ಗೋಣಿಕೊಪ್ಪಲು. ಆ. ೪: ಪ್ರತಿಷ್ಠಿತ ಪಂಚಾಯಿತಿಗಳಲ್ಲೊAದಾದ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಿತು. ಹಿಂದುಳಿದ ವರ್ಗ ಆ ಮಹಿಳೆಗೆ ಮೀಸಲಾಗಿದ್ದ ಸ್ಥಾನಕ್ಕೆ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಚೈತ್ರ ಬಿ. ಚೇತನ್, ಪರಿಶಿಷ್ಟ ವರ್ಗದ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷರಾಗಿ ವೈ.ಎಂ. ಸವಿತಾ ಮೊದಲ ಅವಧಿಗೆ ಅವಿರೋಧವಾಗಿ ಆಯ್ಕೆಯಾದರು. ವೀರಾಜಪೇಟೆ ತಾಲೂಕು ತಹಶೀಲ್ದಾರ್ ಹಾಗೂ ಚುನಾವಣಾ ಅಧಿಕಾರಿಯಾದ ಯೋಗಾನಂದ್ ಅವರು ಚುನಾವಣಾ ಪ್ರಕ್ರಿಯೇ ನಡೆಸಿಕೊಟ್ಟರು.

ಗ್ರಾಮ ಪಂಚಾಯಿತಿ ಸಭಾಂಗಣ ದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಚುನಾವಣಾ ಪ್ರಕ್ರಿಯೆ ಆರಂಭವಾಯಿತು. ಕಾಂಗ್ರೆಸ್ ಪಕ್ಷದ ಬೆಂಬಲಿತ ೯ ಸದಸ್ಯರು ಮೊದಲಿಗೆ ಸಭಾಂಗಣ ಪ್ರವೇಶ ಮಾಡಿದರು. ನಂತರ ಬಿಜೆಪಿ ಬೆಂಬಲಿತ ೧೨ ಸದಸ್ಯರು ಆಗಮಿಸಿದರು. ಕಾಂಗ್ರೆಸ್ ಬೆಂಬಲಿತ ಸದಸ್ಯರುಗಳಿಗೆ ಬಹುಮತವಿಲ್ಲದಿದ್ದರೂ ಸದಸ್ಯರಾದ ಎಂ. ಮಂಜುಳ ಹಾಗೂ ಶಾಯಿನ ಎಂ.ಬಿ. ಅಧ್ಯಕ್ಷ ಸ್ಥಾನಕ್ಕೆ, ನಾಮಪತ್ರ ಸಲ್ಲಿಸಿದರು. ಉಳಿದಂತೆ ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ವರ್ಗ ಮಹಿಳೆಗೆ ಮೀಸಲಾಗಿದ್ದರಿಂದ ಏಕೈಕ ಸದಸ್ಯರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ಆಯ್ಕೆಯಾಗಿದ್ದ ವೈ.ಎಂ. ಸವಿತಾ ನಾಮಪತ್ರ ಸಲ್ಲಿಸಿದರು.

ಸ್ಪಷ್ಟ ಬಹುಮತವಿದ್ದ ಬಿಜೆಪಿ ಬೆಂಬಲಿತ ಸದಸ್ಯರಾದ ಚೈತ್ರ ಬಿ. ಚೇತನ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಚುನಾವಣಾ ಅಧಿಕಾರಿಗಳು ನಿಗದಿತ ಸಮಯದಲ್ಲಿ ನಾಮಪತ್ರ ಪರಿಶೀಲನೆ ನಡೆಸಿದರು. ಈ ವೇಳೆ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಶಾಹಿನ ಎಂ.ಬಿ. ನಾಮಪತ್ರ ಕ್ರಮಬದ್ದ ವಾಗಿಲ್ಲದ ಕಾರಣ ತಿರಸ್ಕೃತಗೊಂಡಿದೆ ಎಂದು ಚುನಾವಣಾಧಿಕಾರಿ ಪ್ರಕಟಿಸಿದರು.

ಉಳಿದಂತೆ ಮಂಜುಳ ಹಾಗೂ ಚೈತ್ರ ಅವರ ನಾಮಪತ್ರಗಳು ಕ್ರಮ ಬದ್ದವಾಗಿದೆ ಎಂದು ತಿಳಿಸಿದರು. ಈ ವೇಳೆ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಎಂ. ಮಂಜುಳ ತಮ್ಮ ನಾಮಪತ್ರವನ್ನು ಹಿಂಪಡೆದರು. ಹೀಗಾಗಿ ಕಣದಲ್ಲಿ ಏಕೈಕ ಉಮೇದುವಾರಿಕೆ ಸಲ್ಲಿಸಿದ್ದ ಬಿಜೆಪಿ ಬೆಂಬಲಿತ ಸದಸ್ಯೆ ಚೈತ್ರ ಬಿ. ಚೇತನ್ ಅಧ್ಯಕ್ಷರಾಗಿ ಆಯ್ಕೆಯಾಗಿ ದ್ದಾರೆಂದು ತಹಶೀಲ್ದಾರ್ ಯೋಗಾ ನಂದ್ ಘೋಷಣೆ ಮಾಡಿದರು.

ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯು ಯಾವುದೇ ಗೊಂದಲ ವಿಲ್ಲದೆ ಸುಸೂತ್ರವಾಗಿ ನಡೆಯಿತು. ಚುನಾವಣಾ ಪ್ರಕ್ರಿಯೆಯಲ್ಲಿ ಪಂಚಾಯಿತಿ ಸದಸ್ಯರುಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ, ಸಹಾಯಕ ಚುನಾವಣಾ ಅಧಿಕಾರಿ ಮಂಜುನಾಥ್, ಪಂಚಾಯಿತಿ ಸಿಬ್ಬಂದಿಗಳಾದ ರಾಜು, ಸತೀಶ್ ಉಪಸ್ಥಿತರಿದ್ದರು.

ಭ್ರಷ್ಟಾಚಾರ ರಹಿತ ಆಡಳಿತ

ನೂತನ ಅಧ್ಯಕ್ಷರಾಗಿ ಆಯ್ಕೆ ಗೊಂಡ ಸ್ನಾತಕೋತ್ತರ ಪದವೀಧರೆ ಚೈತ್ರ ಬಿ. ಚೇತನ್ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನ ವಹಿಸಿ ‘ಶಕ್ತಿ’ಯೊಂದಿಗೆ ಮಾತನಾಡಿ, ಪಂಚಾಯಿತಿಯಲ್ಲಿ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಒತ್ತು ನೀಡುವುದಾಗಿ, ಪಂಚಾಯಿತಿಯನ್ನು ಮಾದರಿ ಪಂಚಾಯಿತಿಯಾಗಿ ಮಾಡುವ ನಿಟ್ಟಿನಲ್ಲಿ ಸರ್ವ ಪ್ರಯತ್ನ ಮಾಡಲಾಗುವುದು. ಜನರ ಕುಂದು ಕೊರತೆಗಳಿಗೆ ಸ್ಪಂದಿಸುವುದಾಗಿ, ಜನತೆಗೆ ಭರವಸೆ ನೀಡಿದರು.

ನೂತನ ಉಪಾಧ್ಯಕ್ಷೆ ಸವಿತಾ ಪ್ರತಿಕ್ರಿಯಿಸಿ ಮೊದಲ ಬಾರಿಗೆ ರಾಜಕಾರಣಕ್ಕೆ ಪದಾರ್ಪಣೆ ಮಾಡಿದ್ದೇನೆ. ಅನುಭವಿ ಸದಸ್ಯರ ಮಾರ್ಗದರ್ಶನ ಪಡೆದು ನೀಡಿರುವ ಜವಾಬ್ದಾರಿಯನ್ನು ಉತ್ತಮವಾಗಿ ನಡೆಸಿಕೊಂಡು ಜನತೆಯ ಕಷ್ಟಕ್ಕೆ ಭಾಗಿಯಾಗುತ್ತೇನೆಂದು ತಿಳಿಸಿದರು.

ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಪಂಚಾಯಿತಿ ಸದಸ್ಯರು ಸೇರಿದಂತೆ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ತಾಲೂಕು ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಜಿ.ಪಂ. ಮಾಜಿ ಸದಸ್ಯ ಸಿ.ಕೆ. ಬೋಪಣ್ಣ, ಜಿಲ್ಲಾ ಖಜಾಂಚಿ ಚೆಪ್ಪುಡೀರ ಮಾಚು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಞಂಗಡ ಅರುಣ್ ಭೀಮಯ್ಯ, ಕಾರ್ಯದರ್ಶಿ ಗುಮ್ಮಟ್ಟೀರ ಕಿಲನ್ ಗಣಪತಿ, ತಾಲೂಕು ಕಾರ್ಯದರ್ಶಿ ವಾಟೇರಿರ ಬೋಪಣ್ಣ, ಅಕ್ರಮ ಸಕ್ರಮ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಪಕ್ಷದ ಪ್ರಮುಖರಾದ ರಾಣಿ ನಾರಾಯಣ, ಗುಮ್ಮಟ್ಟೀರ ದರ್ಶನ್, ಗಣೇಶ್, ಸುಬ್ರಮಣಿ, ಕಾಂಗ್ರೆಸ್ ಪಕ್ಷದ ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮೀದೇರಿರ ನವೀನ್, ಪ್ರಧಾನ ಕಾರ್ಯದರ್ಶಿ ಎ.ಜೆ. ಬಾಬು, ಯುವ ಕಾಂಗ್ರೆಸ್ ಅಧ್ಯಕ್ಷ ನಾಮೇರ ಅಂಕಿತ್, ಶಮ್ಮು, ಧನಲಕ್ಷಿö್ಮ, ಅಬ್ದುಲ್ ಸಮ್ಮದ್ ಮುಂತಾದವರು ಹಾಜರಿದ್ದರು.

ಮುಂಜಾಗೃತಾ ಕ್ರಮವಾಗಿ ಪೊಲೀಸರು ಪಂಚಾಯಿತಿ ವ್ಯಾಪ್ತಿಯ ಸುತ್ತಲೂ ಬಿಗಿಬಂದೋಬಸ್ತ್ ಕೈಗೊಂಡಿದ್ದರು. ಪಂಚಾಯಿತಿ ಆವರಣಕ್ಕೆ ಸದಸ್ಯರು, ಸಿಬ್ಬಂದಿ, ಪತ್ರಕರ್ತರು ಹೊರತುಪಡಿಸಿ ಸಾರ್ವಜನಿಕರು ಒಳ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿತ್ತು. ವೃತ್ತ ನಿರೀಕ್ಷಕ ಜಯರಾಮ್, ಸಬ್‌ಇನ್ಸ್ಪೆೆಕ್ಟರ್ ಸುಬ್ಬಯ್ಯ ಖುದ್ದು ಹಾಜರಿದ್ದು ಸೂಕ್ತ ಬಂದೋಬಸ್ತ್ ಕ್ರಮಕೈಗೊಂಡಿದ್ದರು.

-ಹೆಚ್.ಕೆ. ಜಗದೀಶ್