ಕೋವರ್ ಕೊಲ್ಲಿ ಇಂದ್ರೇಶ್

ಮಡಿಕೇರಿ, ಜು. ೩೦: ದೇಶದ ಪ್ರಮುಖ ವಾಣಿಜ್ಯ ಬೆಳೆ ಕಾಫಿಯ ದರವು ಕಳೆದ ಬುಧವಾರ ದಂದು ಚಿಕ್ಕಮಗಳೂರಿನಲ್ಲಿ ಸರ್ವಕಾಲಿಕ ಏರಿಕೆ ದಾಖಲಿಸಿದೆ. ಈ ಸರ್ವಕಾಲಿಕ ದಾಖಲೆಯಲ್ಲಿ ಅರೇಬಿಕಾ ಪಾರ್ಚ್ಮೆಂಟ್ ಮಾದರಿಯ ಕಾಫಿಯ ದರ ೫೦ ಕೆಜಿಗಳ ಚೀಲವೊಂದಕ್ಕೆ ೧೪,೪೦೦ -೧೪,೬೦೦ ರೂಪಾಯಿಗಳನ್ನು ತಲುಪಿತು. ಆದರೆ ಇಷ್ಟೊಂದು ದರ ಏರಿಕೆ ಅರೇಬಿಕಾ ಕಾಫಿಗೆ ಮಾತ್ರ ಸೀಮಿತವಾಗಿದ್ದು, ಇತರ ಮಾದರಿಯ ಕಾಫಿಗೆ ಲಭ್ಯವಾಗಲಿಲ್ಲ. ಮೂಡಿಗೆರೆಯ ಮುದ್ರೆಮನೆ ಕಾಫಿ ಕ್ಯೂರಿಂಗ್ ವರ್ಕ್ಸ್ ಮತ್ತು ಚಿಕ್ಕಮಗಳೂರಿನ ಮಲ್ನಾಡ್ ಕ್ಯೂರಿಂಗ್ ವರ್ಕ್ಸ್ನಲ್ಲಿ ಮೇಲಿನ ದರ ಇತ್ತು.

ಆದರೂ ರೊಬಸ್ಟಾ ಚೆರಿ ಕಾಫಿ ದರ ೩೬೦೦-೩೮೦೦ ಕ್ಕೆ ಸೀಮಿತವಾಗಿದ್ದು, ಅರೇಬಿಕಾ ಚೆರಿಯ ದರ ೫೮೦೦-೬೨೦೦ ಮತ್ತು ರೊಬಸ್ಟಾ ಪಾರ್ಚ್ಮೆಂಟ್ ಕಾಫಿಯ ದರ ೬೨೦೦-೬೩೦೦ ರೂಪಾಯಿಗಳಿಗೆ ಅಲ್ಪ ಏರಿಕೆ ದಾಖಲಿಸಿತ್ತು. ಆದರೆ ಈ ದರ ಕೇವಲ ಒಂದು ದಿನ ಮಾತ್ರ ಇದ್ದು ಶುಕ್ರವಾರ ಪುನಃ ಅರೇಬಿಕಾ ಪಾರ್ಚ್ಮೆಂಟ್ ಕಾಫಿಯ ದರ ಶುಕ್ರವಾರ ೧೩,೫೦೦ ಕ್ಕೆ ಕುಸಿದಿದೆ. ಕಳೆದ ಜನವರಿಯಲ್ಲಿ ಕಾಫಿ ದರ ೧೦ ಸಾವಿರ ರೂಪಾಯಿಗಳ ಆಸು ಪಾಸಿನಲ್ಲಿತ್ತು. ದಶಕಗಳ ಹಿಂದೆ ಕಾಫಿಯನ್ನು ಸರ್ಕಾರವೇ ಕಾಫಿ ಮಂಡಳಿಯ ಮೂಲಕ ಖರೀದಿಸಿ ರಫ್ತು ಮತ್ತು ಮಾರಾಟ ಮಾಡುತಿತ್ತು. ಕಾಫಿ ಬೆಳೆಗಾರರ ತೀವ್ರ ಪ್ರತಿಭಟನೆಯ ನಂತರ ೧೯೯೨ ರಿಂದ ಕಾಫಿ ಬೆಳೆಗಾರರೇ ಮುಕ್ತ ಮಾರುಕಟ್ಟೆಯಲ್ಲಿ ಕಾಫಿಯನ್ನು ಮಾರಾಟ ಮಾಡಲು ಅನುವು ಮಾಡಿಕೊಡಲಾಯಿತು. ಇದೀಗ ಬುಧವಾರ ಏರಿಕೆಯಾಗಿದ್ದ ದರ ೨೮ ವರ್ಷಗಳ ಗರಿಷ್ಠವಾಗಿದೆ.

ಕಾಫಿಯ ದರ ಸರ್ವಕಾಲಿಕ ಏರಿಕೆ ದಾಖಲಿಸಿದ್ದರೂ ಬೆಳೆಗಾರರ ಮುಖದಲ್ಲಿ ಮಂದಹಾಸವೇನೂ ಮೂಡುತ್ತಿಲ್ಲ. (ಮೊದಲ ಪುಟದಿಂದ) ಏಕೆಂದರೆ ಈಗ ದರ ಏರಿಕೆ ಆಗಿರುವುದು ಅರೇಬಿಕಾ ಚೆರಿ ಕಾಫಿಗೆ ಮಾತ್ರ. ಅದೂ ಅಲ್ಲದೆ ಡಿಸೆಂಬರ್‌ನಿAದ ಫೆಬ್ರವರಿಯವರೆಗೆ ಕಾಫಿ ಕೊಯ್ಲಿನ ಸಮಯವಾಗಿದ್ದು ಶೇಕಡಾ ೯೦ ರಷ್ಟು ಬೆಳೆಗಾರರು ಕಾಫಿಯನ್ನು ಮಳೆಗಾಲಕ್ಕಿಂತಲೂ ಮೊದಲೇ ಮಾರಾಟ ಮಾಡುತ್ತಾರೆ. ದರ ಕುಸಿಯುವ ಆತಂಕ ಮತ್ತು ದಾಸ್ತಾನು ಗೋದಾಮುಗಳ ಕೊರತೆಯೇ ಇದಕ್ಕೆ ಕಾರಣವಾಗಿದೆ.

ಈ ಕುರಿತು ಮಾತನಾಡಿದ ಸೋಮವಾರಪೇಟೆಯ ಚೌಡ್ಲು ಗ್ರಾಮದ ಕಾಫಿ ಬೆಳೆಗಾರ ರಾಜೀವ್ ಕುಶಾಲಪ್ಪ ಅವರು ಇತ್ತೀಚಿನ ವರ್ಷಗಳಲ್ಲಿ ಕಾಫಿಯ ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆ ದಾಖಲಿಸಿದ್ದು, ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕಳೆದ ಒಂದು ದಶಕದಿಂದ ಗೊಬ್ಬರ, ಕ್ರಿಮಿನಾಶಕ ಮತ್ತು ಕಾರ್ಮಿಕರ ಕೂಲಿ ದರ ದುಪ್ಪಟ್ಟಾಗಿದೆ ಆದರೆ ಕಾಫಿ ದರ ಮಾತ್ರ ಇದ್ದಷ್ಟೇ ಇದೆ. ಇನ್ನು ಹವಾಮಾನ ವೈಪರೀತ್ಯದಿಂದಲೂ ಬೆಳೆಗಾರ ಪ್ರತಿ ವರ್ಷವೂ ನಷ್ಟ ಅನುಭವಿಸುತಿದ್ದಾನೆ. ಕಾಫಿಯಿಂದ ವಾರ್ಷಿಕ ಕೋಟ್ಯಂತರ ರೂಪಾಯಿ ವಿದೇಶೀ ವಿನಿಮಯ ಗಳಿಸುವ ಸರ್ಕಾರವು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ನೆರವಾಗಬೇಕು ಎಂದು ಒತ್ತಾಯಿಸಿದರು. ಈ ದರ ಏರಿಕೆ ತಾತ್ಕಾಲಿಕವಾಗಿದ್ದು ಬೆಳೆಗಾರರು ತಮ್ಮ ಅವಶ್ಯಕತೆಗೆ ತಕ್ಕಂತೆ ಪೂರ್ಣ ದಾಸ್ತಾನು ಇಟ್ಟುಕೊಳ್ಳದೆ ದುರಾಸೆಗೆ ಬಲಿಯಾಗದೆ ಹಂತ ಹಂತವಾಗಿ ಮಾರಾಟ ಮಾಡಿಕೊಂಡು ಸರಾಸರಿ ಬೆಲೆ ಪಡೆಯಬೇಕೆಂದು ಅವರು ಸಲಹೆ ನೀಡಿದರು.

ಕಾಫಿ ದರ ಏರಿಕೆಯ ಕುರಿತು ಕುಶಾಲನಗರದ ಕಾಫಿ ಉದ್ಯಮಿ ಎಸ್‌ಎಲ್‌ಎನ್ ಕಾಫಿ ಕ್ಯೂರಿಂಗ್ ವರ್ಕ್ಸ್ನ ವ್ಯವಸ್ಥಾಪಕ ಪಾಲುದಾರ ಸಾತಪ್ಪನ್ ಅವರೊಂದಿಗೆ ಮಾತನಾಡಿದಾಗ ಅಂರ‍್ರಾಷ್ಟಿçÃಯ ಮಾರುಕಟ್ಟೆ ಪರಿಸ್ಥಿತಿಗೆ ಅನುಗುಣವಾಗಿ ದರದ ಏರಿಳಿತ ಆಗುತಿದ್ದು ಮುಂದಿನ ದಿನಗಳಲ್ಲಿ ಈ ಏರಿಳಿತ ಹೆಚ್ಚಲಿದೆ ಎಂದರು. ವಿಶ್ವದ ಪ್ರಮುಖ ಕಾಫಿ ಉತ್ಪಾದನಾ ದೇಶ ಬ್ರೆಜಿಲ್ ನಲ್ಲಿ ಹಿಮಪಾತದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ದರ ಏರಿಕೆ ಆಗಿದೆ ಎಂದ ಅವರು ಆದರೆ ಬ್ರೆಜಿಲ್ ನಲ್ಲಿ ಶೇಕಡಾ ೧೦ ರಷ್ಟು ಮಾತ್ರ ಬೆಳೆ ನಾಶವಾಗಿರುವ ಮಾಹಿತಿ ಇದ್ದು ಸಂಪೂರ್ಣ ಕಾಫಿ ಬೆಳೆ ನಾಶವಾಗಿಲ್ಲ ಎಂದರು.

ದೇಶದ ಕಾಫಿ ಉತ್ಪಾದನೆಯಲ್ಲಿ ಅರೇಬಿಕಾ ಕಾಫಿಯ ಪಾಲು ಒಂದು ಲಕ್ಷ ಟನ್‌ಗಳಿಗೂ ಕಡಿಮೆ ಇದ್ದರೆ ರೋಬಸ್ಟಾ ಕಾಫಿಯ ಪಾಲು ೨.೫ ಲಕ್ಷ ಟನ್‌ಗಳಿಗಿಂತ ಹೆಚ್ಚಾಗಿದೆ. ದೇಶದ ಒಟ್ಟು ಕಾಫಿಯ ಉತ್ಪಾದನೆ ಸರಾಸರಿ ೩.೬ ಲಕ್ಷ ಟನ್‌ಗಳಾಗಿವೆ. ಹೀಗಾಗಿ ಅರೇಬಿಕಾ ಬೆಳೆಯುವ ಶೇಕಡಾ ೩೦ ರಷ್ಟು ಕಾಫಿ ಬೆಳೆಗಾರರಿಗೆ ಈಗಿನ ಏರಿಕೆ ಅನುಕೂಲ ಆಗುವುದಾದರೂ ಬಹುತೇಕರು ಕಾಫಿಯನ್ನು ಈಗಾಗಲೇ ಮಾರಾಟ ಮಾಡಿರುವುದರಿಂದ ಬೆಲೆ ಏರಿಕೆಯ ಲಾಭ ಸಿಗುತ್ತಿಲ್ಲ.

ಜಾಗತಿಕವಾಗಿ ಬ್ರೆಜಿಲ್ ವಿಶ್ವದಲ್ಲೇ ಕಾಫಿ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದು ಇದು ವಾರ್ಷಿಕ ೨೬.೫ ಲಕ್ಷ ಟನ್‌ಗಳಷ್ಟು ಕಾಫಿ ಉತ್ಪಾದನೆ ಮಾಡುತ್ತಿದೆ. ಎರಡನೇ ಸ್ಥಾನದಲ್ಲಿ ವಿಯಟ್ನಾಂ ಇದ್ದು ಇಲ್ಲಿ ೧೬.೫ ಲಕ್ಷ ಟನ್ ಕಾಫಿ ಉತ್ಪಾದನೆ ಆಗುತ್ತಿದೆ. ಈ ಪಟ್ಟಿಯಲ್ಲಿ ಭಾರತದ್ದು ಏಳನೇ ಸ್ಥಾನ ಆಗಿದೆ.

ಬ್ರೆಜಿಲ್ ಸರ್ಕಾರದ ಆಹಾರ ಪೂರೈಕೆ ಸಂಸ್ಥೆ ಕೊನಾಬ್‌ನ ಅಂದಾಜಿನ ಪ್ರಕಾರ ಕಳೆದ ವಾರದಲ್ಲಿ ಬಿದ್ದ ಹಿಮದಿಂದಾಗಿ ಅಲ್ಲಿನ ೧.೫ ರಿಂದ ೨ ಲಕ್ಷ ಹೆಕ್ಟೇರ್‌ನಷ್ಟು ತೋಟಗಳಿಗೆ ಬೆಳೆ ನಷ್ಟ ಆಗಿದ್ದು ಇದು ದೇಶದ ಒಟ್ಟು ಅರೇಬಿಕಾ ಬೆಳೆ ಪ್ರದೇಶದ ೧೧ ಪ್ರತಿಶತದಷ್ಟು ಪರಿಣಾಮ ಬೀರಿದೆ ಎಂದು ಹೇಳಿದೆ. ೧೯೯೪ ರ ನಂತರ ಬ್ರೆಜಿಲ್ ಇಂತಹ ಹವಾಮಾನ ವೈಪರೀತ್ಯವನ್ನು ಅನುಭವಿಸಿದ್ದು ಇದೇ ಮೊದಲು ಎಂದು ಅಲ್ಲಿನ ಕಾಫಿ ವ್ಯಾಪಾರಿಯೊಬ್ಬರು ಹೇಳಿದ್ದಾರೆ. ಆದರೂ ಕೂಡ ಈಗ ಆಗಿರುವ ಹಾನಿಯ ನಿಖರ ಪ್ರಮಾಣ ತಿಳಿದು ಬಂದಿಲ್ಲ ಎಂದು ಉದ್ಯಮ ಮೂಲಗಳು ತಿಳಿಸಿವೆ.

ಅರೇಬಿಕಾ ಕಾಫಿ ಫ್ಯೂಚರ್ಸ್ ಜೂನ್ ತಿಂಗಳ ನಂತರ ಸುಮಾರು ಶೇಕಡಾ ೩೫ ರಷ್ಟು ಹೆಚ್ಚಾಗಿದೆ, ಮುಂಬರುವ ವಾರಗಳಲ್ಲಿ ಪ್ರಮುಖ ಚಿಲ್ಲರೆ ಬ್ರ‍್ಯಾಂಡ್‌ಗಳು ಕಾಫಿಯ ಬೆಲೆಯನ್ನು ಹೆಚ್ಚಿಸುವ ಸಾಧÀ್ಯತೆ ಇದೆ. ವಿಶ್ವದ ಅತಿದೊಡ್ಡ ಕಾಫಿ ಸಂಸ್ಕರಣ ಮತ್ತು ಸರಪಳಿ ಚಿಲ್ಲರೆ ವ್ಯಾಪಾರಿ ಕಂಪೆನಿಗಳಾಗಿರುವ ಸ್ಟಾರ್‌ಬಕ್ಸ್, ನೆಸ್ಲೆ ಮತ್ತು ಜೆಎಬಿ ಹೋಲ್ಡಿಂಗ್ಸ್, ವಕ್ತಾರರು ಮಾಧ್ಯಮಗಳಿಗೆ ಕಾಫಿ ದರದ ಏರಿಳಿತಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಬ್ರೆಜಿಲ್‌ನಲ್ಲಿಯೇ ಚಿಲ್ಲರೆ ಕಾಫಿ ಮಾರಾಟ ಮಾಡುವ ಕಂಪೆನಿಗಳು ಜೂನ್‌ನಿಂದ ಈಚೆಗೆ ಮೂರು ಬಾರಿ ದರ ಏರಿಕೆ ಮಾಡಿವೆ.

ಇನ್ನು ಮುಂದೆಯೂ ದೇಶದಲ್ಲಿ ಅರೇಬಿಕಾ ಕಾಫಿ ದರ ಅಲ್ಪ ಹೆಚ್ಚಳ ಜತೆಗೇ ಏರಿಳಿತ ಆಗುವ ಸಾಧÀ್ಯತೆ ಇದೆ. ಆದರೆ ಇತರ ಮಾದರಿ ಕಾಫಿಯ ದರಗಳಲ್ಲಿ ಹೆಚ್ಚಿನ ವ್ಯತ್ಯಾಸ ಆಗುವುದಿಲ್ಲ ಎಂದು ಉದ್ಯಮ ಮೂಲಗಳು ತಿಳಿಸಿವೆ.