ವೀರಾಜಪೇಟೆ, ಜು. ೩೦: ದೇಶದ ನಾನಾ ಭಾಗಗಳಲ್ಲಿ ಅಕ್ರಮವಾಗಿ ವಲಸಿಗರಾಗಿ ಆಗಮಿಸಿ ವಿಧ್ವಂಸಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನುಸುಳುಕೋರರು ಮತ್ತು ರೋಹಿಂಗ್ಯಾಗಳನ್ನು ದೇಶದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ತಾಲೂಕು ಭಜರಂಗದಳ ಹಾಗೂ ಇತರ ಸಂಘಟನೆಗಳ ಮೂಲಕ ಆಗ್ರಹಿಸಲಾಗಿದೆ.

ಈ ಬಗ್ಗೆ ಇಂದು ವೀರಾಜಪೇಟೆ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಸರ್ವೋಚ್ಚ ನ್ಯಾಯಾಲಯ ಅಂತಹವರನ್ನು ಗಡಿಪಾರು ಮಾಡಬೇಕೆಂಬ ಆದೇಶವನ್ನು ನೀಡಿದೆ. ಅಕ್ರಮ ಬಾಂಗ್ಲಾದೇಶಿಗರು ವಲಸಿಗರ ನೆಪದಲ್ಲಿ ದೇಶದ ನಾನಾ ಸ್ಥಳಗಳಲ್ಲಿ ನೆಲೆಸಿದ್ದು. ಹಲವು ರೀತಿಯ ವಿಧ್ವಂಸಕ ಕೃತ್ಯ, ಅತ್ಯಾಚಾರ, ಕಳ್ಳತನ ಕೊಲೆ, ಸುಲಿಗೆ ಮತ್ತು ದಂಗೆಗಳನ್ನು ಮಾಡಿ ಇಡೀ ಸಮಾಜವನ್ನು ಭಯಭೀತಿಗೊಳಿಸುವ ಕಾರ್ಯದಲ್ಲಿ ತೊಡಗಿರುವದಾಗಿ ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಸಂಘಟನೆಯ ಪ್ರಮುಖರು ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಶೀರೆಸ್ತೆದಾರ್ ಸಂಜಿವ್ ಕುಮಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ತಾಲೂಕು ಭಜರಂಗದಳದ ಸಂಯೋಜಕರಾದ ವಿವೇಕ್ ರೈ, ವಿಶ್ವ ಹಿಂದೂ ಪರಿಷತ್ ನ ತಾಲೂಕು ಕಾರ್ಯದರ್ಶಿ ಬಿ.ಎಂ. ಕುಮಾರ್ ನಗರ ಅಧ್ಯಕ್ಷರು ಪೊನ್ನಪ್ಪ ರೈ ಮತ್ತು ಭಜರಂಗದಳದ ನಗರ ಸಂಚಾಲಕರಾದ ದಿನೇಶ್ ನಾಯರ್ ಪಾಲ್ಗೊಂಡಿದ್ದರು.

-ಕೆ.ಕೆ.ಎಸ್.