ಕಣಿವೆ, ಜು. ೨೮: ಕಣಿವೆ, ಸೀಗೆಹೊಸೂರು ಮಾರ್ಗವಾಗಿ ಸೋಮವಾರಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸೀಗೆಹೊಸೂರು ಹಾಗೂ ಏಲಕ್ಕನೂರು ಗ್ರಾಮ ವ್ಯಾಪ್ತಿಯಲ್ಲಿ ಸಂಪೂರ್ಣ ಹಾಳಾಗಿದೆ.

ರಸ್ತೆಯಲ್ಲಿ ಬೃಹದಾಕಾರದ ಮತ್ತು ಆಳದ ಗುಂಡಿಗಳು ನಿರ್ಮಾಣಗೊಂಡಿದ್ದು ಸ್ಥಳೀಯರು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಸಂಚಕಾರವಾಗಿದೆ.

ಏಲಕ್ಕನೂರು ಹೊಸಳ್ಳಿ ವ್ಯಾಪ್ತಿಯಲ್ಲಿ ಗಣಿಗಾರಿಕೆ ಹಾಗೂ ಕ್ರಷರ್‌ಗಳಿದ್ದು, ಅಲ್ಲಿಂದ ನಿತ್ಯವೂ ನೂರಾರು ಲಾರಿಗಳು ಸಂಚರಿಸುತ್ತಿರುವುದರಿAದ ಈ ರಸ್ತೆ ರಸ್ತೆಯಾಗಿ ಉಳಿದಿಲ್ಲ ಎನ್ನುವ ಸ್ಥಳೀಯ ನಿವಾಸಿಗಳು, ಭಾರೀ ಭಾರವನ್ನು ಹೊತ್ತು ಸಾಗುವ ಭಾರೀ ವಾಹನಗಳು ಗುಂಡಿ ಬಿದ್ದ ರಸ್ತೆಯಲ್ಲಿ ತೆರಳುವಾಗ ರಸ್ತೆಯಂಚಿನ ಮನೆಗಳ ಗೋಡೆಗಳು ಅದುರುತ್ತಿವೆ. ಬೇಸಿಗೆಯಲ್ಲಿ ಧೂಳಿನ ರಾಶಿ ಮನೆಯೊಳಕ್ಕೆ ಸೇರುತ್ತದೆ. ಮಳೆಗಾಲದಲ್ಲಿ ರಸ್ತೆಯೆಲ್ಲಾ ಕೆಸರುಮಯವಾಗುತ್ತದೆ ಎಂದು ಸೀಗೆಹೊಸೂರಿನ ವಯೋವೃದ್ಧರಾದ ಸೂರಪ್ಪ ಹಾಗೂ ದೇವಮ್ಮ ಹೇಳುತ್ತಾರೆ.

ಜಿಲ್ಲಾಧಿಕಾರಿಗಳು ಇಲ್ಲಿಗೆ ಖುದ್ದಾಗಿ ಆಗಮಿಸಿ ನಮ್ಮ ನೋವನ್ನು ಆಲಿಸಿ ಪರಿಹಾರ ಕಲ್ಪಿಸಬೇಕು ಎಂದು ದೇವಮ್ಮ ಒತ್ತಾಯಿಸಿದ್ದಾರೆ.