ಮಡಿಕೇರಿ, ಜು. ೨೯: ಸರ್ಕಾರಿ ಬಾಲಮಂದಿರಗಳಲ್ಲಿ ಪಾಲನೆ ಪೋಷಣೆ ಅಗತ್ಯವಿರುವ ಮಕ್ಕಳಿಗೆ ತಾತ್ಕಾಲಿಕವಾಗಿ ಕುಟುಂಬ ವ್ಯವಸ್ಥೆ ನೀಡಿ, ಪೋಷಣೆ ಮಾಡಲು ಆಸಕ್ತಿ ಇರುವ ಪೋಷಕರಿಂದ ಪೋಷಕತ್ವ ಯೋಜನೆಯಡಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.
ತಂದೆ-ತಾಯಿಯ ಪ್ರೀತಿಯಿಂದ ವಂಚಿತರಾದ ಮಕ್ಕಳಿಗೆ ಕುಟುಂಬದ ಪ್ರೀತಿಯನ್ನು ನೀಡುವುದರಿಂದ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಬಾಲಮಂದಿರಗಳಲ್ಲಿ ಪಾಲನೆ ಪೋಷಣೆ ಪಡೆಯುತ್ತಿರುವ ಮಕ್ಕಳನ್ನು ತಾತ್ಕಾಲಿಕವಾಗಿ ಪೋಷಕತ್ವ ಯೋಜನೆಯಡಿಯಲ್ಲಿ ಕುಟುಂಬದ ವಾತಾವರಣ ನೀಡಲು ಆಸಕ್ತಿ ಇರುವ ಪೋಷಕರು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಡಿಕೇರಿ ಇವರಿಗೆ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವವರು ಕನಿಷ್ಟ ೩೫ ವರ್ಷ ಮೇಲ್ಪಟ್ಟ ದಂಪತಿಗಳಾಗಿರಬೇಕು. ವಿವಾಹವಾಗಿ ಕನಿಷ್ಟ ೭ ವರ್ಷಗಳು ಪೂರ್ಣಗೊಂಡಿರಬೇಕು. ದಂಪತಿಗಳಿಬ್ಬರು ಸ್ವಇಚ್ಛೆಯಿಂದ ಒಂದೇ ಮಗುವನ್ನು ಪೋಷಕತ್ವಕ್ಕಾಗಿ ಪಡೆದುಕೊಳ್ಳಲು ಒಪ್ಪಿಗೆ ಇರಬೇಕು. ಮಗುವನ್ನು ಪೋಷಿಸಲು ಆರ್ಥಿಕವಾಗಿ ಸದೃಢರಾಗಿರಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಓಂಕಾರೇಶ್ವರ ದೇವಸ್ಥಾನದ ರಸ್ತೆ, ಕಲ್ಯಾಣ ಮಂಟಪದ ಹತ್ತಿರ ಮಡಿಕೇರಿ, ಕೊಡಗು ಜಿಲ್ಲೆ ದೂರವಾಣಿ ೦೮೨೭೨-೨೨೮೮೦೦ ಇವರನ್ನು ಸಂಪರ್ಕಿಸಲು ಕೋರಿದೆ.