ವೀರಾಜಪೇಟೆ, ಜು. ೩೦: ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಪದವಿ ತರಗತಿಗಳ ೧, ೩, ಹಾಗೂ ೫ ನೇ ಸೆಮಿಸ್ಟರ್ ಪರೀಕ್ಷೆಗಳು ಆಗಸ್ಟ್ ೨ ರಿಂದ ಮರುಆರಂಭಗೊಳ್ಳಲಿವೆ.

ಕಳೆದ ಏಪ್ರಿಲ್‌ನಲ್ಲಿ ಸಾರಿಗೆ ನೌಕರರ ಮುಷ್ಕರ ಹಾಗೂ ಕೊರೊನಾ ಲಾಕ್‌ಡೌನ್‌ನಿಂದಾಗಿ ಪರೀಕ್ಷೆಗಳು ಅರ್ಧಕ್ಕೆ ಸ್ಥಗಿತವಾಗಿತ್ತು. ಇದೀಗ ವಿಶ್ವವಿದ್ಯಾಲಯವು ಆದೇಶದ ಸುತ್ತೋಲೆಯನ್ನು ಹೊರಡಿಸಿದ್ದು ಆಗಸ್ಟ್ ೨ರಿಂದ ಆಗಸ್ಟ್ ೧೭ರ ತನಕ ಬಾಕಿ ಉಳಿದಿರುವ ಪರೀಕ್ಷೆಗಳು ವೇಳಾಪಟ್ಟಿಯಂತೆ ನಡೆಯಲಿವೆ. ಕಳೆದ ವರ್ಷ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಿ ಇತರರನ್ನು ಉತ್ತೀರ್ಣ ಗೊಳಿಸ ಲಾಗಿತ್ತು. ಪದವಿ ವಿದ್ಯಾರ್ಥಿಗಳಿಗೆ ಈಗಾಗಲೇ ಮುಂದಿನ ೨, ೪, ೬ ಸೆಮಿಸ್ಟರ್‌ಗಳ ಆನ್‌ಲೈನ್ ತರಗತಿಗಳು ಸಹ ಪ್ರಾರಂಭವಾಗಿರುತ್ತದೆ. ಪರೀಕ್ಷೆಯ ಬಳಿಕ ಭೌತಿಕ ಅಥವಾ ಆನ್‌ಲೈನ್ ತರಗತಿ ನಡೆಸಲು ವಿಶ್ವವಿದ್ಯಾಲಯವು ನಿರ್ಧರಿಸಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗುತ್ತಿದ್ದಾರೆ. ಪದವಿ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆಯ ಮೊದಲ ಡೋಸನ್ನು ಕಾಲೇಜುಗಳಲ್ಲೇ ನೀಡಲಾಗಿದ್ದು, ಕೋವಿಡ್ ನಿಯಮ ಪಾಲನೆ ಕಡ್ಡಾಯವಾಗಿರುತ್ತದೆ.

ಪದವಿ ಪರೀಕ್ಷೆಗಳಿಗೆ ಹಾಜ ರಾಗಲು ವಿದ್ಯಾರ್ಥಿಗಳಿಗೆ ಸಾರಿಗೆಯ ಸಮಸ್ಯೆಯಿದೆ. ಜಿಲ್ಲೆಯಲ್ಲಿ ಇನ್ನೂ ಸರಿಯಾಗಿ ಸರ್ಕಾರಿ ಹಾಗೂ ಖಾಸಗಿ ಬಸ್ ಸಂಚಾರ ಆರಂಭ ವಾಗಿಲ್ಲ. ಸೀಮಿತ ಬಸ್‌ಗಳು ಮಾತ್ರ ಓಡಾಡುತ್ತಿವೆ. ಆದರಿಂದ ಬಸ್ ವ್ಯವಸ್ಥೆಯನ್ನು ಸಂಬAಧಪಟ್ಟವರು ಕಲ್ಪಿಸಿಕೊಡಬೇಕಾಗಿ ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ.

ಕೊರೊನಾ ಲಾಕ್‌ಡೌನ್ ಬಳಿಕ ಪದವಿ ತರಗತಿಗಳ ಪರೀಕ್ಷೆಗಳು ಪುನರಾರಂಭಗೊಳ್ಳುತ್ತಿವೆ. ಈಗಾಗಲೇ ಸರ್ಕಾರದ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಮಾರ್ಗಸೂಚಿ ಯಂತೆ ಹಾಗೂ ಆದೇಶದಂತೆ ಒಂದು ವಾರಗಳ ಕಾಲ ಪುನರ್ನಮನ ತರಗತಿಗಳನ್ನು ನಡೆಸಲಾಗಿದ್ದು, ಪರೀಕ್ಷೆಗೆ ಸಜ್ಜುಗೊಳಿಸಲಾಗಿದೆ. ಪರೀಕ್ಷೆಗಳು ಯಾವುದೇ ಆತಂಕವಿಲ್ಲದೆ ಸುಗಮವಾಗಿ ನಡೆಯುವ ವಿಶ್ವಾಸವಿದೆ. ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ವಿಶ್ವಾಸವಿದೆ ಎಂದು ವೀರಾಜಪೇಟೆ ಸಂತ ಅನ್ನಮ್ಮ

ಪದವಿ ಕಾಲೇಜು ಪ್ರಾಂಶುಪಾಲ ರೆ. ಫಾ. ರೋನಿ ರವಿಕುಮಾರ್ ತಿಳಿಸಿದ್ದಾರೆ.

ಪರೀಕ್ಷೆ ಆಗುವುದು ತುಂಬಾ ಮುಖ್ಯವಾಗಿದೆ. ಪರೀಕ್ಷೆಗಳನ್ನು ಮಾಡಿದರೆ ನಮ್ಮ ಮುಂದಿನ ಓದನ್ನು ಮುಂದುವರೆಸಬಹುದು. ಇಲ್ಲದಿದ್ದಲ್ಲಿ ನಮ್ಮ ಮುಂದಿನ ಅಮೂಲ್ಯವಾದ ಸಮಯವು ವ್ಯರ್ಥವಾಗುತ್ತದೆ. ಪರೀಕ್ಷೆಗಳನ್ನು ಮಾಡದಿದ್ದರೆ ಈ ವರೆಗೆ ಮಾಡಿರುವ ಪಾಠಗಳೆಲ್ಲ ಮರೆತು ಹೋಗುವ ಸಾಧ್ಯತೆಗಳಿವೆ. ಹಾಗಾಗಿ ಪರೀಕ್ಷೆಗಳನ್ನು ನಡೆಸುವುದು ಉತ್ತಮ. ಕೋವಿಡ್ -೧೯ ರ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುತ್ತೇವೆ ಎಂದು ತೃತೀಯ ಬಿ ಕಾಂ ವಿದ್ಯಾರ್ಥಿನಿ ನಮೃತಾ ವಿ. ಆರ್ ಹೇಳಿದ್ದಾರೆ.