ಸೋಮವಾರಪೇಟೆ, ಆ. ೨: ಸೋಮವಾರಪೇಟೆಯಿಂದ ತೋಳೂರು ಶೆಟ್ಟಳ್ಳಿಗೆ ಕಂಬಳ್ಳಿ ಮಾರ್ಗವಾಗಿ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಇದನ್ನು ಬದಲಾಯಿಸಿ ಹೊಸಬೀಡು ಮಾರ್ಗದಿಂದ ವಿದ್ಯುತ್ ಸಂಪರ್ಕ ನೀಡಲು ಕ್ರಮ ವಹಿಸಬೇಕೆಂದು ತೋಳೂರುಶೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ವಿವಿಧ ಗ್ರಾಮಾಭಿವೃದ್ಧಿ ಸಮಿತಿಯ ಪ್ರಮುಖರು ಆಗ್ರಹಿಸಿದರು.

ಗ್ರಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷ ಎಂ.ಕೆ. ರುದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೂತಿ, ದೊಡ್ಡತೋಳೂರು, ತೋಳೂರುಶೆಟ್ಟಳ್ಳಿ ಗ್ರಾಮಗಳ ಗ್ರಾಮಾಭಿವೃದ್ಧಿ ಸಮಿತಿ ಪ್ರಮುಖರು ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರು.

ಪ್ರಸ್ತುತ ತೋಳೂರುಶೆಟ್ಟಳ್ಳಿಗೆ ಕಂಬಳ್ಳಿ ಮಾರ್ಗವಾಗಿ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಈ ಮಾರ್ಗದಲ್ಲಿ ಕಾಫಿ ತೋಟ, ಅರಣ್ಯ, ಊರುಡುವೆ ಜಾಗದಲ್ಲಿರುವ ಮರಗಳು ಮಳೆಗಾಲದಲ್ಲಿ ವಿದ್ಯುತ್ ತಂತಿಯ ಮೇಲೆ ಬೀಳುತ್ತಿವೆ. ಇದರಿಂದಾಗಿ ತಿಂಗಳುಗಟ್ಟಲೆ ತೋಳೂರುಶೆಟ್ಟಳ್ಳಿಗೆ ವಿದ್ಯುತ್ ಇಲ್ಲವಾಗುತ್ತದೆ. ಇದನ್ನು ತಪ್ಪಿಸಲು ಮುಖ್ಯರಸ್ತೆ ಬದಿಯಲ್ಲಿಯೇ ಹೊಸಬೀಡು ಮಾರ್ಗವಾಗಿ ವಿದ್ಯುತ್ ಸಂಪರ್ಕ ನೀಡಲು ಇಲಾಖೆ ಕ್ರಮ ವಹಿಸಬೇಕೆಂದು ಪ್ರಮುಖರು ಒತ್ತಾಯಿಸಿದರು.

ಇದೇ ಬೇಡಿಕೆಯನ್ನು ಮುಂದಿಟ್ಟುಕೊAಡು ಈಗಾಗಲೇ ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ಬಹಿಷ್ಕರಿಸಲಾಗಿತ್ತು. ಆ ಸಂದರ್ಭ ಭೇಟಿ ನೀಡಿದ ತಹಶೀಲ್ದಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ ಈವರೆಗೆ ಸಮಸ್ಯೆ ಬಗೆಹರಿದಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಮಳೆಗಾಲದಲ್ಲಿ ವಿದ್ಯುತ್ ಇಲ್ಲದೇ ಈ ಭಾಗದ ಮಂದಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಕನಿಷ್ಟ ಮೊಬೈಲ್ ಬ್ಯಾಟರಿಗಳನ್ನೂ ಚಾರ್ಜ್ ಮಾಡಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳ ಆನ್‌ಲೈನ್ ತರಗತಿಗೂ ಸಮಸ್ಯೆಯಾಗಿದೆ. ಕತ್ತಲಿನಲ್ಲಿಯೇ ವಿದ್ಯಾರ್ಥಿಗಳು ಓದಬೇಕಿದೆ. ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸಂಬAಧಿಸಿದ ಇಲಾಖೆಯ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ಸಭೆಯಲ್ಲಿದ್ದವರು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ಹೊಸಬೀಡು ಮಾರ್ಗವಾಗಿ ೧೧ ಕೆ.ವಿ. ವಿದ್ಯುತ್ ಮಾರ್ಗವನ್ನು ಅಳವಡಿಸಿ ತೋಳೂರುಶೆಟ್ಟಳ್ಳಿಗೆ ವಿದ್ಯುತ್ ಒದಗಿಸಬೇಕು. ಈ ಬಗ್ಗೆ ಇಲಾಖೆಯ ಮೇಲಧಿಕಾರಿಗಳು ಗಮನ ಹರಿಸಬೇಕು. ತಪ್ಪಿದಲ್ಲಿ ಮುಂದಿನ ಹೋರಾಟದ ಬಗ್ಗೆ ರೂಪುರೇಷೆ ಸಿದ್ಧಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಂಜುಳಾ, ಕೂತಿ ಗ್ರಾಮಾಧ್ಯಕ್ಷ ಹೆಚ್.ಡಿ. ಮೋಹನ್, ದೊಡ್ಡತೋಳೂರು ಗ್ರಾಮಾಧ್ಯಕ್ಷ ಎ.ಜೆ. ಕೃಷ್ಣಪ್ಪ ಸೇರಿದಂತೆ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.