ಮಡಿಕೇರಿ, ಜು. ೨೮: ಮಡಿಕೇರಿ ನಗರ ಕಾಂಗ್ರೆಸ್ ಮಹಿಳಾ ಘಟಕದ ಸಭೆ ಪಕ್ಷದ ನಗರಾಧ್ಯಕ್ಷೆ ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್, ನಗರಸಭಾ ವ್ಯಾಪ್ತಿಯ ೨೩ ವಾರ್ಡ್ಗಳಲ್ಲಿ ಮಹಿಳಾ ಘಟಕಗಳನ್ನು ರಚಿಸಬೇಕು ಮತ್ತು ನಗರ ಕಾಂಗ್ರೆಸ್ ಘಟಕದ ಸಮನ್ವಯತೆಯೊಂದಿಗೆ ಪಕ್ಷ ಸಂಘಟನೆ ಮಾಡಬೇಕೆಂದು ಸಲಹೆ ನೀಡಿದರು.

ತೈಲೋತ್ಪನ್ನಗಳು ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಕ್ರಮವನ್ನು ಖಂಡಿಸಿ ಹಾಗೂ ಮೊಟ್ಟೆ ಖರೀದಿ ಹಗರಣದ ಸಚಿವೆ ವಿರುದ್ಧ ಮುಂದಿನ ದಿನಗಳಲ್ಲಿ ಮಹಿಳಾ ಕಾಂಗ್ರೆಸ್‌ನಿAದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಕೆಪಿಸಿಸಿ ಮಾಧ್ಯಮ ಸಂವಹನ ವಕ್ತಾರ ಟಿ.ಪಿ. ರಮೇಶ್ ಮಾತನಾಡಿ, ಜಿಲ್ಲೆಯಾದ್ಯಂತ ಕಾಂಗ್ರೆಸ್ ಮಹಿಳಾ ಘಟಕಗಳನ್ನು ಸಂಘಟಿಸಬೇಕು, ಆ ಮೂಲಕ ಪಕ್ಷದ ಬಲವರ್ಧನೆ ಮಾಡಬೇಕೆಂದು ಕರೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ ಬ್ಲಾಕ್ ಮತ್ತು ನಗರ ಭಾಗದಲ್ಲಿ ಪಕ್ಷ ಸಂಘಟನೆಗೆ ಎಲ್ಲರು ಕೈಜೋಡಿಸ ಬೇಕು ಮತ್ತು ಜಿಲ್ಲೆಯಲ್ಲಿ ಪಕ್ಷ ಬಲಗೊಳ್ಳಲು ಮಹಿಳಾ ಸದಸ್ಯತ್ವ ಆಂದೋಲನ ಚುರುಕುಗೊಳ್ಳಬೇಕು ಎಂದು ತಿಳಿಸಿದರು.

ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಮಾತನಾಡಿ, ಪಕ್ಷದಿಂದ ನಗರಸಭಾ ಸದಸ್ಯನಾಗಿ ಆಯ್ಕೆಗೊಂಡಿದ್ದು, ನಗರದ ಜನರ ಸಮಸ್ಯೆಗಳನ್ನು ಅರಿತು ಕೆಲಸ ಮಾಡಲು ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಸಹಕಾರ ನೀಡಬೇಕೆಂದರು.

ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರಿಗೆ ಹಾಗೂ ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ಜಯಂತಿ ಅವರ ನಿಧನಕ್ಕೆ ಸಭೆಯಲ್ಲಿ ಸಂತಾಪ ಸೂಚಿಸÀಲಾಯಿತು.

ಹಿರಿಯ ಮುಖಂಡ ವಿ.ಪಿ. ಸುರೇಶ್, ನಗರಸಭಾ ಮಾಜಿ ಅಧ್ಯಕ್ಷೆ ಜುಲೆಕಾಬಿ, ಮಾಜಿ ಸದಸ್ಯರುಗಳಾದ ಪ್ರಕಾಶ್ ಆಚಾರ್ಯ, ಫಿಲೋಮಿನಾ, ನಗರ ಹಿಂದುಳಿದ ವಿಭಾಗದ ಅಧ್ಯಕ್ಷ ಜಿ.ಸಿ. ಜಗದೀಶ್, ನಗರ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಮುದ್ದುರಾಜ್, ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರಾದ ಫರ್ದಾನ, ಕ್ರೀಡಾಧ್ಯಕ್ಷರಾದ ಮುಮ್ತಾಜ್ ಬೇಗಂ, ಪ್ರಮುಖರಾದ ರಶೀದ, ಲೀಲಾವತಿ, ಪ್ರೇಮಾ, ಶಾಲಿ, ಸಭಿಯಾ, ಶಾಂತಮ್ಮ, ಬಬಿತಾ, ಚಿನ್ನಮ್ಮ, ಉದಯ ಚಂದ್ರಿಕಾ, ಕುಸುಮಾ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಲಿಲ್ಲಿ ರವಿಗೌಡ ಸ್ವಾಗತಿಸಿ, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್ ವಂದಿಸಿದರು.