ಕೂಡಿಗೆ, ಆ. ೩: ಕೂಡಿಗೆ ಗ್ರಾಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪದ ಶುದ್ಧ ಕುಡಿಯುವ ನೀರಿನ ಘಟಕ ಕೇಂದ್ರಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟಕದಲ್ಲಿ ಗಡಸಾದ ನೀರು ಬರುತ್ತಿದೆ ಎಂದು ಸ್ಥಳೀಯರ ದೂರಿನ ಹಿನ್ನೆಲೆ, ಭೇಟಿ ನೀಡಿದ ಸಿಇಓ, ನೇರ ಪೈಪ್ಲೈನ್ ಅಳವಡಿಸಿರುವುದನ್ನು ವೀಕ್ಷಣೆ ಮಾಡಿದ ಅಧಿಕಾರಿಗಳು ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಬದಲಿ ಕೊಳವೆ ಬಾವಿಯನ್ನು ಕೊರೆಸಿ ಅದರಿಂದ ನೀರಿನ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯ ಇಲಾಖೆಯ ಇಂಜಿನಿಯರ್ಗೆ ಸೂಚನೆ ನೀಡಿದರು.
ನಂತರ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ನಡೆದ ರಸ್ತೆ ಕಾಮಗಾರಿಗಳನ್ನು ಪರಿಶೀಲಿಸಿದರು. ಕೂಡಿಗೆ ಮತ್ತು ಹೆಬ್ಬಾಲೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಲಜೀವನ್ ಯೋಜನೆಯ ಕಾಮಗಾರಿಯನ್ನು ಇಲಾಖೆಯ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ಈ ಸಂದರ್ಭ ಜಿ.ಪಂ. ಅಭಿಯಂತರ ಶ್ರೀಕಂಠಯ್ಯ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಸಹಾಯಕ ಕಾರ್ಯಪಾಲಕ ಅಭಿಯಂತರ ವೀರೇಂದ್ರ, ಕೂಡಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಯಿಷಾ ಹೆಬ್ಬಾಲೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಕೇಶ್, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಕಣಿವೆಗೆ ಭೇಟಿ
ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಜಲಜೀವನ್ ಕುಡಿಯುವ ನೀರಿನ ಯೋಜನಾ ಕಾಮಗಾರಿಯನ್ನು ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಪರಿಶೀಲಿಸಿದರು. ಕಾಮಗಾರಿ ಸಂದರ್ಭ ಅಳವಡಿಸುತ್ತಿರುವ ಕುಡಿಯುವ ನೀರಿನ ಪೈಪುಗಳ ಗುಣಮಟ್ಟವನ್ನು ಪರಿಶೀಲಿಸಿದ ಸಿಇಓ ಆಗಸ್ಟ್ ಮಾಸಾಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶ್ರೀಕಂಠಯ್ಯ, ಸಹಾಯಕ ಕಾರ್ಯಪಾಲಕ ಅಭಿಯಂತರ ವೀರೇಂದ್ರ, ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್.ಇ.ರಾಕೇಶ್ ಪಂಚಾಯಿತಿ ಸದಸ್ಯ ಶಿವನಂಜಪ್ಪ ಮೊದಲಾದವರಿದ್ದರು.