ಕಣಿವೆ, ಆ. ೩: ಮನುಷ್ಯನ ಆರೋಗ್ಯದಲ್ಲಿ ಆಯುರ್ವೇದ ಚಿಕಿತ್ಸೆ ಬಹು ಮುಖ್ಯವಾದುದು ಎಂದು ಕುಶಾಲನಗರ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸರಸ್ವತಿ ಹೇಳಿದರು.

ಹೆಬ್ಬಾಲೆಯ ಕನಕ ಬ್ಲಾಕಿನಲ್ಲಿ ಪರಿಶಿಷ್ಟ ಜಾತಿಯ ಜನರಿಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರು ಶುಚಿತ್ವಕ್ಕೆ ಹೆಚ್ಚು ಮಹತ್ವ ನೀಡಬೇಕು. ಹಾಗೆಯೇ ಪೌಷ್ಠಿಕಾಂಶವುಳ್ಳ ಶುಚಿ - ರುಚಿಯಾದ ಆಹಾರವನ್ನು ಸವಿಯುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಕೊರೊನಾ ಮಹಾಮಾರಿ ಸಂಪೂರ್ಣವಾಗಿ ನಿರ್ಮೂಲನೆಯಾಗುವ ತನಕ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ಗಳನ್ನು ತಪ್ಪದೇ ಬಳಸಬೇಕು ಎಂದು ಡಾ. ಸರಸ್ವತಿ ಕರೆಕೊಟ್ಟರು.

ಮತ್ತೋರ್ವ ಹೋಮಿಯೋಪತಿ ವೈದ್ಯೆ ಡಾ. ಸೌಪರ್ಣಿಕ ಮಾತನಾಡಿ ಇಲಾಖೆಯ ವತಿಯಿಂದ ಉಚಿತವಾಗಿ ನೀಡುವ ಆಯುರ್ವೇದ ಹಾಗು ಹೋಮಿಯೋಪತಿ ಔಷಧಿಗಳನ್ನು ಪಡೆದುಕೊಂಡು ಆರೋಗ್ಯ ವಂತರಾಗಲು ಕರೆಕೊಟ್ಟರು.

ಗ್ರಾಮದ ಹಿರಿಯರಾದ ಭೀಮಯ್ಯ ಹಾಗೂ ಪಂಚಾಯಿತಿ ಸದಸ್ಯ ನಾರಾಯಣ ದೀಪ ಬೆಳಗಿ ಆರೋಗ್ಯ ಶಿಬಿರ ಉದ್ಘಾಟಿಸಿದರು. ನೂರಕ್ಕೂ ಹೆಚ್ಚು ಫಲಾನುಭವಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು.