ಸಿದ್ದಾಪುರ, ಆ. ೩: ಕೊರೊನಾ ಸೋಂಕು ಹೆಚ್ಚಾಗುತ್ತಿರುವ ನೆಲ್ಲಿಹುದಿಕೇರಿ ಹಾಗೂ ಅಭ್ಯತ್‌ಮಂಗಲ ಗ್ರಾಮಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭೇಟಿ ನೀಡಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಹಾಗೂ ಟಾಸ್ಕ್ ಫೋರ್ಸ್ ಸಮಿತಿಗೆ ನಿರ್ದೇಶನ ನೀಡಿದರು. ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ಜಿಲ್ಲಾಧಿಕಾರಿಗಳು ಸೋಂಕು ಅಧಿಕವಾಗಿ ಕಂಡು ಬಂದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಧಿಕಾರಿಗಳು ಹಾಗೂ ಟಾಸ್ಕ್ಫೋರ್ಸ್ ಸಮಿತಿಯವರು ಸೋಂಕು ಹರಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು. ಸೋಂಕು ಪತ್ತೆಯಾದ ಮನೆಯ ವರೆಲ್ಲರ ಗಂಟಲ ದ್ರವ ಪರೀಕ್ಷೆ ಮಾಡಿಸಬೇಕು. ಸೋಂಕಿತರ ಮನೆ ಯಿಂದ ಯಾರೂ ಹೊರಬರದಂತೆ ನಿಗಾವಹಿಸಬೇಕು. ಅಲ್ಲದೇ ಸೋಂಕಿತ ಮನೆಯನ್ನು ನಿರ್ಬಂಧಿತ ಪ್ರದೇಶ ವೆಂದು ನಾಮಫಲಕ ಅಳವಡಿಸ ಬೇಕೆಂದರು.

ಅಲ್ಲದೇ ಈ ಗ್ರಾಮಗಳಲ್ಲಿ ಯಾಕೆ ಇಷ್ಟೊಂದು ಪ್ರಕರಣಗಳು ಕಂಡು ಬರುತ್ತಿದೆ ಎಂದು ಟಾಸ್ಕ್ ಫೋರ್ಸ್ ಸದಸ್ಯರ ಬಳಿ ಪ್ರಶ್ನಿಸಿದರು. ಪ್ರಕರಣ ಗಳು ಮತ್ತಷ್ಟು ಹೆಚ್ಚಾಗಿ ಕಂಡುಬAದಲ್ಲಿ ಆ ಭಾಗವನ್ನು ಸಂಪೂರ್ಣವಾಗಿ ಸೀಲ್‌ಡೌನ್ ಮಾಡಲಾಗುವುದು ಎಂದು ಡಿ.ಸಿ. ಎಚ್ಚರಿಕೆ ನೀಡಿದರು. ಕೇರಳ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕು ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಕೇರಳದಿಂದ ಬರುವ ಪ್ರತಿಯೊಬ್ಬರ ಬಗ್ಗೆ ಅಧಿಕಾರಿ ಗಳು ನಿಗಾವಹಿಸ ಬೇಕು. ಅಲ್ಲದೇ ಪ್ರತಿಯೊಬ್ಬರ ಆರ್.ಟಿ.ಪಿ.ಸಿ.ಆರ್ ವರದಿಯನ್ನು ಪರಿಶೀಲಿಸಬೇಕು. ಕಾನೂನು ಉಲ್ಲಂಘನೆ ಮಾಡಿ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸದಿರುವ ಬಗ್ಗೆ ವಿಪತ್ತು ನಿರ್ವಹಣೆ ಕಾಯ್ದೆಯಡಿಯಲ್ಲಿ ಮೊಕದ್ದಮೆ ದಾಖಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಇದಕ್ಕೂ ಮೊದಲು ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಮ್ಮತ್ತಿಯಲ್ಲಿ ತಪಾಸಣಾ ಕೇಂದ್ರ

ಕೇರಳ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳ ರಾಜ್ಯದಿಂದ ಕೊಡಗು ಜಿಲ್ಲೆಗೆ ಬರುವವರನ್ನು ೭೨ ಗಂಟೆಗಳ ಆರ್.ಟಿ.ಪಿ.ಸಿ.ಆರ್ ವರದಿಯನ್ನು ಮಾಕುಟ್ಟ ಚೆಕ್‌ಪೋಸ್ಟ್ ನಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ಆದರೂ ಕೂಡ ಇದೀಗ ವೀರಾಜಪೇಟೆಯಿಂದ ಅಮ್ಮತ್ತಿ ಮಾರ್ಗವಾಗಿ ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ಭಾಗಕ್ಕೆ ಹೆಚ್ಚಿನ ಮಂದಿ ಪ್ರವಾಸಿಗರು ಹಾಗೂ ಇತರರು ಆಗಮಿಸುತ್ತಿದ್ದಾರೆ. ಇವರುಗಳನ್ನು ಮತ್ತೊಮ್ಮೆ ತಪಾಸಣೆ ಮಾಡಲು ಅಮ್ಮತ್ತಿಯಲ್ಲಿ ಒಂದು ತಪಾಸಣಾ ಕೇಂದ್ರವನ್ನು ಪ್ರಾರಂಭಿಸಲಾಗುವು ದೆಂದರು. ಆ ಕೇಂದ್ರದಲ್ಲಿ ದಿನದ ೨೪ ಗಂಟೆಯೂ ಕೂಡ ಅಧಿಕಾರಿಗಳು ಪೊಲೀಸರು ತಪಾಸಣೆ ಮಾಡಲಿದ್ದಾರೆಂದು ಜಿಲ್ಲಾಧಿಕಾರಿ ಚಾರುಲತಾ ತಿಳಿಸಿದರು.

ಪ್ರವಾಹ ಸಂತ್ರಸ್ತರಿಗೆ ಕಾಳಜಿ ಕೇಂದ್ರ

ಜಿಲ್ಲಾಧಿಕಾರಿ ಪ್ರವಾಹಪೀಡಿತ ಪ್ರದೇಶವಾದ ಸಿದ್ದಾಪುರದ ಗುಹ್ಯ ಗ್ರಾಮಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಪ್ರವಾಹ ಪೀಡಿತ ಪ್ರದೇಶದ ನಿವಾಸಿಗಳಿಗೆ ಕಾಳಜಿ ಕೇಂದ್ರಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಅಗತ್ಯ ಕಂಡು ಬಂದಲ್ಲಿ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಿ ಸಂತ್ರಸ್ತರಿಗೆ ಆಶ್ರಯ ನೀಡಲಾಗುವುದು ಎಂದರು.

ಜಿಲ್ಲಾಧಿಕಾರಿಗಳ ಭೇಟಿ ಸಂದರ್ಭದಲ್ಲಿ ಕುಶಾಲನಗರ ತಾಲ್ಲೂಕು ತಹಶೀಲ್ದಾರ್ ಪ್ರಕಾಶ್, ಉಪ ತಹಶೀಲ್ದಾರ್, ಮಧುಸೂದನ್, ಕಂದಾಯ ಪರಿವೀಕ್ಷಕರಾದ ಸಂತೋಷ್, ಗ್ರಾಮ ಲೆಕ್ಕಿಗರಾದ ಸಚಿನ್ ಹಾಗೂ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕಿ ಬಾನುಪ್ರಿಯಾ, ಗ್ರಾಮ ಲೆಕ್ಕಿಗ ಓಮಪ್ಪ ಬಣಾಕರ್, ಪಿಡಿಓ ವಿಶ್ವನಾಥ್, ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜು ಹಾಗೂ ಗ್ರಾ.ಪಂ ಸದಸ್ಯರುಗಳು ಹಾಜರಿದ್ದರು. -ವಾಸು ಎ.ಎನ್.