ಮಡಿಕೇರಿ, ಜು. ೨೮: ಸೋಮವಾರಪೇಟೆ ತಾಲೂಕು, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಬಸವನಹಳ್ಳಿ ಮತ್ತು ಕೂಡಿಗೆ ಗ್ರಾಮ ಪಂಚಾಯಿತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ದಿಡ್ಡಳ್ಳಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಿ ಮೂಲಭೂತ ಸೌಲಭ್ಯವನ್ನು ಒದಗಿಸಲಾಗಿದೆ.

ಈ ಪುನರ್ವಸತಿ ಕೇಂದ್ರಗಳ ಪೈಕಿ ಬಸವನಹಳ್ಳಿಯಲ್ಲಿ ರಾಜೀವ್‌ಗಾಂಧಿ ವಸತಿ ನಿಗಮದಿಂದ ಅನುಮೋದಿತವಾದ ನಿವೇಶನಗಳಲ್ಲಿ ೧೭೪ ಮನೆಗಳನ್ನು ಹಾಗೂ ಬ್ಯಾಡಗೊಟ್ಟದಲ್ಲಿ ೩೫೪ ಮನೆಗಳನ್ನು ನಿರ್ಮಿಸಿದ್ದು, ಈ ಪುನರ್ವಸತಿ ಕೇಂದ್ರಗಳ ಮನೆ ಮನೆ ಸಮೀಕ್ಷೆ ನಡೆಸಲಾಗಿದ್ದು ಕೆಲವು ಮನೆಗಳಲ್ಲಿ ಫಲಾನುಭವಿಗಳು ವಾಸವಾಗದೇ ಬೀಗ ಹಾಕಿರುವುದು ಹಾಗೂ ಕೆಲವು ಮನೆಗಳಲ್ಲಿ ಅಧಿಕೃತ ಫಲಾನುಭವಿಗಳ ಬದಲಾಗಿ ಬೇರೆಯವರು ವಾಸವಾಗಿರುವುದು ಕಂಡು ಬಂದಿದೆ.

ವಾಸವಿಲ್ಲದೆ ಬೀಗ ಹಾಕಿರುವ ಮನೆಗಳ ಫಲಾನುಭವಿಗಳಿಗೆ ಹಾಗೂ ಅನಧಿಕೃತವಾಗಿ ವಾಸವಿರುವ ಮನೆಗಳ ಫಲಾನುಭವಿಗಳಿಗೆ ಈಗಾಗಲೇ ನೋಟೀಸು ನೀಡಲಾಗಿದೆ. ಈ ಪುನರ್ವಸತಿ ಕೇಂದ್ರದ ಫಲಾನುಭವಿಗಳು ರಾಜೀವ್‌ಗಾಂಧಿ ವಸತಿ ನಿಗಮದಿಂದ ಅನುಮೋದಿತ ಫಲಾನುಭವಿಗಳು ಮಾತ್ರ ಸರ್ಕಾರದಿಂದ ಮಂಜೂರಾದ ಮನೆಗಳಲ್ಲಿ ವಾಸವಾಗಿರಲು ಹಾಗೂ ಬೀಗ ಹಾಕಿ ಇನ್ನೂ ವಾಸಕ್ಕೆ ಬಾರದಿರುವ ಮನೆಗಳ ಫಲಾನುಭವಿಗಳು ತಕ್ಷಣ ಮನೆಗಳ ಕೀಗಳನ್ನು ಪಡೆದು ವಾಸವಾಗಿರಲು ಸೂಚಿಸಿದೆ. ಒಂದು ವೇಳೆ ಅನಧಿಕೃತ ವ್ಯಕ್ತಿಗಳು ವಾಸವಾಗಿದ್ದಲ್ಲಿ ನಿಯಮಾನುಸಾರ ಕಾನೂನು ಕ್ರಮಕೈಗೊಳ್ಳಲಾಗುವುದು. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು (ಗ್ರೇಡ್-೨), ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ-೦೮೨೭೬-೨೮೧೧೧೫ ನ್ನು ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಾಲಕೃಷ್ಣ ರೈ ತಿಳಿಸಿದ್ದಾರೆ.