*ಗೋಣಿಕೊಪ್ಪ, ಜು. ೩೦: ಅರಣ್ಯ ಇಲಾಖೆ ಸಿಬ್ಬಂದಿಗಳ ಹುಲಿ ಸಂರಕ್ಷಣಾ ಕಾರ್ಯದಿಂದ ನಾಗರಹೊಳೆ ವನ್ಯಜೀವಿ ವಲಯ ಪ್ರದೇಶ ಹುಲಿ ಸಂತತಿ ಮತ್ತು ಸಂರಕ್ಷಣೆಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ನಾಗರಹೊಳೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್ ಕುಮಾರ್ ತಿಳಿಸಿದ್ದಾರೆ.

ಜಾಗತಿಕ ಹುಲಿ ದಿನಾಚರಣೆ ಅಂಗವಾಗಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಆನೆಚೌಕೂರು ವಲಯ ಪ್ರದೇಶದ ತಿತಿಮತಿಯಲ್ಲಿ ಹಮ್ಮಿಕೊಂಡಿದ್ದ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿಚಾರ ಪ್ರಸ್ತಾಪಿದರು.

ಹುಲಿಗಳ ಸಂತತಿ ಹೆಚ್ಚುತ್ತಿದೆ ಎಂದರೆ ಆ ಭಾಗದಲ್ಲಿ ಕಾಡುಗಳು ಸಮೃದ್ಧಿ ಹೊಂದಿದೆ ಎಂಬುದನ್ನು ತಿಳಿದುಕೊಳ್ಳ ಬಹುದಾಗಿದೆ. ರಾಜ್ಯದ ಬಂಡಿಪುರ, ಭದ್ರ, ಕಾಳಿ, ಬಿ.ಆರ್.ಟಿ. ವನ್ಯಜೀವಿ ಅರಣ್ಯ ಪ್ರದೇಶದ ಹುಲಿ ಸಂರಕ್ಷಣೆಯಲ್ಲಿ ನಾಗರಹೊಳೆ ಅರಣ್ಯ ಮೊದಲ ಸ್ಥಾನವನ್ನು ಗಳಿಸಿದೆ ಎಂದು ತಿಳಿಸಿದರು.

ಹುಲಿಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಿತಿಮತಿ ಆನೆಚೌಕೂರು ವನ್ಯಜೀವಿ ಸಂರಕ್ಷಣೆ ಪ್ರದೇಶದಿಂದ ಹುಣಸೂರು, ಹೆಚ್.ಡಿ. ಕೋಟೆಯ ಮೂಲಕ ಕಾಕನಕೋಟೆ ದಮ್ಮನಕಟ್ಟೆ ಪ್ರದೇಶದಲ್ಲಿ ಜಾಥಾ ಸಂಪನ್ನಗೊಳ್ಳಲಿದೆ.

ಸುಮಾರು ೮೦ ಕಿ.ಮೀ. ವ್ಯಾಪ್ತಿಯಲ್ಲಿ ಹುಲಿ ಸಂರಕ್ಷಣಾ ಜಾಗೃತಿ ಜಾಥಾ ಬೆಂಗಳೂರಿನ ಪರಿಕ್ರಮ ತಂಡದ ಜತೆಗೆ ಮತ್ತಿಗೋಡು ಹುಲಿ ಸಂರಕ್ಷಣಾ ವಲಯದ ಸಿಬ್ಬಂದಿಗಳು ಹಮ್ಮಿಕೊಂಡಿದೆ ಎಂದು ಹೇಳಿದರು.

೨೦೧೮ರಲ್ಲಿ ಹುಲಿ ಜನಗಣತಿಯ ಪ್ರಕಾರ ದೇಶದಲ್ಲಿ ೨೯೬೭ ಹುಲಿಗಳು ಪತ್ತೆಯಾಗಿವೆ. ರಾಜ್ಯದಲ್ಲಿ ೫೨೪ ಹುಲಿಗಳು ಗಣತಿಗೆ ಒಳಪಟ್ಟಿದ್ದು, ರಾಜ್ಯದಲ್ಲಿ ನಾಗರಹೊಳೆ ಅರಣ್ಯಪ್ರದೇಶ ಹುಲಿ ಸಂತತಿಗೆ ಉತ್ತಮ ವನ್ಯದಾಮವಾಗಿದೆ ಎಂದು ಮಾಹಿತಿ ನೀಡಿದರು. ನಾಗರಹೊಳೆ ವಲಯ ಸಹಾಯಕ ಸಂರಕ್ಷಣಾಧಿಕಾರಿ ಗೋಪಾಲ್, ಹುಣಸೂರು ವಲಯ ಸಹಾಯಕ ಸಂರಕ್ಷಣಾಧಿಕಾರಿ ಸತೀಶ್‌ಕುಮಾರ್, ಮತ್ತಿಗೋಡು ವನ್ಯಜೀವಿ ವಲಯ ಅರಣ್ಯಾಧಿಕಾರಿ ಕಿರಣ್‌ಕುಮಾರ್, ತಿತಿಮತಿ ವಲಯ ಅರಣ್ಯಾಧಿಕಾರಿ ಆಶೋಕ್ ಹನುಗುಂದ, ವೀರನಹೊಸಳ್ಳಿ ವಲಯ ಅರಣ್ಯಾಧಿಕಾರಿ ನಮನ್‌ನಾಯಕ್, ಹುಣಸೂರು ವಲಯ ಅರಣ್ಯಾಧಿಕಾರಿ ಹನುಮಂತ್ ನಾಯಕ್, ಗೋಣಿಕೊಪ್ಪ ಠಾಣಾಧಿಕಾರಿ ಸುಬ್ಬಯ್ಯ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.