ಕೂಡಿಗೆ, ಜು. ೨೯: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯಿಂದ ರೈತರಿಗೆ ಮುಂಗಾರು ಹಂಗಾಮಿ ಬೆಳೆಗೆ ಈಗಾಗಲೇ ನಾಲೆಯ ಮೂಲಕ ನೀರನ್ನು ಹರಿಸಲಾಗುತ್ತಿದೆ. ಮುಖ್ಯ ನಾಲೆಯಿಂದ ಉಪ ಕಾಲುವೆಗಳ ಮೂಲಕ ಗದ್ದೆಗಳಿಗೆ ನೀರು ಹರಿಸಿಕೊಂಡು ಭತ್ತದ ನಾಟಿ ಕಾರ್ಯಕ್ಕೆ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಹಾರಂಗಿ ಅಚ್ಚುಕಟ್ಟು ಪ್ರದೇಶದ ಹವಾಮಾನಕ್ಕೆ ಅನುಗುಣವಾಗಿ ಕೃಷಿ ಇಲಾಖೆಯ ವತಿಯಿಂದ ಪರಿಷ್ಕರಿಸಿದ ಹೈಬ್ರೀಡ್ ತಳಿಯ ಭತ್ತದ ಬೀಜಗಳ ಸಸಿಮಡಿಗಳನ್ನು ಮಾಡಲಾಗಿದೆ. ಜಮೀನಿನ ಸಿದ್ಧತೆಯ ನಂತರ ಭತ್ತದ ಸಸಿಗಳನ್ನು ಒಂದು ತಿಂಗಳ ಒಳಗೆ ಸಿದ್ಧಪಡಿಸಿದ ಗದ್ದೆಗಳಿಗೆ ನಾಟಿ ಮಾಡಲು ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರು ಈಗಾಗಲೇ ಸಿದ್ಧರಾಗಿದ್ದಾರೆ.
ಈ ಸಾಲಿನಲ್ಲಿ ರೈತರು ತಮ್ಮ ಜಮೀನಿನ ಮಣ್ಣನ್ನು ಕೂಡಿಗೆಯ ಮಣ್ಣು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಿಸಿ ಅಲ್ಲಿನ ಮಾಹಿತಿಯ ಪ್ರಕಾರ ಅನೇಕ ರೈತರು ಸಾವಯವ ಗೊಬ್ಬರವನ್ನು ಜಮೀನಿಗೆ ಹಾಕುವ ಮೂಲಕ ಭೂಮಿಯ ಫಲವತ್ತತೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.
ಈ ವ್ಯಾಪ್ತಿಯ ರೈತರು ಈ ಬಾರಿ ಎತ್ತುಗಳನ್ನು ಬಳಸಿ ಉಳುಮೆ ಮಾಡುವುದು ಕಡಿಮೆಯಾಗಿದ್ದು, ನೂತನ ಹೈಟೆಕ್ ಮಾದರಿಯ ಚಿಕ್ಕ ಟ್ರಾö್ಯಕ್ಟರ್ ಮತ್ತು ನೀರಾವರಿ ಜಮೀನಿನಲ್ಲಿ ಉಳುಮೆ ಮಾಡಲು ಹೊಸ ಮಾದರಿಯ ಯಂತ್ರಗಳನ್ನು ಬಳಕೆ ಮಾಡಿಕೊಂಡು ಉಳುಮೆ ಮಾಡುತ್ತಿದ್ದಾರೆ.