ಮಡಿಕೇರಿ, ಜು. ೩೧: ನೆರೆಯ ಕೇರಳ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಉಲ್ಬಣವಾಗುತ್ತಿರುವ ಬೆನ್ನಲ್ಲೇ ಕೊಡಗು ಜಿಲ್ಲೆಯ ಗಡಿ ಪ್ರದೇಶಗಳಲ್ಲಿನ ತಪಾಸಣೆಯನ್ನು ಜಿಲ್ಲಾಡಳಿತ ಮತ್ತಷ್ಟು ಬಿಗಿಗೊಳಿಸಿದೆ. ಕೇರಳ ಗಡಿಯಲ್ಲಿ ಬರುವ ಜಿಲ್ಲೆಯ ತಪಾಸಣಾ ಗೇಟ್ಗಳಲ್ಲಿ ಕೇರಳದಿಂದ ಆಗಮಿಸುವವರಿಗೆ ಈಗಾಗಲೇ ಇರುವ ನಿರ್ಬಂಧ ಮುಂದುವರೆದಿದ್ದು, ತಪಾಸಣೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಡಳಿತ ಕ್ರಮಕೈಗೊಂಡಿದೆ. ಕೇರಳದಲ್ಲಿ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವೂ ಈ ಬಗ್ಗೆ ಸೂಕ್ತ ನಿರ್ದೇಶನ ನೀಡಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ. ಜಿಲ್ಲೆಯ ಗಡಿಗಳಾದ ಕರಿಕೆ, ಕುಟ್ಟ, ಮಾಕುಟ್ಟ ಗೇಟ್ಗಳಲ್ಲಿ ಹೆಚ್ಚಿನ ನಿಗಾವಹಿಸಲಾಗುತ್ತಿದೆ. ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯ ಹಾಗೂ ಒಂದು ಡೋಸ್ ಲಸಿಕೆ ಪಡೆದಿರುವವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿರುವುದಾಗಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದ್ದಾರೆ.
ಕರಿಕೆ: ನಿಯಂತ್ರಣಕ್ಕೆ ಬಾರದ ಕೊರೊನಾ
ಜಿಲ್ಲೆಯ ಗಡಿ ಗ್ರಾಮ ಕರಿಕೆಯಲ್ಲಿ ಪಾಸಿಟಿವ್ ಸಂಖ್ಯೆ ನಿರಂತರ ಏರಿಕೆ ಯಾಗುತ್ತಿರುವ ಹಿನೆÀ್ನಲೆಯಲ್ಲಿ ಹೊರಜಿಲ್ಲಾ ಪ್ರಯಾಣಿಕರು ಹಾಗೂ ವಾಹನಗಳಿಗೆ ಜಿಲ್ಲೆಯ ಗಡಿ ಪ್ರವೇಶಿಸಲು ನೆಗೆಟಿವ್ ಪ್ರಮಾಣ ಪತ್ರ ಅಥವಾ ಲಸಿಕಾ ಪ್ರಮಾಣಪತ್ರ ಕಡ್ಡಾಯ ಮಾಡಲಾಗಿದೆ. ಗ್ರಾಮದಲ್ಲಿ ಹಾಗೂ ನೆರೆಯ ಕೇರಳ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ಕಾಣಿಸಿಕೊಳ್ಳುತ್ತಿರುವ ಪರಿಣಾಮ ಎರಡು ದಿನಗಳ ಹಿಂದೆ ಜಿಲ್ಲೆಯ ಗಡಿ ಚೆಕ್ ಪೋಸ್ಟ್ ಕರಿಕೆಗೆ ದಿಢೀರ್ ಭೇಟಿ ನೀಡುವ ಮೂಲಕ ಅಲ್ಲಿನ ಭದ್ರತಾ ವ್ಯವಸ್ಥೆ ಪರಿಶೀಲನೆ ನಡೆಸಿ ಇದುವರೆಗೂ ನಿಯಂತ್ರಣಕ್ಕೆ ಬಾರದ ಹಿನೆÀ್ನಲೆಯಲ್ಲಿ ಜಿಲ್ಲೆಯ ಗಡಿಗಳಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ನಡೆಸಲು ಆದೇಶ ಹೊರಡಿಸಿ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಸೂಚನೆ ನೀಡಿದ್ದರು. ಇದರಿಂದ ಎರಡು ದಿನಗಳಿಂದ ಗಡಿ ಗ್ರಾಮ ಕರಿಕೆ ಚೆಕ್ ಪೋಸ್ಟ್ನಲ್ಲಿ ತಪಾಸಣೆ ಚುರುಕುಗೊಂಡಿದೆ.
ಇದೀಗ ಗ್ರಾಮದಲ್ಲಿ ಮೂವತ್ತ ನಾಲ್ಕು ಸಕ್ರಿಯ ಪ್ರಕರಣಗಳಿದ್ದು, ಸ್ಥಳೀಯರಿಗೆ ತುರ್ತು ಅಗತ್ಯಕ್ಕೆ ಮಾತ್ರವೇ ಪಾಣತ್ತೂರುಗೆ ತೆರಳಲು ಅನುಮತಿ ನೀಡಿದೆ. ಅಲ್ಲದೆ ಗ್ರಾಮದಲ್ಲಿ ಲಸಿಕೆ ಪಡೆಯಲು ಶೇ.೬೦ರಷ್ಟು ಜನರು ಪ್ರಥಮ ಡೋಸ್ ಪಡೆಯಲು ಬಾಕಿ ಇದ್ದು, ಎರಡನೇಯ ಡೋಸ್ ಪಡೆಯಲು ಕೂಡ ಪರದಾಡುವಂತಾಗಿದೆ. ಜಿಲ್ಲಾಡಳಿತ ಲಸಿಕೆಯನ್ನು ಪೂರೈಸಲು ಕೂಡ ಗಮನಹರಿಸಬೇಕಾಗಿದೆ.
(ಮೊದಲ ಪುಟದಿಂದ)
ಮಾಕುಟ್ಟ
ಮಾಕುಟ್ಟ ಗಡಿಯಲ್ಲೂ ಬಿಗಿ ತಪಾಸಣೆ ನಡೆಯುತ್ತಿದೆ. ಸ್ಥಳೀಯ ಪೊಲೀಸರು, ಕಂದಾಯ, ಆರೋಗ್ಯ ಇಲಾಖೆಯ ಸಿಬ್ಬಂದಿ ಈ ಬಗ್ಗೆ ನಿಗಾವಹಿಸಿದ್ದಾರೆ. ಇಂದು ತಪಾಸಣೆ ಸಂದರ್ಭ ಜನರು ಹಾಗೂ ವಾಹನಗಳು ಸಾಲುಗಟ್ಟಿ ನಿಂತಿದ್ದು, ಕಂಡುಬAದಿತು. ಜಿಲ್ಲಾ ಆರೋಗ್ಯಾಧಿಕಾರಿ ಮೋಹನ್ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿದ್ದರು.
ಕುಟ್ಟ
ದಕ್ಷಿಣ ಕೊಡಗಿನ ಮತ್ತೊಂದು ಗಡಿಭಾಗವಾಗಿರುವ ಕುಟ್ಟ ಗೇಟ್ನಲ್ಲೂ ಇದೇ ನಿಯಮ ಅನುಸರಿಸಲಾಗುತ್ತಿದೆ. ಸ್ಥಳೀಯ ಪೊಲೀಸರು, ಕಂದಾಯ ಇಲಾಖೆ, ಗ್ರಾ.ಪಂ. ಹಾಗೂ ಆರೋಗ್ಯ ಇಲಾಖೆಯವರು ಈ ಬಗ್ಗೆ ಗಮನ ಹರಿಸಿದ್ದಾರೆ. ಕೇರಳ ಭಾಗದಿಂದ ಆಗಮಿಸುವವರು ನೆಗೆಟಿವ್ ವರದಿ ಅಥವಾ ಲಸಿಕೆ ಪಡೆದಿದ್ದಲ್ಲಿ ಮಾತ್ರ ಅವಕಾಶ ನೀಡಲಾಗುತ್ತಿದೆ.
ಕುಶಾಲನಗರ
ಕೇರಳ ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಹೆಚ್ಚಳಗೊಂಡಿರುವ ಬೆನ್ನಲ್ಲೇ ಕುಶಾಲನಗರ ಗಡಿಭಾಗದಲ್ಲಿ ಮತ್ತೆ ಅಂತರರಾಜ್ಯ ವಾಹನಗಳ ತಪಾಸಣೆ ಬಿಗಿಗೊಂಡಿದೆ. ಕೇರಳ ಸೇರಿದಂತೆ ಹೊರ ರಾಜ್ಯಗಳಿಂದ ಕೊಡಗು ಜಿಲ್ಲೆಗೆ ಆಗಮಿಸುವ ಎಲ್ಲಾ ವಾಹನಗಳ ಪ್ರಯಾಣಿಕರನ್ನು ಸ್ಥಳದಲ್ಲಿಯೇ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದ ದೃಶ್ಯ ಕಂಡು ಬಂತು.
ಶನಿವಾರ ಸಂಜೆ ತನಕ ಹೊರ ರಾಜ್ಯದ ೭೫ ಕ್ಕೂ ಅಧಿಕ ಪ್ರಯಾಣಿಕರನ್ನು ಆರೋಗ್ಯ ಇಲಾಖೆ ಸಿಬ್ಬಂದಿಗಳು ಕೋವಿಡ್ ಪರೀಕ್ಷೆಗೆ ಒಳಪಡಿಸಿದ ಮಾಹಿತಿ ತಿಳಿದುಬಂದಿದೆ.