ಸಿದ್ದಾಪುರ, ಜು. ೩೦: ನೆಲ್ಲಿಹುದಿಕೇರಿ ಗ್ರಾ.ಪಂ. ವತಿಯಿಂದ ಘನತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಕುರಿತು ಹಾಗೂ ನಿವಾರಣೆ ಮಾಡುವ ಬಗ್ಗೆ ಮಹಿಳಾ ಸಂಘಗಳಿಗೆ ಕಾರ್ಯಾಗಾರವನ್ನು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಮಾತನಾಡಿದ ನೆಲ್ಲಿಹುದಿಕೇರಿ ಗ್ರಾ.ಪಂ. ಅಧ್ಯಕ್ಷ ಸಾಬು ವರ್ಗೀಸ್ ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಸ ಮುಕ್ತ ಗ್ರಾಮಗಳನ್ನು ಮಾಡಲು ಸ್ವ-ಸಹಾಯ ಸಂಘಗಳ ಮೂಲಕ ಯೋಜನೆಯನ್ನು ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು. ಹಸಿ ಹಾಗೂ ಒಣ ಕಸಗಳನ್ನು ವಿಂಗಡಣೆ ಮಾಡುವ ಮೂಲಕ ಗ್ರಾಮದಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಮಹಿಳಾ ಸಂಘಗಳು ಪಂಚಾಯಿತಿಯೊAದಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಸ್ವಚ್ಛ ಭಾರತ್ ಮಿಶನ್ ಜಿಲ್ಲಾ ಸಮಾಲೋಚನ್ ಅಧಿಕಾರಿ ಪೆಮ್ಮಯ್ಯ ಮಾತನಾಡಿ, ಸರ್ಕಾರಿ ಆದೇಶದ ಪ್ರಕಾರ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವ-ಸಹಾಯ ಸಂಘಗಳ ಮೂಲಕ ಘನತ್ಯಾಜ್ಯ ನಿರ್ವಹಣೆ ಮಾಡುವ ಬಗ್ಗೆ ಮಾಹಿತಿಯನ್ನು ನೀಡಿದರು. ಸೋಮವಾರಪೇಟೆ ತಾಲೂಕಿನಲ್ಲಿ ೪೦ ಗ್ರಾ.ಪಂ.ಗಳಿಗೆ ಈಗಾಗಲೇ ಕಸ ತ್ಯಾಜ್ಯ ವಿಲೇವಾರಿ ಮಾಡಲು ಸಂಕೀರ್ಣಗಳನ್ನು ಹಾಗೂ ಸ್ವಚ್ಛ ವಾಹಿನಿಗಳನ್ನು ಒದಗಿಸಿಕೊಡಲಾಗುವುದು ಎಂದು ತಿಳಿಸಿದರು. ಘನ ತ್ಯಾಜ್ಯ ನಿರ್ವಹಣೆಯಲ್ಲಿ ಮಹಿಳೆಯರು ಭಾಗವಹಿಸಿ ಸಹಕರಿಸಿದ್ದಲ್ಲಿ ಅವರಿಗೂ ಕೂಡ ಆರ್ಥಿಕ ನೆರವಿನ ಸಹಕಾರ ಆಗುತ್ತದೆ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್ ಮಾತನಾಡಿದರು. ಸಭೆಯಲ್ಲಿ ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ವಿವಿಧ ಸ್ವ-ಸಹಾಯ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು.