ಸಿದ್ದಾಪುರ, ಜು. ೨೯: ಗ್ರಾಹಕರ ಪಿಗ್ಮಿ ಹಣವನ್ನು ವಂಚನೆ ಮಾಡಿದ ತಿಮ್ಮಯ್ಯ ವಿರುದ್ಧ ಮತ್ತಷ್ಟು ಮಂದಿ ಗ್ರಾಹಕರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿದ್ದಾಪುರದ ಡಿ.ಸಿ.ಸಿ ಬ್ಯಾಂಕ್ನಲ್ಲಿ ಈ ಹಿಂದೆ ಪಿಗ್ಮಿ ಹಣ ಸಂಗ್ರಹಣೆ ಮಾಡುತ್ತಿದ್ದ ಸಿದ್ದಾಪುರದ ನಿವಾಸಿ ಕೆ.ಎಂ. ತಿಮ್ಮಯ್ಯ ಎಂಬವರು ಗ್ರಾಹಕರ ದಾಖಲಾತಿಗಳನ್ನು ಬಳಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ೨೦ಕ್ಕೂ ಅಧಿಕ ಮಂದಿ ದೂರು ನೀಡಿದ್ದರು. ಈ ಬಗ್ಗೆ ೨೯ ರ ಶಕ್ತಿಯಲ್ಲಿ ಸುದ್ದಿ ಪ್ರಕಟ ಗೊಂಡಿದ್ದು, ಇದರ ಬೆನ್ನಲ್ಲಿ ಇದೀಗ ಎಚ್ಚೆತ್ತುಕೊಂಡ ಹಲವಾರು ಮಂದಿ ಸಿದ್ದಾಪುರ ಪೊಲೀಸ್ ಠಾಣೆಗೆ ತಿಮ್ಮಯ್ಯ ವಿರುದ್ಧ ದೂರು ನೀಡಿದ್ದಾರೆ.
ಮಹಿಳೆಯರಿಂದಲೂ ದೂರು : ಗುರುವಾರದಂದು ಸಿದ್ದಾಪುರ ವ್ಯಾಪ್ತಿಯ ಮಹಿಳೆಯರು ಕೂಡ ತಮ್ಮ ಹೆಸರಿನಲ್ಲಿ ತಿಮ್ಮಯ್ಯ ಲಕ್ಷಾಂತರ ಸಾಲವನ್ನು ಪಡೆದು ವಂಚನೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಸಾಲ ಪಡೆದಿರುವುದಾಗಿ ಒಂದೆಡೆ ಬ್ಯಾಂಕ್ ಮುಖಾಂತರ ನೋಟೀಸ್ ಬರುತ್ತಿದ್ದು, ಇನ್ನೊಂದೆಡೆ ತಾವು ಪಡೆಯದ ಸಾಲದ ಬಗ್ಗೆ ಮರು ಪಾವತಿ ಮಾಡುವಂತೆ ನ್ಯಾಯಾಲಯ ದ ಮುಖಾಂತರ ಕೂಡ ನೋಟೀಸ್ ಬರುತ್ತಿದೆ. ಹಲವಾರು ಬಡ ಜನರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಇದೀಗ ಬ್ಯಾಂಕ್ನಿAದ ಲಕ್ಷಾಂತರ ರೂಪಾಯಿ ಸಾಲದ ಹಣ ಪಾವತಿಸುವಂತೆ ಒತ್ತಡಗಳು ಬರುತ್ತಿದ್ದು, ಇದರಿಂದ ಸಮಸ್ಯೆ ಎದುರಾಗಿದೆ ಎಂದು ಹಲವಾರು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿ ದ್ದಾರೆ. ಈ ಹಿಂದೆ ಡಿ.ಸಿ.ಸಿ. ಬ್ಯಾಂಕ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ದಾಖಲಾತಿಗಳನ್ನು ಸಮರ್ಪಕವಾಗಿ ಪರಿಶೀಲನೆ ನಡೆಸದೇ ತಿಮ್ಮಯ್ಯ ಮುಖಾಂತರ ಲಕ್ಷಾಂತರ ರೂಪಾಯಿ ಪಿಗ್ಮಿ ಸಾಲದ ಹಣವನ್ನು ಯಾವ ರೀತಿಯಲ್ಲಿ ನೀಡಿದ್ದಾರೆ ಎಂದು ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಅಲ್ಲದೇ ಬ್ಯಾಂಕ್ ನ ವ್ಯವಸ್ಥಾಪಕರಿಗೆ ತಿಮ್ಮಯ್ಯ ವಂಚನೆ ಮಾಡಿರುವ ಬಗ್ಗೆ ಮಾಹಿತಿ ತಿಳಿದಿದ್ದರೂ ಕೂಡ ಏಕಾಏಕಿ ತಿಮ್ಮಯ್ಯನನ್ನು ಕೆಲಸದಿಂದ ತೆಗೆದು ಹಾಕಿರುವುದರಿಂದ ಆತ ಪರಾರಿಯಾಗಿರುತ್ತಾನೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಮತ್ತಷ್ಟು ಸಮಸ್ಯೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಿ ಬಡ ಜನತೆಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಟ್ಟು ಸಮಸ್ಯೆಯನ್ನು ಇತ್ಯರ್ಥಪಡಿಸಬೇಕೆಂದು ಸಾರ್ವ ಜನಿಕರು ಆಗ್ರಹಿಸಿದ್ದಾರೆ.