ಕೂಡಿಗೆ, ಜು. ೨೯: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯು ಭರ್ತಿಯಾದ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರನ್ನು ನದಿಗೆ ಹರಿಸುವ ಇಲಾಖೆಯ ನಿಯಮನುಸಾರವಾಗಿ ನೀರನ್ನು ವಿದ್ಯುತ್ ಘಟಕದ ಮೂಲಕ ಹರಿಸುತ್ತಿರುವುದರಿಂದ ವಿದ್ಯುತ್ ಘಟಕದಿಂದ ದಿನಂಪ್ರತಿ ೧೫ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.
ಹಾರಂಗಿ ಅಣೆಕಟ್ಟೆಯಿಂದ ೨೦೦೦ ಕ್ಯೂಸೆಕ್ ನೀರನ್ನು ಬಳಕೆ ಮಾಡಿ ಅದರಿಂದ ಹಾರಂಗಿಯ ಎರಡು ವಿದ್ಯುತ್ ಘಟಕದ ಮೂಲಕ ವಿದ್ಯುತ್ ಉತ್ಪಾದನೆ ಮಾಡುವ ಕಾರ್ಯ ಹಾರಂಗಿ ವಿದ್ಯುತ್ ಘಟಕದಲ್ಲಿ ಅರಂಭವಾಗಿದೆ.
ಅಣೆಕಟ್ಟೆಯಿಂದ ನಾಲೆಗೆ ಹೋಗುವ ನೀರು ಮತ್ತು ನದಿಗೆ ಹೋಗುವ ನೀರಿನ ಪ್ರಮಾಣ ವನ್ನು ಬಳಕೆ ಮಾಡಿಕೊಂಡು ವಿದ್ಯುತ್ ಉತ್ಪಾದನೆ ಮಾಡಲಾ ಗುತ್ತಿದೆ. ದಿನಂಪ್ರತಿ ಉತ್ಪಾದನೆ ಮಾಡುವ ೧೫ ಮೆಗಾವ್ಯಾಟ್ ವಿದ್ಯುತ್ ಅನ್ನು ಕುಶಾಲನಗರ ಕೆಪಿಟಿಸಿಎಲ್ಗೆ ಯೂನಿಟ್ಗೆ ರೂ. ೧.೪೨ ಪೈಸೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಘಟಕದ ಅಧಿಕಾರಿ ಮಾಹಿತಿ ನೀಡಿರುತ್ತಾರೆ. ವಿದ್ಯುತ್ ಘಟಕವನ್ನು ದೆಹಲಿಯ ನಾನದಿ ಡೆವಲಪ್ಮೆಂಟ್ ಕಂಪೆನಿ ಲಿಮಿಟೆಡ್ ನಡೆಸುತ್ತಿದ್ದು, ಕಳೆದ ವರ್ಷದಲ್ಲಿ ಈ ವಿದ್ಯುತ್ ಘಟಕದಲ್ಲಿ ೨೯ ಮಿಲಿಯನ್ ಯೂನಿಟ್ ವಿದ್ಯುತ್ ಅನ್ನು ಉತ್ಪಾದನೆ ಮಾಡಲಾಗಿತ್ತು. ಈ ಬಾರಿಯೂ ಅಷ್ಟೇ ವಿದ್ಯುತ್ ಉತ್ಪಾದನೆ ಮಾಡುವ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು ಹಾರಂಗಿ ಘಟಕದ ಅಧಿಕಾರಿ ತಿಳಿಸಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ.