ಸಿದ್ದಾಪುರ, ಆ. ೩: ಸಿದ್ದಾಪುರ ಪಟ್ಟಣ ವ್ಯಾಪ್ತಿಯಲ್ಲಿ ಎಟಿಎಂ ಕೇಂದ್ರಗಳು ದಿನನಿತ್ಯ ಬಾಗಿಲು ಮುಚ್ಚಿಕೊಂಡಿದ್ದು, ಎಟಿಎಂ ಎಂದರೆ ಎನಿ ಟೈಮ್ ಮುಚ್ಚುವ ಕೇಂದ್ರ ಎಂಬAತಾಗಿದೆ. ಸಿದ್ದಾಪುರದ ಕೆನರಾ ಬ್ಯಾಂಕ್‌ನ ಮುಂಭಾಗದಲ್ಲಿರುವ ಹಾಗೂ ಬ್ಯಾಂಕ್ ಆಫ್ ಬರೋಡದ ಎದುರು ಇರುವ ಎರಡು ಎಟಿಎಂ ಕೇಂದ್ರಗಳು ದಿನಂಪ್ರತಿ ಮುಚ್ಚಿದ್ದು, ಇದರಿಂದ ಸಾರ್ವಜನಿಕರಿಗೆ ಹಾಗೂ ಗ್ರಾಮಸ್ಥರಿಗೆ ಸಮಸ್ಯೆಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ವಾರಾಂತ್ಯದಲ್ಲಿ ಪ್ರವಾಸಿಗರು ಕೂಡಾ ಬರುತ್ತಿದ್ದು, ಅವರು ಎಟಿಎಂ ಮೂಲಕ ಹಣ ಪಡೆಯಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೇ ಸಿದ್ದಾಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಇರುವ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಕೂಡ ಎಟಿಎಂ ಮುಖಾಂತರ ವಾರಾಂತ್ಯದ ಸಂಬಳಗಳನ್ನು ಪಡೆಯುತ್ತಿದ್ದು, ಅವರು ಕೂಡ ಹಣಕ್ಕಾಗಿ ಬೇರೆ ಊರಿಗೆ ತೆರಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಮೀಪದ ನೆಲ್ಲಿಹುದಿಕೇರಿಯ ಯೂನಿಯನ್ ಬ್ಯಾಂಕ್‌ನಲ್ಲಿರುವ ಎಟಿಎಂ ಕೇಂದ್ರವು ಕೂಡ ಆಗಿಂದಾಗ್ಗೆ ಮುಚ್ಚುತ್ತಿದ್ದು, ಈ ಬಗ್ಗೆ ಕೂಡಲೇ ಸಂಬAಧಪಟ್ಟವರು ಎಟಿಎಂಗಳಲ್ಲಿ ಹಣದ ವ್ಯವಹಾರಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಹಲವಾರು ಮಂದಿ ಎಟಿಎಂ ಕೇಂದ್ರಗಳಿಗೆ ತೆರಳಿ ಹಣವಿಲ್ಲದೇ ಹಿಂತಿರುಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಈ ಬಗ್ಗೆ ಬ್ಯಾಂಕ್‌ನ ಮೇಲಧಿಕಾರಿಗಳು ಗಮನಹರಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ. - ವಾಸು ಎ.ಎನ್.