ಮಡಿಕೇರಿ, ಆ. ೪: ಮಳೆಯಿಲ್ಲದಿದ್ದ ಸಂದರ್ಭ ನಮ್ಮ ಊರುಗಳಿಗೆ ಬರುತ್ತಾರೆ... ಸಂಚಾರ ವ್ಯವಸ್ಥೆ ಸಮರ್ಪಕವಾಗಿರುವ ಕಡೆ ನಿಲ್ಲುತ್ತಾರೆ... ನೋಡುತ್ತಾರೆ... ಹೋಗುತ್ತಾರೆ... ಆದರೆ, ಈಗ ಭಾರೀ ಮಳೆ ಸಂದರ್ಭ ಅಲ್ಲಲ್ಲಿ ಭೂಕುಸಿತಗಳುಂಟಾಗುತ್ತಿದ್ದು, ಅಪಾಯದ ಸ್ಥಿತಿಯಲ್ಲಿ ಜೀವಭಯದಿಂದ ನಲುಗುತ್ತಿರುವ ಗ್ರಾಮಸ್ಥರನ್ನು ಕೇಳುವವರು ಇಲ್ಲವಾಗಿದ್ದಾರೆ ಎಂದು ಪಶ್ಚಿಮ ಘಟ್ಟ ಮೂಲನಿವಾಸಿಗಳ ಸಂಘದ ಅಧ್ಯಕ್ಷ ಕಾಳಚಂಡ ರವಿತಮ್ಮಯ್ಯ ಟೀಕಿಸಿದ್ದಾರೆ.

ಕಳೆದ ೩ ವರ್ಷಗಳ ಕಾಲ ಭೂಕುಸಿತ, ಪ್ರವಾಹ, ಆಸ್ತಿ -ಪಾಸ್ತಿ ನಷ್ಟದಲ್ಲಿ ನಲುಗಿ ಹೋದ ಗ್ರಾಮಸ್ಥರನ್ನು ಕೇಳುವವರೇ ಇಲ್ಲವಾಗಿದ್ದಾರೆ. ತಂತಿಪಾಲ, ಐರಿಬಾಣೆ, ಮುಕ್ಕೋಡ್ಲು, ಕಾಲೂರು, ಕಲ್ಲುಕೊಟ್ಟು, ಕುಂಬುಕಾಡು, ಹಮ್ಮಿಯಾಲ, ಮುಟ್ಲು ಈ ಮೊದಲಾದ ಗ್ರಾಮಗಳ ಜನರು ಕಳೆದ ೩ ವರ್ಷಗಳಿಂದ ಅತಿವೃಷ್ಟಿ, ಭೂಕುಸಿತ, ಪ್ರವಾಹದಿಂದ ತೀವ್ರ ಬವಣೆಪಡುತ್ತಿದ್ದಾರೆ. ಇದೀಗ ೨ ದಿನಗಳಿಂದ ಈ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಅಲ್ಲಲ್ಲಿ ಭೂಕುಸಿತಗಳುಂಟಾಗುತ್ತಿವೆ. ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಮತ್ತಿತರ ಕೆಲವು ಅಧಿಕಾರಿಗಳು ಬಂದು ದೂರದಿಂದ ಗ್ರಾಮ ವನ್ನು ದರ್ಶಿಸಿ ಮರಳಿದ್ದಾರೆ. ಇದರಿಂದ ಗ್ರಾಮಸ್ಥರಿಗೆ ಯಾವುದೇ ಪ್ರಯೋಜನ ವಾಗದು. ಎನ್‌ಡಿಆರ್‌ಎಫ್ ತಂಡ ಅಪಾಯವಿಲ್ಲದ ಸ್ಥಳಗಳಲ್ಲಿ ಬೀಡುಬಿಡು ವುದರಿಂದ ಅಪಾಯವಿರುವ ಗ್ರಾಮಸ್ಥರಿಗೆ ನಿಷ್ಪçಯೋಜಕ ಅಲ್ಲದೆ, ಮಳೆಹಾನಿ, ವಿಕೋಪ ಹಣದಲ್ಲಿ ಈ ವಿಭಾಗದಲ್ಲಿ ಅನೇಕ ಗುತ್ತಿಗೆದಾರರು ಮಾಡಿರುವ ರಸ್ತೆ, ಮತ್ತಿತರ ಕಾಮಗಾರಿಗಳು ತೀವ್ರ ಕಳಪೆ ಮಟ್ಟದ್ದಾಗಿದ್ದು, ಅನೇಕ ಕಡೆ ಈ ಎಲ್ಲಾ ಸ್ಥಳಗಳಲ್ಲಿ ಮತ್ತೆ ಭೂಕುಸಿತವುಂಟಾಗುತ್ತಿದ್ದು, ಅಪಾಯದ ಗಂಟೆ ಬಾರಿಸಿದೆ ಎಂದು ರವಿ ತಮ್ಮಯ್ಯ ತಿಳಿಸಿದ್ದಾರೆ.

ಕನ್ನಿಕಂಡ ಸುರೇಶ್ ಅವರು, ತಮ್ಮ ತೋಟದ ಗದ್ದೆ ಹಾಗೂ ತೋಟದ ಬಳಿ ಸಂಭವಿಸುತ್ತಿರುವ ಭೂಕುಸಿತದ ಬಗ್ಗೆ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ಈ ವಿಭಾಗದಲ್ಲಿ ಅನೇಕ ರೈತರು ಇದೇ ಸ್ಥಿತಿ ಎದುರಿಸುತ್ತಿದ್ದಾರೆ. ಅಲ್ಲದೆ, ಮಡಿಕೇರಿ ಯಿಂದ ಮಾಂದಲ್‌ಪಟ್ಟಿಗೆ ತೆರಳುವ ರಸ್ತೆಯ ಕುಂಬುಕಾಡು ಎಂಬಲ್ಲಿ ಕಲ್ಲುಬಂಡೆ ಸಹಿತ ಬರೆ ಕುಸಿಯುವ ಹಂತದಲ್ಲಿದ್ದು, ಅಪಾಯ ಕಾದಿದೆ. ಈ ರಸ್ತೆಯನ್ನು ಅಗಲಗೊಳಿಸಬೇಕಾಗಿದೆ. ಬಂಡೆ ಹಾಗೂ ಕಲ್ಲುಗಳನ್ನು ತೆರವುಗೊಳಿಸಬೇಕಾಗಿದೆ ಎಂದು ಅಲ್ಲಿನ ಗ್ರಾಮಸ್ಥರು ‘ಶಕ್ತಿ’ಯೊಂದಿಗೆ ಆಗ್ರಹಿಸಿದ್ದಾರೆ.