ಮುಳ್ಳೂರು, ಜು. ೨೮: ಸಮೀಪದ ಕೊಡ್ಲಿಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನೂರು ವರ್ಷಕ್ಕೆ ಪದಾರ್ಪಣೆವಾಗುತ್ತಿರುವ ಹಿನ್ನೆಲೆ ಆಡಳಿತ ಮಂಡಳಿ ವತಿಯಿಂದ ಸರಳವಾಗಿ ಶತಮಾ ನೋತ್ಸವವನ್ನು ಆಚರಿಸಲಾಯಿತು. ಸಂಘದ ಸಭಾಂಗಣದಲ್ಲಿ ನಡೆದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಆಡಳಿತ ಮಂಡಳಿ ಅಧ್ಯಕ್ಷ ಎಸ್.ಡಿ. ತಮ್ಮಯ್ಯ ಕೇಕ್ ಕತ್ತರಿಸಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಮ್ಮಯ್ಯ, ಕೊಡ್ಲಿಪೇಟೆಯಲ್ಲಿ ೧೯೨೧ ಜು. ೨೫ ರಂದು ಸ್ಥಾಪನೆಯಾದ ಸಹಕಾರ ಸಂಘಕ್ಕೆ ನೂರು ವರ್ಷ ತುಂಬಿದ್ದು ಸಂಘದ ಇಂದಿನ ಬೆಳವಣಿಗಗೆ ಸೇವೆಗೈದ ಸಂಘದ ಅಧ್ಯಕ್ಷರುಗಳು, ಸದಸ್ಯರುಗಳ ಪರಿಶ್ರಮ ಕಾರಣವಾಗಿದೆ ಎಂದರು. ಪ್ರಾರಂಭದಲ್ಲಿ ಹತ್ತು ರೂಪಾಯಿ ಪಾಲು ಹಣದಿಂದ ಸದಸ್ಯತ್ವ ನೀಡಿದ್ದ ನಮ್ಮ ಸಂಘವು ಇಂದು ಸಾವಿರ ರೂಪಾಯಿ ಪಾಲು ಹಣ ನಿಗದಿ ಮಾಡಿದೆ.

ಸಂಘದ ಕಾರ್ಯಕ್ಷೇತ್ರವು ೨೮ ಹಳ್ಳಿಯನ್ನು ಒಳಗೊಂಡಿದ್ದು ಸಂಘವು ಮೊದಲಿನಿಂದಲೂ ಪ್ರಗತಿಯಲ್ಲಿ ಸಾಗುತ್ತಿದ್ದು ರೈತರಿಗೆ ಬೆಳೆ ಸಾಲ ವಿತರಿಸಿ ಕೊಡಗು ಜಿಲ್ಲೆಯಲ್ಲಿ ಸಂಘವು ಪ್ರಥಮ ಸ್ಥಾನ ಪಡೆದುಕೊಂಡಿದ್ದು ಸಂಘದ ಶತಮಾನೋತ್ಸವ ಅಂಗವಾಗಿ ಮುಂದಿನ ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಕೆ. ಚಿಣ್ಣಪ್ಪ, ಸಂಘದ ಉಪಾಧ್ಯಕ್ಷ ಕೆ.ಬಿ. ಸುಬ್ರಮಣ್ಯ ಆಚಾರ್ ಮಾತನಾಡಿದರು. ಈ ಸಂದರ್ಭ ಸಂಘದ ನಿರ್ದೇಶಕರಾದ ಬಿ.ಕೆ. ಯತೀಶ್, ಕೆ.ಸಿ. ಪ್ರಸನ್ನ, ಕೆ.ಎಂ. ವಹಾಬ್, ಅಶೋಕ್, ತೇಜಕುಮಾರ್, ಭಾನುಮತಿ, ರಾಜು, ಮಲ್ಲೇಶ್, ರಂಜಿತಾ ಲೋಕೇಶ್, ಸಂಘದ ಸಿಇಒ ಸುರೇಶ್, ವರ್ತಕರ ಸಂಘದ ಅಧ್ಯಕ್ಷ ಯತೀಶ್‌ಕುಮಾರ್, ಸಂಘದ ಮತ್ತು ಡಿಸಿಸಿ ಬ್ಯಾಂಕ್ ಸಿಬ್ಬಂದಿ ಹಾಜರಿದ್ದರು.