ಕನ್ನಡ ನಾಡಿಗೆ ಜಲಧಾರೆಯಾದ ಪುಣ್ಯನದಿ ಕಾವೇರಿ.
ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಭಿಮ್ಮನೆ ಬಂದಳೋ ?
ಎಲ್ಲಿ ಮೋಹನ ಗಿರಿಯ ಬೆಡಗಿನ ರೂಪಿನಿಂದಲಿ ನಿಂದಳೋ ?
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ ?
ಎಲ್ಲಿ ನೆಲವನು ತಣಿಸಿ, ಜನಮನ ಹೊಲದ ಕಳೆ ಕಳೆ ಕಳೆವಳೋ ?
ಅಲ್ಲೆ ಆ ಕಡೆ ನೋಡಲಾ !
ಅಲ್ಲೆ ಕೊಡವರ ನಾಡಲಾ !
ಅಲ್ಲೆ ಕೊಡವರ ಬೀಡಲಾ ?
ಎಂಬ ಕವಿ ಪಂಜೆ ಮಂಗೇಶರಾಯರವರ ವಾಣಿಯಂತೆ
ಭವ್ಯ ಪಾವನ ಸಾಕ್ಷಿ ಭೂಮಿ, ವೀರ ಕಲಿಗಳ ಸಾಮ್ರಾಜ್ಯ, ಕಾನನ ಬೀಡು, ಶಾಂತಿಯ ಭದ್ರ ಕೋಟೆ, ಪುಣ್ಯನದಿ ಕಾವೇರಿಯ ತವರೂರೇ ಕೊಡಗು.ಕಾವೇರಿ ತಾಯಿ, ಕನ್ನಡ ನಾಡಿನ ಜೀವನದಿಯಾಗಿ ಮೂರು ರಾಜ್ಯಗಳ ಜನರ ದಾಹವನ್ನು ನೀಗಿಸುವ ಅಮೃತವಾಗಿದೆ. ಕರ್ನಾಟಕದ ಮೈಸೂರು ಪ್ರಾಂತ್ಯದ ಹಲವಾರು ನೆಲ ಇಂದಿಗೂ ಕೂಡ ಸದಾ ಹಸಿರಾಗಿ ನಳನಳಿಸುತ್ತಿದೆ ಎಂದರೆ ಅದಕ್ಕೆ ಕಾರಣ ನದಿ ಕಾವೇರಿ ಮತ್ತು ಅದರ ಉಪನದಿಗಳು. ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಪಶ್ಚಿಮದ ಕಡೆಗೆ ಹರಿಯುವ ಕೆಲವು ನದಿಗಳು ಕರ್ನಾಟಕದ ಕೆಲವು ಭಾಗಕ್ಕೆ ನೀರುಣಿಸುತ್ತಿವೆಯಾದರೂ ಕಾವೇರಿನದಿ ಮತ್ತು ಕೃಷ್ಣಾನದಿಯ ಪಾತ್ರ ರಾಜ್ಯದಲ್ಲಿ ಬೃಹತ್ತಾಗಿದೆ. ಕಾವೇರಿ ನದಿಯ ಉಗಮಸ್ಥಾನವಾದ ತಲಕಾವೇರಿಯಿಂದ ಹಿಡಿದು ಎಲ್ಲಾ ಉಪನದಿಗಳು ಒಟ್ಟಾಗಿ ಅದು ಅಖಂಡ ಕಾವೇರಿ ನದಿಯಾಗಿ ಹರಿದು ಸಮುದ್ರದ ಒಡಲನ್ನು ಸೇರುತ್ತವೆ. ಕೊಡಗು ಜಿಲ್ಲೆಯ ಬ್ರಹ್ಮಗಿರಿ ತಪ್ಪಲಿನ ತಲಕಾವೇರಿಯಲ್ಲಿ ಹುಟ್ಟಿದ ಈ ನದಿ ಒಟ್ಟು ೭೬೫ ಕಿ.ಮೀ.ಗಳಷ್ಟು ದೂರವನ್ನು ಸಾಗುತ್ತದೆ. ಚೋಳರ ಮೊಟ್ಟಮೊದಲ ರಾಜಧಾನಿಯಾಗಿದ್ದ ತಮಿಳುನಾಡಿನ ನಾಗಪಟ್ಟಣಂ ಮೂಲಕ ಹರಿದು ಈ ನದಿಯು ಬಂಗಾಳಕೊಲ್ಲಿಯನ್ನು ಸೇರುತ್ತದೆ. ದಕ್ಷಿಣಭಾರತದಲ್ಲಿ ವಿಸ್ತಾರಯುತ ನದಿಗಳ ಪೈಕಿ ಗೋದಾವರಿ ಮತ್ತು ಕೃಷ್ಣಾನದಿಯ ನಂತರದ ಸ್ಥಾನ ಕಾವೇರಿಯದ್ದಾಗಿದೆ. ಇದು ದಕ್ಷಿಣದ ಮೂರನೆಯ ಅತೀ ಉದ್ದದ ನದಿಯಾಗಿಯೂ ಮತ್ತು ತಮಿಳುನಾಡಿನಲ್ಲಿ ಹರಿಯುವ ಅತೀ ಉದ್ದದ ನದಿಯಾಗಿಯೂ ಗುರುತಿಸಿಕೊಂಡಿದೆ. ಅಲ್ಲದೆ ಕಾವೇರಿ ನದಿ ತಮಿಳುನಾಡನ್ನು ಉತ್ತರ ಮತ್ತು ದಕ್ಷಿಣ ತಮಿಳುನಾಡು ಎಂದು ವಿಭಜನೆ ಮಾಡುತ್ತಿರುವುದು ಬಹಳ ವಿಶೇಷ. ಬ್ರಹ್ಮಗಿರಿಯಿಂದ ಬಂಗಾಳಕೊಲ್ಲಿಯವರೆಗೂ ಕಾವೇರಿನದಿ ಕೋಟ್ಯಾಂತರ ಜನರ ಜೀವನಾಡಿ ಯಾಗಿ ಮುಂದೆ ಸಾಗುತ್ತಾ ಹೋಗುವುದಲ್ಲದೆ ಇದು ಸರಿ ಸುಮಾರು ೮೧,೧೧೫ ಚದರ ಕಿ.ಮೀ.ಗಳಷ್ಟು ಜಲಾನಯನ ಪ್ರದೇಶವನ್ನು ಹೊಂದಿದ್ದು ಕರ್ನಾಟಕದಲ್ಲಿ ೩೪,೨೭೩ಚದರ ಕಿ.ಮೀ. ಕೇರಳದಲ್ಲಿ ೨,೮೬೬ಚದರ ಕಿ,ಮೀ, ತಮಿಳುನಾಡಿನಲ್ಲಿ ೪೩,೮೫೬ ಚದರ ಕಿ.ಮೀ. ಹಾಗೂ ಪುದುಚೇರಿಯಲ್ಲಿ ೧೬೦ಚದರ ಕಿ,ಮೀ,ಗಳಷ್ಟು ಜಲಾನಯನ ಪ್ರದೇಶವನ್ನು ಹೊಂದಿದೆ.
ಅಲ್ಲದೆ ಹಾರಂಗಿ, ಕಬಿನಿ, ಲಕ್ಷ್ಮಣ ತೀರ್ಥ, ಹೇಮಾವತಿ, ಶಿಂಷಾ, ಅರ್ಕಾವತಿ ನದಿಗಳು ಕರ್ನಾಟಕದಲ್ಲಿ ಕಾವೇರಿ ನದಿಯ ಉಪನದಿಗಳಾಗಿದ್ದರೆ, ತಮಿಳುನಾಡಲ್ಲಿ ಭವಾನಿ, ನೊಯಲ್, ಅಮರಾವತಿ ನದಿಗಳು ಕೂಡ ಕಾವೇರಿ ನದಿಯನ್ನು ಸೇರಿಕೊಳ್ಳುತ್ತವೆ. ಕಾವೇರಿನದಿ ಹಾಗೂ ಅದರ ಉಪನದಿಗಳಿಗೂ ಕೆಲವೊಂದು ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಅದರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ, ತಮಿಳುನಾಡಿನ ಮೆಟ್ಟೂರಿನಲ್ಲಿರುವ ಸ್ಟಾನ್ಲಿ ಜಲಾಶಯಗಳು ಪ್ರಮುಖವಾಗಿವೆ. ಇನ್ನು ಅದನ್ನು ಹೊರತುಪಡಿಸಿದರೆ ಕಾವೇರಿ ಉಪನದಿಗಳಿಗೆ ಹಾರಂಗಿ ಜಲಾಶಯ, ಹೇಮಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಗೊರೂರು ಜಲಾಶಯ, ಕಪಿಲಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಬಿನಿ ಜಲಾಶಯ, ಭವಾನಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಭವಾನಿ ಸಾಗರ ಅಣೆಕಟ್ಟು ಹಾಗೂ ಅಖಂಡ ಕಾವೇರಿ ನದಿಗೆ ಕಟ್ಟಲಾಗಿರುವ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಗ್ರಾಂಡ್ ಅಣೆಕಟ್ಟು ಕೂಡ ಈ ನದಿ ಪಾತ್ರದಲ್ಲಿ ಪ್ರಮುಖ ಅಣೆಕಟ್ಟುಗಳು ಎಂದೆನಿಸಿಕೊAಡಿವೆ.
ಕರ್ನಾಟಕದಲ್ಲಿ ಕಾವೇರಿ ನದಿಗೆ ಒಟ್ಟು ೧೨ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ ಕೆ.ಆರ್.ಎಸ್. ಆಗಿದ್ದು, ಈ ಅಣೆಕಟ್ಟು ೪೯ ಟಿ.ಎಂ.ಸಿ. ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಅದೇ ರೀತಿ ಹೇಮಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಗೊರೂರು ಅಣೆಕಟ್ಟು ೩೭ಟಿ.ಎಂ.ಸಿ., ಕಬಿನಿಯಲ್ಲಿ ೨೮ ಟಿ.ಎಂ.ಸಿ. ಹಾಗೂ ಹಾರಂಗಿಯಲ್ಲಿ ೮.೫ ಟಿ.ಎಂ.ಸಿ.ಗಳಷ್ಟು ನೀರನ್ನು ಸಂಗ್ರಹಿಸಬಹುದಾಗಿದೆ. ಮೆಟ್ಟೂರಿನಲ್ಲಿರುವ ಅಣೆಕಟ್ಟು ತಮಿಳುನಾಡಿನ ಅತಿದೊಡ್ಡ ಅಣೆಕಟ್ಟಾಗಿದ್ದು ಇಲ್ಲಿ ೯೩ಟಿ.ಎಂ.ಸಿ. ನೀರನ್ನು ಸಂಗ್ರಹಿಸಬಹುದಾಗಿದೆ. ಅಲ್ಲದೆ ಭವಾನಿ ಸಾಗರದಲ್ಲಿ ೩೨ಟಿ.ಎಂ.ಸಿಗಳಷ್ಟು ನೀರನ್ನು ಸಂಗ್ರಹಿಸಬಹುದಾಗಿದೆ. ಕರ್ನಾಟಕದಲ್ಲಿ ಕೊಡಗು, ಮೈಸೂರು, ಮಂಡ್ಯ ಹಾಗೂ ರಾಮನಗರ ಜಿಲ್ಲೆಯ ಭಾಗಗಳಲ್ಲಿ ಹರಿಯುವ ಕಾವೇರಿ ನದಿ ತನ್ನ ಉಪನದಿಗಳೆಲ್ಲವನ್ನು ಸೇರಿಕೊಂಡು ತಮಿಳುನಾಡನ್ನು ಪ್ರವೇಶಿಸುತ್ತದೆ. ಈ ಕಾವೇರಿ ಹೊಗೆನಕಲ್ ತಲುಪುವುದರಲ್ಲೇ ಕಪಿಲಾ, ಹೇಮಾವತಿ, ಲಕ್ಷö್ಮಣ ತೀರ್ಥ, ಹಾರಂಗಿ ಅರ್ಕಾವತಿ ನದಿಗಳು ಅದನ್ನು ಸೇರಿಕೊಳ್ಳುತ್ತವೆ. ಹೀಗೆ ಒಟ್ಟಾದ ಕಾವೇರಿ ಕರ್ನಾಟಕ ಮತ್ತು ತಮಿಳುನಾಡಿನ ಗಡಿಯಲ್ಲಿ ೬೪ ಕಿ.ಮೀ.ಗಳಷ್ಟು ದೂರ ಸಾಗುತ್ತದೆ ನಂತರ ಹೊಗೆನಕಲ್ ಜಲಪಾತದ ಮೂಲಕ ಧುಮುಕಿ ಅದು ತಮಿಳುನಾಡನ್ನು ಸೇರಿ ಮೆಟ್ಟೂರು ಜಲಾಶಯದ ಹಿನ್ನೀರನ್ನು ತಲುಪುತ್ತದೆ.
ಹೀಗೆ ಪಾಲರ್, ಚೀನಾರ್, ತೋಪರ್ ನದಿಗಳು ಕಾವೇರಿಯನ್ನು ಜೊತೆಗೂಡಿ ನಂತರ ಮೆಟ್ಟೂರಿನಿಂದ ಹರಿಯುವ ಕಾವೇರಿ ನದಿ ಈರೊಡ್ ಜಿಲ್ಲೆಯ ಭವಾನಿ ಪ್ರದೇಶದಲ್ಲಿ ಭವಾನಿ ಹಾಗೂ ಆಕಾಶಗಂಗಾ ನದಿ ಗಳೊಂದಿಗೆ ಸಂಗಮವಾಗುತ್ತದೆ. ಮುಂದೆ ಕಾವೇರಿ ನದಿ ನಾಮಕಲ್ ಪ್ರವೇಶಿಸಿ ಅಲ್ಲಿ ತಿರುಮನಿ ಮುತ್ತಾರ್ ನದಿ ಕಾವೇರಿಯೊಂದಿಗೆ ಸೇರುತ್ತದೆ. ಹಾಗೇ ಮುಂದೆ ಸಾಗಿದಂತೆೆ ಕರೂರಿನ ಬಳಿ ಅಮರಾವತಿ ಮತ್ತು ನೊಯಲ್ ನದಿ ಕಾವೇರಿಯನ್ನು ಸೇರಿಕೊಳ್ಳುತ್ತವೆ. ತದನಂತರ ತಿರುಚಿನಾಪಳ್ಳಿಗೆ ಪ್ರವೇಶ ಮಾಡುವ ಕಾವೇರಿ ಬೃಹತ್ ಕಾವೇರಿ ನದಿಯಾಗಿ ಗೋಚರಿಸುತ್ತದೆ. ತಿರುಚಿನಾಪಳ್ಳಿಯ ಶ್ರೀರಂಗA ಬಳಿ ವಿಶಾಲವಾದ ಮರಳು ಹಾಸಿನ ಮೇಲೆ ವಿಸ್ತಾರವಾಗಿ ಹರಿಯುವ ಕಾವೇರಿ ನದಿ ಸಾಕಷ್ಟು ಜಲಪಾತಗಳನ್ನು ಮತ್ತು ದ್ವೀಪಗಳನ್ನು ಸೃಷ್ಟಿಸಿದೆ. ಅದರಲ್ಲೂ ಕಾವೇರಿ ನದಿಯಿಂದ ನಿರ್ಮಿಸಲಾದ ಮೂರು ದ್ವೀಪಗಳಲ್ಲಿ ರಂಗನಾಥನ ದೇವಾಲಯಗಳಿರುವುದು ಮತ್ತೊಂದು ವಿಶೇಷವಾಗಿದೆ. ಮೊದಲಿಗೆ ಶ್ರೀರಂಗಪಟ್ಟಣವನ್ನು ದ್ವೀಪವನ್ನಾಗಿಸಿದ ಕಾವೇರಿ ಅಲ್ಲಿಂದ ಸಂಗಮವಾಗಿ ಅದು ಪುನಹ ಶಿವನ ಸಮುದ್ರ ದ್ವೀಪವನ್ನು ನಿರ್ಮಾಣ ಮಾಡುತ್ತದೆ. ನಂತರ ಒಟ್ಟಾಗಿ ಹರಿಯುವ ಕಾವೇರಿ ನದಿ ತಮಿಳುನಾಡಿನ ಶ್ರೀರಂಗAನಲ್ಲಿ ಮತ್ತೊಮ್ಮೆ ದ್ವೀಪವೊಂದನ್ನು ನಿರ್ಮಾಣ ಮಾಡುತ್ತದೆ ಈ ಮೂರು ದ್ವೀಪಗಳಲ್ಲೂ ರಂಗನಾಥನ ದೇವಾಲಯಗಳಿದ್ದು, ಅವುಗಳನ್ನು ಆದಿರಂಗ, ಮಧ್ಯರಂಗ ಮತ್ತು ಅಂತ್ಯರAಗ ಎಂದೂ ಕರೆಯಲಾಗಿದೆ. ಅದೇ ರೀತಿ ಕಾವೇರಿ ನದಿ ಗಗನಚುಕ್ಕಿ, ಭರಚುಕ್ಕಿಗಳೆಂಬ ಜಲಪಾತಗಳಾಗಿ ಧುಮುಕಿಕೊಂಡು ಪ್ರಕೃತಿಯ ಶೃಂಗಾರ ಲಹರಿಯ ಸೌಂದರ್ಯವನ್ನು ಎತ್ತಿ ತೋರಿಸುತ್ತದೆ. ಕ್ರಿ,ಶ ೧೯೦೨ರಲ್ಲಿ ಶಿವನ ಸಮುದ್ರದಲ್ಲಿ ಏಷ್ಯಾದ ಮೊಟ್ಟಮೊದಲ ಜಲವಿದ್ಯುತ್ ಸ್ಥಾವರವನ್ನು ಸ್ಥಾಪಿಸಲಾಗಿದೆ. ಇಲ್ಲಿಂದಲೇ ಬೆಂಗಳೂರಿಗೆ ವಿದ್ಯುತ್ ಸರಬರಾಜು ಮಾಡುತ್ತಿರುವುದು ಇಲ್ಲಿನ ವಿಶೇಷ.
ತಮಿಳುನಾಡಿನಲ್ಲಿ ಕಾವೇರಿ ನದಿ ನಿರ್ಮಿಸಿರುವ ಹೊಗೆನಕಲ್ ಜಲಪಾತ ಅತ್ಯಂತ ನಯನ ಮನೋಹರವಾಗಿದೆ. ಕಾವೇರಿ ನದಿ ಪುರಾತನ ಕಾಲದಿಂದಲೂ ದಕ್ಷಿಣ ಭಾರತದ ಅದರಲ್ಲೂ ಕರ್ನಾಟಕ ಮತ್ತು ತಮಿಳುನಾಡಿನ ಜನರಿಗೆ ಜೀವಾಮೃತವಾಗಿದೆ. ನಾವು ಇತಿಹಾಸವನ್ನು ಒಮ್ಮೆ ಮೆಲುಕು ಹಾಕಿದರೆ ಕಾವೇರಿ ನದಿ ಹರಿಯುವ ಜಾಗದಲ್ಲಿ ಹಾಗೂ ಅದರ ಪಾತ್ರದಲ್ಲಿ ಅದೆಷ್ಟೋ ಸಾಮ್ರಾಜ್ಯಗಳು ಉದಯಿಸಿವೆ ಮತ್ತು ನಶಿಸಿ ಹೋಗಿವೆ. ಕಾವೇರಿ ಉಗಮಗೊಳ್ಳುವ ರಮಣೀಯ ತಾಣ ಕೊಡಗಿನಲ್ಲಿ ಹಾಲೇರಿ ಮನೆತನದ ಆಡಳಿತ ಒಂದಾದರೆ, ಶ್ರೀರಂಗಪಟ್ಟಣ ಮೈಸೂರು ರಾಜ್ಯದ ರಾಜಧಾನಿಯಾಗಿ ಮೆರೆದಾಡಿತ್ತು. ಕಾವೇರಿ ನದಿ ಹರಿಯುವ ತಲಕಾಡಿನಲ್ಲಿ ಗಂಗರಸರು ನೂರಾರು ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದರು. ಅಂತೆಯೇ ಕಬಿನಿ ನದಿಯ ಪಾತ್ರದಲ್ಲಿ ಕೇರಳದ ಅರಸ ಮನೆತನಗಳು ಆಳ್ವಿಕೆ ಮಾಡಿವೆ. ತಮಿಳುನಾಡಿನ ಬಲಿಷ್ಠ ಚೋಳ ಸಾಮ್ರಾಜ್ಯದ ಎರಡು ರಾಜಧಾನಿಗಳು ಕಾವೇರಿ ನದಿಯ ತೀರದಲ್ಲಿಯೇ ಕಾಣಸಿಗುತ್ತವೆ. ಮೊದಲಿಗೆ ಕಾವೇರಿ ಪಟ್ಟಣಂ ಅನ್ನು ರಾಜಧಾನಿಯಾಗಿಸಿ ಕೊಂಡಿದ್ದ ಚೋಳರು ತದನಂತರ ತಂಜಾವೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡರು. ಈ ತಂಜಾವೂರು ಕೂಡ ಕಾವೇರಿ ನದಿಯ ಸನಿಹ ದಲ್ಲಿದ್ದು, ಅಂದಿನಿAದ ಇಂದಿನವರೆಗೂ ಕೂಡ ಕಾವೇರಿ ನದಿ ಕೋಟ್ಯಾಂತರ ಜನರ ಬದುಕನ್ನು ಹಸನಾಗಿಸಿದೆ. ಕಾವೇರಿ ನದಿಯ ತಟದಲ್ಲಿರುವ ದೇವಾಲಯಗಳಾದ ತಲಕಾವೇರಿ, ಭಾಗಮಂಡಲ, ರಾಮನಾಥಪುರ, ಶ್ರೀರಂಗಪಟ್ಟಣ, ತಿರುಮಕೂಡಲು ನರಸೀಪುರ, ಸೋಮನಾಥಪುರ, ತಲಕಾಡು, ಶಿಂಷಾ, ಶಿವನ ಸಮುದ್ರ, ಭವಾನಿ ದೇವಾಲಯ, ಶ್ರೀರಂಗAನ ರಂಗನಾಥ ಸ್ವಾಮಿ ದೇವಾಲಯ, ತಂಜಾವೂರಿನ ಬೃಹದೇಶ್ವರ ದೇವಾಲಯಗಳು ನದಿ ಪಾತ್ರದಲ್ಲಿ ಕಂಡುಬರುವ ಪ್ರಮುಖ ದೇವಾಲಯ ಗಳಾಗಿವೆ. ಹೀಗೆ ಕಾವೇರಿ ನದಿ ಕರ್ನಾಟಕದ ಜನರ ಜೀವನದಿಯಾಗಿ, ತಮಿಳುನಾಡಿನ ಪಾಲಿನ ಭಾಗ್ಯಲಕ್ಷಿö್ಮಯಾಗಿ, ಕಾಡು ಜೀವಸಂಕುಲಗಳ ಪಾಲಿಗೆ ಜೀವರಕ್ಷಕವಾಗಿದೆ. ನಮ್ಮ ಕೊಡಗಿನ ನೆಲದ ಸಂಸೃತಿ ಪರಂಪರೆ, ಹಿರಿಮೆ, ಘನತೆಯನ್ನು ಉಳಿಸಿಕೊಂಡು ಬಂದಿರುವವಳೇ ಕಾವೇರಿ. ಈಕೆಯ ಉಗಮಸ್ಥಾನವಾದ ಪೂಜನೀಯ ತಲಕಾವೇರಿ ಕ್ಷೇತ್ರದಲ್ಲಿ ಕಾಲಿಟ್ಟರೂ ಕೂಡ ಏನೋ ಒಂದು ಧನ್ಯತಾ ಭಾವ ನಮ್ಮನ್ನು ಆವರಿಸುವುದಂತೂ ಅವರ್ಣನೀಯ.
-ಸತೀಶ್ ಕುಮಾರ್ ಎ. ಎಸ್,
ಇತಿಹಾಸ ಉಪನ್ಯಾಸಕರು, ವೀರಾಜಪೇಟೆ.