ಕಣಿವೆ, ಜು. ೨೯: ಆಹಾರ ಹುಡುಕಿ ಆನೆಕಾಡು ಅರಣ್ಯದಿಂದ ಕೃಷಿ ಪ್ರದೇಶಕ್ಕೆ ಬಂದ ಒಂಟಿ ಸಲಗಕ್ಕೆ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೊಸಕಾಡು ಗ್ರಾಮದ ಚಂದ್ರು ಎಂಬವರ ಅಡಿಕೆ ಹೊಲದಲ್ಲಿ ಬುಧವಾರ ಮಧ್ಯರಾತ್ರಿ ನಡೆದಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೃಹತ್ ಗಾತ್ರ ಹಾಗೂ ಉದ್ದದ ಎರಡು ದಂತಗಳನ್ನು ಹೊಂದಿದ್ದ ಮೃತ ಒಂಟಿ ಸಲಗಕ್ಕೆ ೩೨ ವರ್ಷ ಎಂದು ಅರಣ್ಯ ಇಲಾಖೆ ಅಂದಾಜಿಸಿದೆ.
ಆಹಾರ ಅರಸಿ ಬಂದ ಈ ಸಲಗ ಚಂದ್ರ ಎಂಬವರ ಅಡಿಕೆ ಹೊಲವನ್ನು ದಾಟಲು ಬಂದಾಗ ಬೇಲಿಗೆ ಅನಧಿಕೃತವಾಗಿ ಅಳವಡಿಸಿದ್ದ ತಂತಿ ಬೇಲಿಗೆ ವಾಸದ ಮನೆಯ ಬಳಿಯಿಂದ ಹರಿಬಿಟ್ಟ ವಿದ್ಯುತ್, ಸಲಗದ ಸೊಂಡಿಲು ಹಾಗೂ ದಂತಕ್ಕೆ ಸ್ಪರ್ಶಿಸಿದೆ. ಈ ಸಂದರ್ಭ ಸಲಗ ಅಪಾಯ ತಿಳಿದು ಸೊಂಡಿಲನ್ನು ಎಳೆದಾಗ ಸಲಗದ ಮೈ ಮೇಲೆ ಒಂದು ತಂತಿ ಬಿದ್ದರೆ, ಸಲಗದ ಕೆಳಹೊಟ್ಟೆಯ ಭಾಗಕ್ಕೆ ಮತ್ತೊಂದು ವಿದ್ಯುತ್ ತಂತಿ ತಾಗಿ ಕೆಳಬಿದ್ದಿದ್ದು, ಸಲಗ ಸ್ಥಳದಲ್ಲೇ ಒದ್ದಾಡಿ ಧಾರುಣವಾಗಿ ಮೃತಪಟ್ಟಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪಶು ವೈದ್ಯ ಡಾ. ಚಿಟ್ಟಿಯಪ್ಪ ಮೃತ ಸಲಗದ ಮರಣೋತ್ತರ ಪರೀಕ್ಷೆ ನಡೆಸಿದರು.
ಬಳಿಕ ಮೃತ ಸಲಗಕ್ಕೆ ಪೂಜೆ ಸಲ್ಲಿಸಿ ತಲಾ ಒಂದೂವರೆ ಮೀಟರ್ ಉದ್ದವಿದ್ದ ಎರಡು ದಂತಗಳನ್ನು ಕಡಿದು ಹೊರ ತೆಗೆದು ಸಾವನ್ನಪ್ಪಿದ ಸ್ಥಳದಲ್ಲೇ ಗುಂಡಿ ತೆಗೆದು ಅಂತ್ಯಕ್ರಿಯೆ ನೆರವೇರಿಸಲಾಯಿತು.
ಸ್ಥಳಕ್ಕೆ ಸೋಮವಾರಪೇಟೆ ಎಸಿಎಫ್ ನೆಹರು, ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್, ಕುಶಾಲನಗರ ಚೆಸ್ಕಾಂ ಇಂಜಿನಿಯರ್ ವಿನಯಕುಮಾರ್, ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಶಿವಶಂಕರ್, ಗುಡ್ಡೆಹೊಸೂರು ಪಂಚಾಯಿತಿ ಪಿಡಿಓ ಶ್ಯಾಂ,
(ಮೊದಲ ಪುಟದಿಂದ) ಉಪವಲಯ ಅರಣ್ಯಾಧಿಕಾರಿ ರಂಜನ್ ಮತ್ತಿತರರು ಇದ್ದರು.
ಬುಧವಾರ ರಾತ್ರಿ ವಿದ್ಯುತ್ ತಂತಿ ತಾಗಿ ಮೃತಪಟ್ಟ ಒಂಟಿ ಸಲಗವನ್ನು ಗ್ರಾಮದ ನೂರಾರು ಜನರು ಬಂದು ನೋಡುತ್ತಿದ್ದುದು ಕಂಡು ಬಂತು.
ಮೃತ ಸಲಗದ ಕಣ್ಣುಗಳ ಮೇಲ್ಭಾಗದಲ್ಲಿ ಸಲಗದ ವೀರ್ಯಾಣು ಸುರಿಯುತ್ತಿದ್ದುದನ್ನು ಗಮನಿಸಿದ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್, ಮೃತ ಸಲಗ ಕಳೆದ ಕೆಲವು ದಿನಗಳಿಂದ ಮದವೇರಿ ಸಂಗಾತಿಯ ಸಾಂಗತ್ಯಕ್ಕಾಗಿ ಹುಡುಕಾಟ ನಡೆಸುತ್ತಿದ್ದಿರಬಹುದು ಎಂದು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು.
ದೈತ್ಯಾಕಾರದಲ್ಲಿದ್ದ ಈ ಸಲಗ ಕಳೆದ ಹದಿನೈದು ದಿನಗಳಿಂದ ಒಂಟಿಯಾಗಿಯೇ ಸಂಚರಿಸುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಬೇಲಿಯಲ್ಲಿನ ತಂತಿ ಮೇಲೆ ವಿದ್ಯುತ್ ಹರಿಸಿದ್ದ ಕೃಷಿಕ ಚಂದ್ರ ತಮಗೆ ಸೇರಿದ ಎರಡು ಎಕರೆ ಭೂಮಿಯಲ್ಲಿ ಅಡಿಕೆ ಕೃಷಿ ಮಾಡಿದ್ದರು. ಹಾಗೆಯೇ ಅದರೊಳಗೆ ಉಪಬೆಳೆಯಾಗಿ ಶುಂಠಿ ಬೇಸಾಯವನ್ನು ಕೈಗೊಂಡಿದ್ದರು.
ಈ ಬೆಳೆಗಳನ್ನು ಕಾಡಾನೆಗಳಿಂದ ರಕ್ಷಿಸಿಕೊಳ್ಳಲು ಈ ರೀತಿ ವಿದ್ಯುತ್ ಹರಿಯಬಿಟ್ಟಿದ್ದರು ಎನ್ನಲಾಗಿದೆ.
ಹಾಸನದ ವಿದ್ಯುತ್ ಇಲಾಖೆಯ ಪರಿವೀಕ್ಷಕರು ಉಷಾ ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಆನೆ ಸಾವು ಸಂಬAಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಐಪಿಸಿ ಕಾಯ್ದೆ, ವನ್ಯಜೀವಿ ಕಾಯ್ದೆ ಹಾಗೂ ವಿದ್ಯುತ್ ಕಾಯ್ದೆ ಸಂಬAಧ ದೂರು ದಾಖಲಾಗಿದೆ.
- ಕೆ.ಎಸ್.ಮೂರ್ತಿ