ಸಿದ್ದಾಪುರ, ಆ. ೨: ವೀರಾಜ ಪೇಟೆ ಹಾಗೂ ಅಮ್ಮತ್ತಿ ಭಾಗದ ವಲಯ ಅರಣ್ಯ ಪ್ರದೇಶದ ವ್ಯಾಪ್ತಿಗೆ ಒಳಪಡುವ ಅಮ್ಮತ್ತಿ ಒಂಟಿಯAಗಡಿ, ಬೈರಂಬಾಡ, ಕಣ್ಣಂಗಾಲ ಭಾಗದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ನಡೆಸಲಾಯಿತು.
ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಸೇರಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾರ್ಯಾಚರಣೆಯ ಮೂಲಕ ಅರಣ್ಯಕ್ಕೆ ಅಟ್ಟಿದರು. ವೀರಾಜಪೇಟೆ ವಲಯ ಅರಣ್ಯ ಪ್ರದೇಶಕ್ಕೆ ಸೇರಿರುವ ಅಮ್ಮತ್ತಿ ಭಾಗದ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟು ದಾಂಧಲೆ ನಡೆಸುತ್ತಿವೆ. ಕೃಷಿ ಫಸಲುಗಳನ್ನು ನಾಶಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಈ ಮೇರೆಗೆ ಅರಣ್ಯ ಇಲಾಖಾ ಅಧಿಕಾರಿಗಳು ಬೆಳಗ್ಗಿನಿಂದಲೇ ಕಾರ್ಯಾಚರಣೆ ಕೈಗೊಂಡರು. ಕಾರ್ಯಾಚರಣೆ ಸಂದರ್ಭ ಕಾಫಿ ತೋಟಗಳಲ್ಲಿ ಮರಿ ಆನೆಗಳು ಸೇರಿದಂತೆ ಹತ್ತಕ್ಕೂ ಅಧಿಕ ಕಾಡಾನೆಗಳು ಕಂಡು ಬಂದವು ಎಂದು ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ ತಿಳಿಸಿದರು. ಕಾಡಾನೆಗಳನ್ನು ಓಡಿಸಲು ಪಟಾಕಿ ಸಿಡಿಸುವ ಸಂದರ್ಭ ಕೋಪಗೊಂಡ ಕಾಡಾನೆಗಳು ಕಾರ್ಯಾಚರಣೆ ತಂಡವನ್ನು ಬೆನ್ನಟ್ಟಲು ಪ್ರಯತ್ನಿಸಿದವು ಎನ್ನಲಾಗಿದೆ. ಕಾಡಾನೆಗಳನ್ನು ಕಾರ್ಯಾಚರಣೆ ನಡೆಸಿ ಅರಣ್ಯಕ್ಕೆ ಅಟ್ಟಿದ್ದರೂ ಕೂಡ ಮರಳಿ ರಾತ್ರಿ ಸಮಯದಲ್ಲಿ ಮರಿ ಆನೆಗಳೊಂದಿಗೆ ಹಿಂತಿರುಗಿ ಕಾಫಿ ತೋಟಕ್ಕೆ ಲಗ್ಗೆಯಿಡುತ್ತಾ ದಾಂಧಲೆ ನಡೆಸುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಭತ್ತದ ಕೃಷಿ ಮಾಡಿದ ಗದ್ದೆಗಳಿಗೂ ಕೂಡ ಕಾಡಾನೆಗಳು ಲಗ್ಗೆಯಿಡುತ್ತಿದ್ದು, ಕೃಷಿ ಮಾಡಿದ ಭತ್ತದ ಪೈರುಗಳನ್ನು ನಾಶಗೊಳಿಸುತ್ತಿವೆೆ ಎಂದು ಕೃಷಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಕಾಡಾನೆ ಹಾವಳಿಗಳನ್ನು ಶಾಶ್ವತವಾಗಿ ತಡೆಗಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕಾರ್ಯಾಚರಣೆ ಸಂದರ್ಭದಲ್ಲಿ ವೀರಾಜಪೇಟೆ ತಾಲೂಕು ಡಿಸಿಎಫ್ ಚಕ್ರಪಾಣಿ ಮಾರ್ಗದರ್ಶನದಲ್ಲಿ ಎಸಿಎಫ್ ರೋಶ್ನಿ, ಉಪವಲಯ ಅರಣ್ಯಾಧಿP Áರಿ ಸಂಜಿತ್ ಸೋಮಯ್ಯ, ಇಲಾಖಾ ಸಿಬ್ಬಂದಿಗಳು ಮತ್ತು ಆರ್.ಆರ್.ಟಿ ತಂಡದ ಸಿಬ್ಬಂದಿಗಳು ಭಾಗವಹಿಸಿ ದ್ದರು. ಕಾರ್ಯಾಚರಣೆಗೆ ಗ್ರಾಮಸ್ಥರು ಸಹಕಾರ ನೀಡಿದರು. -ವಾಸು ಎ.ಎನ್