ಸೋಮವಾರಪೇಟೆ, ಆ. ೨: ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತಾತ್ಮಕ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ರವೀಂದ್ರನ್ (೫೯) ಅವರು ಹುಣಸೂರು ಸಮೀಪ ನಡೆದ ಕಾರು ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಇಂದು ಬೆಳಿಗ್ಗೆ ತಮ್ಮ ಸಹೋದರಿಯೊಂದಿಗೆ

(ಮೊದಲ ಪುಟದಿಂದ) ಮೈಸೂರಿನಿಂದ ಸೋಮವಾರಪೇಟೆಗೆ ಕಾರಿನಲ್ಲಿ ಆಗಮಿಸುತ್ತಿದ್ದ ಸಂದರ್ಭ ಹುಣಸೂರು ಸಮೀಪದ ಚಿಲ್ಕುಂದ ಎಂಬಲ್ಲಿ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ನೀಲಗಿರಿ ಮರಕ್ಕೆ ಗುದ್ದಿದೆ. ಪರಿಣಾಮ ಕಾರು ಚಾಲನೆ ಮಾಡುತ್ತಿದ್ದ ರವೀಂದ್ರ ಅವರು ತೀವ್ರ ಗಾಯಗೊಂಡಿದ್ದು, ಮೈಸೂರಿಗೆ ಕರೆದೊಯ್ಯುವ ಮಾರ್ಗ ಮಧ್ಯೆ ಅಸುನೀಗಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆ ಇವರ ತಾಯಿ ಕೋವಿಡ್‌ಗೆ ಒಳಗಾಗಿದ್ದು, ಮಡಿಕೇರಿ ಅಸ್ಪತ್ರೆಯಿಂದ ಮೈಸೂರಿಗೆ ಕರೆದೊಯ್ದಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ತಾಯಿ ಮೃತರಾಗಿದ್ದು, ಇವರ ಅಂತ್ಯಕ್ರಿಯೆಗಾಗಿ ರವೀಂದ್ರನ್ ಅವರು ರಜೆಯಲ್ಲಿ ತೆರಳಿದ್ದರು.

ಇಂದು ಮರಳಿ ಕರ್ತವ್ಯಕ್ಕೆ ಹಾಜರಾಗಲು ತಮ್ಮ ಮಾರುತಿ ೮೦೦ ಕಾರಿನಲ್ಲಿ ಮೈಸೂರಿನಿಂದ ಸೋಮವಾರಪೇಟೆಗೆ ಆಗಮಿಸುತ್ತಿದ್ದ ಸಂದರ್ಭ ದುರ್ಘಟನೆ ನಡೆದಿದೆ. ಕಾರಿನ ಮುಂಬದಿ ಕುಳಿತಿದ್ದ ಸಹೋದರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗುಂಡ್ಲುಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದ ರವೀಂದ್ರ ಅವರು ಕಳೆದ ೮ ತಿಂಗಳ ಹಿಂದೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ವರ್ಗವಾಗಿ ಬಂದಿದ್ದರು. ಕುಟಂಬದವರೊAದಿಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಯ ವಸತಿ ಗೃಹದಲ್ಲಿ ವಾಸವಾಗಿದ್ದರು. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಸೋಮವಾರಪೇಟೆ ತಾಲೂಕಿನಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದ ಸಂದರ್ಭ ಉತ್ತಮವಾಗಿ ಕೆಲಸ ನಿರ್ವಹಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದರು. ರವೀಂದ್ರ ಅವರ ನಿಧನಕ್ಕೆ ಇಲ್ಲಿನ ತಾಲೂಕು ಆಸ್ಪತ್ರೆಯ ವೈದ್ಯರುಗಳು ಹಾಗೂ ಸಿಬ್ಬಂದಿಗಳು ಕಂಬನಿ ಮಿಡಿದಿದ್ದಾರೆ.