ಗೋಣಿಕೊಪ್ಪಲು, ಆ. ೨: ನೂತನ ಸಚಿವ ಸಂಪುಟದ ಮಂತ್ರಿ ಮಂಡಲದಲ್ಲಿ ಕೊಡಗಿಗೆ ಮಂತ್ರಿ ಸ್ಥಾನ ನೀಡುವ ಮೂಲಕ ಪ್ರಾತಿನಿಧ್ಯ ನೀಡಬೇಕೆಂದು ಪೊನ್ನಂಪೇಟೆ ನಾಗರಿಕ ವೇದಿಕೆಯ ಆಡಳಿತ ಮಂಡಳಿ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಪೊನ್ನಂಪೇಟೆಯ ನಾಗರಿಕರ ವೇದಿಕೆ ಕಚೇರಿಯಲ್ಲಿ ಸಭೆ ಸೇರಿದ ಪದಾಧಿಕಾರಿಗಳು ಈ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದಾರೆ.

ನಾಗರಿಕ ವೇದಿಕೆಯ ಉಪಾಧ್ಯಕ್ಷ ಚೆಪ್ಪುಡೀರ ಕೆ. ಸೋಮಯ್ಯ ಮಾತನಾಡಿ, ಈ ಹಿಂದೆ ಕೊಡಗು ಜಿಲ್ಲೆಗೆ ಮೂರು ಮಂತ್ರಿ ಸ್ಥಾನವನ್ನು ನೀಡಲಾಗಿತ್ತು. ಇದೀಗ ಹಲವಾರು ವರ್ಷಗಳಿಂದ ಕೊಡಗಿಗೆ ಮಂತ್ರಿ ಸ್ಥಾನ ಇಲ್ಲದಂತಾಗಿದೆ. ಇದರಿಂದ ಕೊಡಗಿನ ಜನತೆ ನಿರಾಶೆಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಪ್ರಸ್ತುತ ನಡೆಯುವ ವಿದ್ಯಾಮಾನದಲ್ಲಿ ಕೊಡಗಿಗೆ ಆದ್ಯತೆ ನೀಡುವ ಮೂಲಕ ಮಂತ್ರಿಸ್ಥಾನ ನೀಡಬೇಕೆಂದು ಆಗ್ರಹಿಸಿದರು.

ಹಿರಿಯ ನಿರ್ದೇಶಕ ಮೂಕಳೇರ ಕುಶಾಲಪ್ಪ ಮಾತನಾಡಿ, ಕೊಡಗಿಗೆ ಮಂತ್ರಿ ಸ್ಥಾನವಿಲ್ಲದೆ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಕೊಡಗಿನಿಂದ ಸರ್ಕಾರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹಣವಾಗುತ್ತಿದೆ. ಕೊಡಗಿನ ಅಭಿವೃದ್ಧಿಗೆ ಈ ಬಾರಿ ಮಂತ್ರಿಮAಡಲದಲ್ಲಿ ಸ್ಥಾನ ನೀಡಬೇಕೆಂದು ಮನವಿ ಮಾಡಿದರು.

ನಾಗರಿಕ ವೇದಿಕೆಯ ಕಾನೂನು ಸಲಹೆಗಾರರು, ವಕೀಲ ಮಂತ್ರAಡ ಪಿ. ಅಪ್ಪಚ್ಚು ಮಾತನಾಡಿ ಪೊನ್ನಂಪೇಟೆ ನೂತನ ತಾಲೂಕು ರಚನೆಗೊಂಡು ಹಲವಾರು ಸಮಯ ಕಳೆದಿದೆ. ಆದರೆ ಕಚೇರಿಗೆ ಬೇಕಾದ ಸಿಬ್ಬಂದಿಗಳನ್ನು ಇಲ್ಲಿಯತನಕ ನೇಮಕ ಮಾಡಿಲ್ಲ. ಜಿಲ್ಲಾಡಳಿತ ಹಾಗೂ ಶಾಸಕರಿಗೆ ಈಗಾಗಲೆ ಪತ್ರ ಬರೆದು ಗಮನ ಸೆಳೆಯಲಾಗಿದೆ. ಆದಷ್ಟು ಬೇಗನೇ ಇಲ್ಲಿಗೆ ಸಿಬ್ಬಂದಿಗಳನ್ನು ನೇಮಕಗೊಳಿಸಿ ಸಾರ್ವಜನಿಕರ ಸೇವೆಗೆ ಅನುಕೂಲ ಕಲ್ಪಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.

ನಿರ್ದೇಶಕ ಕಳ್ಳೆಂಗಡ ಎಂ. ಗಣಪತಿ ಮಾತನಾಡಿ, ನೂತನ ತಾಲೂಕು ಕಚೇರಿಗೆ ಭೂ ಮಾಪನ ಶಾಖೆ ಹಾಗೂ ಆಹಾರ ಇಲಾಖೆ, ತುರ್ತಾಗಿ ಕೆಲಸ ನಿರ್ವಹಿಸಬೇಕಾಗಿದೆ. ಇದರಿಂದಾಗಿ ಬಡಜನತೆಗೆ ವೀರಾಜಪೇಟೆಗೆ ತೆರಳುವುದು ತಪ್ಪಿದಂತಾಗುತ್ತದೆ ಎಂದರು. ಗೌರವ ಕಾರ್ಯದರ್ಶಿ ವಿ.ಎ. ಸೆಲ್ವರಾಜ್ ನೂತನ ತಾಲೂಕು ರಚನೆಗೆ ನಾಗರಿಕ ವೇದಿಕೆ ಹಾಗೂ ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿ ಹಗಲಿರುಳು ಶ್ರಮಿಸಿದೆ. ಆದರೆ ತಾಲೂಕು ರಚನೆಗೊಂಡ ನಂತರ ನಿರೀಕ್ಷಿತ ಪ್ರಮಾಣದಲ್ಲಿ ಫಲಿತಾಂಶ ಲಭಿಸಿಲ್ಲ. ಬಡಜನತೆಯ ಕಷ್ಟಗಳಿಗೆ ದೂರದ ವೀರಾಜಪೇಟೆ ತಾಲೂಕು ಕಚೇರಿಗೆ ತೆರಳುವುದು ತಪ್ಪಿಲ್ಲ. ನೂತನ ತಾಲೂಕು ಕಚೇರಿಯಲ್ಲಿ ಕೇವಲ ಶಿರಸ್ತೇದಾರ್, ಓರ್ವ ಪ್ರಥಮದರ್ಜೆ ಸಹಾಯಕ ಹೊರತು ಪಡಿಸಿದ್ದಲ್ಲಿ ಬೇರೆ ಯಾವುದೇ ಸಿಬ್ಬಂದಿಗಳು ಕಂಡು ಬರುತ್ತಿಲ್ಲ. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ಪ್ರಗತಿಪರ ನಾಗರಿಕ ವೇದಿಕೆ ಒತ್ತಾಯ

ಗೋಣಿಕೊಪ್ಪ ವರದಿ: ಕೊಡಗಿನ ಸಮಸ್ಯೆ ಅರಿತುಕೊಂಡಿರುವ ಇಬ್ಬರು ಶಾಸಕರಿಗೂ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಸ್ಥಾನ ನೀಡಬೇಕು ಎಂದು ಪ್ರಗತಿಪರ ನಾಗರಿಕ ವೇದಿಕೆ ಅಧ್ಯಕ್ಷ ಮಳವಂಡ ಅರವಿಂದ್ ಕುಟ್ಟಪ್ಪ ಒತ್ತಾಯಿಸಿದ್ದಾರೆ.

ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಯಬೇಕಿದೆ. ಇದು ಸಂಪೂರ್ಣ ವಾಗಿ ಅನುಷ್ಠಾನಗೊಳ್ಳಬೇಕಾದರೆ, ಸ್ಥಳೀಯರಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಶಾಸಕರಾದ ಮಂಡೇಪAಡ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ ಇಬ್ಬರಿಗೂ ಮಂತ್ರಿ ಸ್ಥಾನ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

೫ ತಾಲೂಕು ಹೊಂದಿರುವ ಜಿಲ್ಲೆಗೆ ಇಬ್ಬರು ಶಾಸಕರಿಂದ ಅಭಿವೃದ್ಧಿ ಪಡಿಸಲು ತೊಂದರೆಯಾಗುತ್ತದೆ. ಮಂತ್ರಿ ಸ್ಥಾನ ನೀಡುವುದರಿಂದ ಅನುದಾನ ತರಲು ಸಹಾಯವಾಗುತ್ತದೆ. ಇಲ್ಲಿನ ಬೆಳೆನಾಶ, ವನ್ಯಪ್ರಾಣಿಗಳಿಂದಾಗುತ್ತಿರುವ ತೊಂದರೆ, ಜಾನುವಾರುಗಳ ಜೀವಹಾನಿ, ಮೂಲಸೌಕರ್ಯ ಒದಗಿಸಲು ಶಾಸಕರುಗಳಿಗೆ ಮೂಲ ಮಾಹಿತಿ ಇರುವುದರಿಂದ ಈ ಬಗ್ಗೆ ಉತ್ತಮ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದರು.

ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ ನಾಯ್ಡು ಮಾತನಾಡಿ, ಕೊರೊನಾ ಮಹಾಮಾರಿ ಸಂದರ್ಭ ಶಾಸಕರುಗಳ ನಿರ್ವಹಣೆ, ಪ್ರವಾಹ ತುರ್ತು ಸಂದರ್ಭದಲ್ಲಿ ಸ್ಪಂದನ ಮೆಚ್ಚುವಂತದ್ದು. ಸ್ಥಳೀಯವಾಗಿ ಮಂತ್ರಿಸ್ಥಾನ ಇದ್ದಾಗ ಹೆಚ್ಚು ಬೇಡಿಕೆ ಇಟ್ಟು ಅಭಿವೃದ್ಧಿ ಪಡಿಸಲು ಅವಕಾಶವಿದೆ. ಇದನೆಲ್ಲಾ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಗೌರವ ಅಧ್ಯಕ್ಷ ಕೆ.ಆರ್. ಬಾಲಕೃಷ್ಣರೈ ಮಾತನಾಡಿ, ಹೊರಗಿನ ವರಿಗೆ ಉಸ್ತುವಾರಿ ಸ್ಥಾನ ನೀಡುತ್ತಿರುವುದರಿಂದ ಹೆಚ್ಚು ಪ್ರಯೋಜನವಾಗುತ್ತಿಲ್ಲ. ಸಮಗ್ರ ಅಭಿವೃದ್ಧಿಯ ಚಿಂತನೆ ಬೇಕಿದೆ. ಗುಡ್ಡಗಾಡು ಪ್ರದೇಶ ಹೊಂದಿರುವ ಜಿಲ್ಲೆಗೆ ಸ್ಥಳೀಯ ಮಂತ್ರಿಗಳ ಅಗತ್ಯತೆ ಇದೆ. ಈ ಬಗ್ಗೆ ಗಂಭೀರ ಚಿಂತನೆಯಾಗಬೇಕು. ರಾಷ್ಟç, ರಾಜ್ಯಮಟ್ಟದ ನಾಯಕರುಗಳು ಜಿಲ್ಲೆಯ ಜನರ ಬೇಡಿಕೆ ಎಂದು ಪರಿಗಣಿಸಬೇಕು ಎಂದರು.