ಚೆಯ್ಯಂಡಾಣೆ, ಆ. ೨: ಚೆಯ್ಯಂಡಾಣೆ ಸಮೀಪದ ಚೇಲಾವರದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಗ್ರಾಮದ ಪೂಜಾರಿರ ಮಂದಣ್ಣ ಅವರ ಪುತ್ರ ದಸ್ವಿತ್ (೧೪) ಎಂಬ ಬಾಲಕ ಪ್ರಾಣಾಪಾಯದಿಂದ ಪಾರಾದ ಘಟನ ನಡೆದಿದೆ. ತೋಟದಲಿದ್ದ ಕಾಡಾನೆಗಳ ಹಿಂಡು ಬಾಲಕನನ್ನು ಹಿಂಬಾಲಿಸಿದ್ದು, ಭಯಭೀತನಾದ ಬಾಲಕ ದಿಕ್ಕು ತೋಚದೆ ಗಾಬರಿಗೊಂಡು ಓಡಿದ್ದಾನೆ. ಈ ಸಂದರ್ಭ ಬಿದ್ದು ಕೈ-ಕಾಲುಗಳಿಗೆ ಪೆಟ್ಟಾಗಿದೆ. ಗ್ರಾಮಸ್ಥರು ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಅಧಿಕಾರಿಗಳಾದ ಆರ್‌ಎಫ್‌ಓ ದೇವಯ್ಯ, ಸಿಬ್ಬಂದಿಗಳಾದ ಪ್ರಶಾಂತ್ ಕುಮಾರ್, ನಾಗರಾಜ್, ರಘುಶೆಟ್ಟಿ, ಎಪಿಸಿ ಸಿಬ್ಬಂದಿಗಳಾದ ಸುರೇಶ್, ಅಶ್ವತ್, ನಾಣಯ್ಯ, ಭರತ್ ಬಾಲಕನನ್ನು ವೀರಾಜಪೇಟೆ ಸರಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿದರು. ಗ್ರಾಮಸ್ಥರಾದ ಕುಟ್ಟನ, ಮನಿಯಪಂಡ ಕುಟುಂಬಸ್ಥರು ‘ಶಕ್ತಿ’ಯೊಂದಿಗೆ ಮಾತನಾಡಿ; ಚೇಲಾವರ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಪ್ರಾಣ ಹಾನಿ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಕ್ರಮ ಕೈಗೊಂಡು ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಈ ವ್ಯಾಪ್ತಿಯಲ್ಲಿ ಚೇಲಾವರ ಜಲಪಾತ ವೀಕ್ಷಿಸಲು ಪ್ರವಾಸಿಗರು ಹೆಚ್ಚಾಗಿ ಆಗಮಿಸುತ್ತಿದ್ದು, ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕೆಂದು ಸಂಬAಧಿಸಿದ ಅಧಿಕಾರಿಗಳೊಂದಿಗೆ ಕೋರಿಕೊಂಡಿದ್ದಾರೆ.

-ಅಶ್ರಫ್ ಚೆಯ್ಯಂಡಾಣೆ