ಸೋಮವಾರಪೇಟೆ, ಆ. ೩: ಸಮೀಪದ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಗ್ಗೋಡ್ಲು ಬೆಟ್ಟಪೈಸಾರಿಯಲ್ಲಿ ವಾಸವಿರುವ ೨೨ ದಲಿತ ಕುಟುಂಬಗಳಿಗೆ ಮಳೆಗಾಲ ಬಂತೆAದರೆ ನಿದ್ರೆಯಿಲ್ಲ. ರಾತ್ರಿಯಿಡೀ ಎಚ್ಚರವಿದ್ದು, ಜೀವ ಉಳಿಸಿಕೊಳ್ಳಲು ಹೆಣಗಾಡಬೇಕಾದ ಪರಿಸ್ಥಿತಿ. ಇದಕ್ಕೆ ಕಾರಣ ಬೆಟ್ಟದ ಪ್ರದೇಶದಲ್ಲಿ ನಿರ್ಮಿಸಿಕೊಂಡಿರುವ ಮನೆಗಳು.

ಬೆಟ್ಟಪೈಸಾರಿಯಲ್ಲಿರುವ ೨೨ ಕೂಲಿಕಾರ್ಮಿಕ ಕುಟುಂಬಗಳ ಬೇಡಿಕೆ ಅರಣ್ಯರೋದÀನವೇ ಆಗಿದೆ. ಬೆಟ್ಟ ಪ್ರದೇಶದಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡಿರುವ ದಲಿತ ಕುಟುಂಬಗಳಿಗೆ ಕನಿಷ್ಟ ಸೌಲಭ್ಯಗಳೂ ಇಲ್ಲ; ಇದರೊಂದಿಗೆ ಮನೆಯ ಸುರಕ್ಷತೆಯೂ ಇಲ್ಲವಾಗಿದೆ.

೨೦೧೮ರಲ್ಲಿ ಇಗ್ಗೋಡ್ಲು ಭಾಗದಲ್ಲಿ ಭೂ ಕುಸಿತವಾಗಿದ್ದು, ೩ ಮನೆಗಳು ಸಂಪೂರ್ಣ ನೆಲಸಮವಾಗಿವೆ. ಇವರುಗಳಿಗೆ ಸರ್ಕಾರದಿಂದ ನೂತನ ಮನೆ ನೀಡಲಾಗಿದ್ದು, ಜೀವನದ ಬಂಡಿ ಸಾಗುತ್ತಿದೆ. ಇದೇ ಪ್ರದೇಶ ವ್ಯಾಪ್ತಿಯಲ್ಲಿರುವ ಇಗ್ಗೋಡ್ಲು ಬೆಟ್ಟಪೈಸಾರಿಯ ಈ ಬಡ ಕುಟುಂಬಗಳಿಗೆ ಸರ್ಕಾರದಿಂದ ಯಾವುದೇ ನೆರವು ಈವರೆಗೆ ಲಭಿಸಿಲ್ಲ.

ಪ್ರತಿ ಮಳೆಗಾಲದಲ್ಲೂ ಮನೆಯ ಹಿಂಭಾಗ ಮಣ್ಣು ಕುಸಿಯುತ್ತದೆ. ಮನೆಗಳನ್ನು ಖಾಲಿ ಮಾಡಿ ಬೇರೆಡೆಗೆ ತೆರಳಿ ಎಂಬ ಪತ್ರ ಕಂದಾಯ ಇಲಾಖೆಯಿಂದ ಪ್ರತಿ ಮಳೆಗಾಲದಲ್ಲಿ ಬರುತ್ತಿದೆ. ಮೊದಲೇ ಬಡತನದ ಬೇಗೆಯಲ್ಲಿರುವ ಈ ಕುಟುಂಬಗಳು ಎಷ್ಟು ದಿನವೆಂದು ನೆಂಟರಿಷ್ಟರ ಮನೆಯಲ್ಲಿ ತಂಗಲು ಸಾಧ್ಯ? ಕೂಲಿ ಮಾಡಿದರೆ ಮಾತ್ರ ಜೀವನ ಸಾಗುತ್ತದೆ. ಕೂಲಿ ಇಲ್ಲವಾದರೆ ಉಪವಾಸವೇ ಗತಿ. ಇಂತಹ ಪರಿಸ್ಥಿತಿಯಲ್ಲಿ ನೆಂಟರಿಷ್ಟರ ಮನೆಯಲ್ಲಿ ಉಳಿದುಕೊಳ್ಳಲು ಸಾಧ್ಯವೇ? ಎಂಬ ಪ್ರಶ್ನೆ ಇಲ್ಲಿನವರದ್ದು.

ಇಲ್ಲಿರುವ ಪ್ರತಿ ಮನೆಗಳೂ ಅಪಾಯದಂಚಿನಲ್ಲಿಯೇ ಇವೆ. ಮನೆಯ ಹಿಂಬದಿಯ ಬೆಟ್ಟದಿಂದ ಇಳಿಯುವ ನೀರು ಮನೆಯ ಗೋಡೆಯನ್ನು ಶೀತಮಾಡುತ್ತಿದೆ. ಜೋರಾಗಿ ಗಾಳಿ ಬೀಸಿದರೂ ನೆಲಕಚ್ಚುವ ಸ್ಥಿತಿಯಲ್ಲಿ ಅನೇಕ ಮನೆಗಳಿವೆ. ಇವರುಗಳಿಗೆ ಈ ವರೆಗೆ ಪಕ್ಕಾ ಮನೆಯ ಭಾಗ್ಯ ಲಭಿಸಿಲ್ಲ.

ಈ ಗ್ರಾಮದಲ್ಲಿ ೩೦ಕ್ಕೂ ಹೆಚ್ಚು ಪುಟ್ಟಮಕ್ಕಳು, ವಯೋವೃದ್ಧರು ಇದ್ದಾರೆ. ಗ್ರಾಮದ ಮನೆಗಳಿಗೆ ಶೌಚಾಲಯವೂ ಇಲ್ಲ. ಗ್ರಾಮಕ್ಕೆ ತೆರಳಲು ಸೂಕ್ತ ರಸ್ತೆಯೂ ಮರೀಚಿಕೆಯಾಗಿದೆ. ಮನೆಗಳ ಸಮೀಪ ಹರಿಯುವ ತೊರೆಯೊಂದು ಮಳೆಗಾಲದಲ್ಲಿ ಭೋರ್ಗರೆಯುತ್ತದೆ. ಇದರಿಂದ ಉಕ್ಕುವ ನೀರು ಮನೆಯೊಳಗೆ ನುಗ್ಗುತ್ತದೆ.

ಸಮಸ್ಯೆಯ ಬಗ್ಗೆ ಗ್ರಾಮ ಪಂಚಾಯಿತಿಯ ಗಮನ ಸೆಳೆದರೂ ನಿರೀಕ್ಷಿತ ಸ್ಪಂದನ ಸಿಕ್ಕಿಲ್ಲ. ಸುಂಟಿಕೊಪ್ಪ ಹೋಬಳಿ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆದು ಸುಸ್ತಾಗಿದೆ. ಪ್ರತಿ ಮಳೆಗಾಲದಲ್ಲೂ ಭೂ ಕುಸಿತದ ಆತಂಕ ಕಾಡುತ್ತಿದ್ದು, ಇನ್ನಾದರೂ ನಮಗೆ ಪುನರ್ವಸತಿ ಕಲ್ಪಿಸಬೇಕೆಂದು ಪೈಸಾರಿ ನಿವಾಸಿಗಳಾದ ಪವಿತ್ರ, ರಮೇಶ, ಹೇಮಾವತಿ, ಶ್ರೀಧರ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.

ಮಳೆಗಾಲದಲ್ಲಿ ಆತಂಕದ ದಿನಗಳನ್ನು ಎದುರಿಸುತ್ತಿರುವ ಬೆಟ್ಟ ಪೈಸಾರಿ ಕುಟುಂಬಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ಗ್ರಾ.ಪಂ. ಬದ್ಧವಾಗಿದೆ. ಕೊರೊನಾ ಹಿನ್ನೆಲೆ ಆಶ್ರಯ ಕೇಂದ್ರಗಳಿಗೆ ಬರಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮಸ್ಥರ ಮನವೊಲಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮ ವಹಿಸಲಾಗುವುದು. ಮುಂದಿನ ದಿನಗಳಲ್ಲಿ ಪುನರ್ವಸತಿ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಮಾದಾಪುರ ಗ್ರಾ.ಪಂ. ಅಧ್ಯಕ್ಷೆ ಶೀಲಾ ತಿಳಿಸಿದ್ದಾರೆ.