(ವಿಶೇಷ ವರದಿ:
ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಆ. ೨: ಕೊಡಗಿನಲ್ಲಿ ಹೆಸರು ವಾಸಿಯಾಗಿ, ವಾಣಿಜ್ಯ ನಗರವೆಂದು ಪ್ರಖ್ಯಾತಿ ಪಡೆದಿರುವ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಾ. ೪ ರಂದು ಚುನಾವಣೆ ನಡೆಯಲಿದೆ.
ಈ ಹಿಂದೆ ಇದ್ದಂತಹ ಆಡಳಿತ ಮಂಡಳಿಯ ಅವಧಿ ಜೂನ್ ೮ಕ್ಕೆ ಮುಕ್ತಾಯಗೊಂಡಿತ್ತು. ಆದರೆ ಕೋವಿಡ್ ೧೯ ಹಿನ್ನೆಲೆಯಲ್ಲಿ ಚುನಾವಣೆ ನಡೆದಿರಲಿಲ್ಲ. ಪಂಚಾಯಿತಿಗೆ ನೋಡಲ್ ಅಧಿಕಾರಿ ಜವಾಬ್ದಾರಿ ನಿಭಾಯಿಸಿದ್ದರು. ಇದೀಗ ಸರ್ಕಾರದ ಸುತ್ತೋಲೆಯಂತೆ ತಾ. ೪ ರಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಲಿವೆ ಎಂದು ಚುನಾವಣಾ ಅಧಿಕಾರಿಗಳಾದ ತಹಶೀಲ್ದಾರ್ ಯೋಗಾನಂದ್ ಸದಸ್ಯರಿಗೆ ಪತ್ರ ಕಳುಹಿಸಿದ್ದಾರೆ. ೨೧ ಸದಸ್ಯರ ಸಂಖ್ಯಾ ಬಲದ ಈ ಪಂಚಾಯಿತಿಯಲ್ಲಿ ಈಗಾಗಲೇ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ೧೨ ಸ್ಥಾನಗಳಲ್ಲಿ ಜಯಗಳಿಸಿ ಸ್ಪಷ್ಟ ಬಹುಮತ ಗಳಿಸಿದ್ದಾರೆ. ಉಳಿದಂತೆ ೯ ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿ ವಿರೋಧ ಪಕ್ಷವಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಮಹಿಳಾ ಮೀಸಲಾತಿ
ಮೊದಲ ಅವಧಿಯ ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಅ ಮಹಿಳೆಗೆ ಮೀಸಲಾಗಿದೆ ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಪ್ರಕಟವಾಗಿವೆ. ಪಂಚಾಯಿತಿಯಲ್ಲಿ ಇಬ್ಬರು ಮಹಿಳೆಯರು ಬಹುದೊಡ್ಡ ಜವಾಬ್ದಾರಿ ನಿಭಾಯಿಸಲಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಮೊದಲ ಬಾರಿಗೆ ಗೆಲುವು ಸಾಧಿಸಿದ ನಾಲ್ವರು ಮಹಿಳೆಯರು ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿ ಇದ್ದಾರೆ. ಎರಡನೇ ವಾರ್ಡ್ನಿಂದ ಜಿ.ಕೆ. ಗೀತಾ ನಾಲ್ಕನೇ ವಾರ್ಡ್ನಿಂದ ಸೌಮ್ಯ ಬಾಲು, ಏಳನೇ ವಾರ್ಡ್ನಿಂದ ಪುಷ್ಪ ಮನೋಜ್ ಹಾಗೂ ಎಂಟನೇ ವಾರ್ಡ್ನಿಂದ ಚೈತ್ರ ಬಿ. ಚೇತನ್ ಗೆಲವು ಸಾಧಿಸಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನೀಡುತ್ತಿದ್ದಾರೆ.
ಪ್ರಮುಖವಾಗಿ ನಾಲ್ಕನೇ ವಾರ್ಡ್ನಿಂದ ಜಯಗಳಿಸಿದ ಅನುಭವಿ ರಾಜಕಾರಣಿ, ಈ ಹಿಂದೆ ಪಂಚಾಯಿತಿ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದ ಹಿರಿಯರಾದ ಮನ್ನಕ್ಕಮನೆ ಸೌಮ್ಯ ಬಾಲು ಹಾಗೂ ಎಂಟನೇ ವಾರ್ಡ್ನಿಂದ ಇದೇ ಮೊದಲ ಬಾರಿಗೆ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ಚೈತ್ರ ಇವರಿಬ್ಬರ ನಡುವೆ ಅಧ್ಯಕ್ಷಗಿರಿಗೆ ತೀವ್ರ ಸ್ವರೂಪದ ಪೈಪೋಟಿ ಕಂಡುಬAದಿವೆ. ಪಕ್ಷದ ವರಿಷ್ಠರು ಅಧ್ಯಕ್ಷ ಸ್ಥಾನ ಯಾರಿಗೆ ಎಂದು ಚುನಾವಣೆಯ ದಿನದಂದು ಬೆಳಿಗ್ಗೆ ನಡೆಯುವ ಸಭೆಯಲ್ಲಿ ನಿರ್ಧಾರ ಮಾಡಲಿದ್ದಾರೆ. ಅನುಭವವನ್ನು ಆಧಾರವಾಗಿಟ್ಟುಕೊಂಡು ಪಾರದರ್ಶಕ ಆಡಳಿತ ನೀಡುವ ಸಲುವಾಗಿ ಕಳೆದ ಅವಧಿಯಲ್ಲಿ ಮಾಡಿದ ತಪ್ಪನ್ನು ಮರುಕಳಿಸದಂತೆ ಎಚ್ಚರಿಕೆ ವಹಿಸಿ ಉತ್ತಮ ರೀತಿಯಲ್ಲಿ ಅಧಿಕಾರ ನಡೆಸುವವರಿಗೆ, ಎಲ್ಲರನ್ನೂ ಒಂದಾಗಿ ಕೊಂಡೊಯ್ಯುವ ಮಹಿಳೆಗೆ ಮೊದಲ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ನೀಡಲು ವರಿಷ್ಠರು ಯೋಜನೆ ರೂಪಿಸಿದ್ದಾರೆ. ರಾಜಕೀಯ ಅನುಭವವಿದ್ದು, ಈ ಹಿಂದೆ ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಸೌಮ್ಯ ಬಾಲು ಅವರಿಗೆ ಅಧ್ಯಕ್ಷ ಸ್ಥಾನ ನೀಡಲು ವಾರ್ಡ್ನ ಮತದಾರರು, ಮುಖಂಡರು ಬಿಜೆಪಿ ಹೈಕಮಾಂಡ್ಗೆ ಒತ್ತಡ ತರುತ್ತಿದ್ದಾರೆ.
ಕಾಂಗ್ರೆಸ್ ಭದ್ರಕೋಟೆಯಾಗಿದ್ದ ನಾಲ್ಕನೇ ವಾರ್ಡ್ನಲ್ಲಿನ ಮತದಾರರು ಚುನಾವಣೆ ಸಂದರ್ಭ ಮನ್ನಕ್ಕಮನೆ ಸೌಮ್ಯ ಬಾಲು ಅವರನ್ನು ಗೆಲ್ಲಿಸಿ ಕಳುಹಿಸಿಕೊಡುತ್ತೇವೆ, ಅಧ್ಯಕ್ಷಗಿರಿ ನಮ್ಮ ವಾರ್ಡ್ಗೆ ನೀಡಬೇಕು ಎಂದು ಬಿಜೆಪಿ ಪಕ್ಷದ ನಾಯಕರಲ್ಲಿ ಮಾತು ಪಡೆದಿದ್ದರು. ಅದೇ ರೀತಿಯಲ್ಲಿ ವಾರ್ಡ್ನ ಮತದಾರರು ಸೌಮ್ಯ ಬಾಲು ಅವರೊಂದಿಗೆ ಇನ್ನುಳಿದ ಹಕೀಮ್ ಹಾಗೂ ರತಿ ಅಚ್ಚಪ್ಪನವರನ್ನು ಗೆಲ್ಲಿಸಿ ಕಳುಹಿಸಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದರು.
ಉಳಿದAತೆ ಎಂಟನೇ ವಾರ್ಡ್ನಿಂದ ಚೈತ್ರ ಬಿ. ಚೇತನ್ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಚೈತ್ರ ಕೂಡ ಅಧ್ಯಕ್ಷ ಸ್ಥಾನಕ್ಕೆ ಲಾಭಿ ಆರಂಭಿಸಿದ್ದಾರೆ. ಉಳಿದಂತೆ ಅವಕಾಶ ಕೊಟ್ಟರೆ ಎರಡನೇ ವಾರ್ಡ್ನಿಂದ ಜಯಗಳಿಸಿದ ಜಿ.ಕೆ. ಗೀತಾ ಏಳನೇ ವಾರ್ಡ್ನಲ್ಲಿ ಪುಷ್ಪ ಮನೋಜ್ ಜವಾಬ್ದಾರಿ ನಿಭಾಯಿಸುವ ಯೋಜನೆ ರೂಪಿಸಿದ್ದಾರೆ.
ವರಿಷ್ಠರ ತೀರ್ಮಾನವೇ ಅಂತಿಮವಾಗಿದ್ದು, ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನು ಬಿಜೆಪಿ ಪಕ್ಷದ ವರಿಷ್ಠರು ಕೊನೆ ಘÀಳಿಗೆಯಲ್ಲಿ ಅಂತಿಮ ಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.