ್. ಮಹೇಶ್, ಜೀವನ್, ಶೀಲಾ ಡಿಸೋಜ, ಮಕ್ಕಳ ಸಹಾಯ ವಾಣಿಯ ಬಿ.ಕೆ. ಕುಮಾರಿ, ಅಂಗನವಾಡಿ ಕಾರ್ಯಕರ್ತೆಯರಾದ ತಾರಾ ಲೋಬೋ, ಉಷಾ, ಜಗದಾಂಭ, ಅಶ್ವಿನಿ, ರೇಣುಕ ಶಿಕ್ಷಕಿ ಕವಿತ ಸೇರಿದಂತೆ ಇತರರು ಉಪಸ್ಥಿತರಿದ್ದರು.