ಸಿದ್ದಾಪುರ, ಜು. ೨೭: ಬಿಪಿಎಲ್ ಪಡಿತರ ಚೀಟಿಯನ್ನು ದಿಢೀರಾಗಿ ರದ್ದುಗೊಳಿಸಿರುವುದನ್ನು ಖಂಡಿಸಿ ಸಿಪಿಐ(ಎಂ) ಪಕ್ಷದ ವತಿಯಿಂದ ಹತ್ತು ದಿನಗಳ ಕಾಲ ನೆಲ್ಲಿಹುದಿಕೇರಿಯ ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಸೋಮವಾರ ದಂದು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಪಿ.ಆರ್. ಭರತ್ ಈ ಕುರಿತು ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು. ನಾಲ್ಕು ಚಕ್ರ ವಾಹನವನ್ನು ಹೊಂದಿಕೊAಡು ಬಾಡಿಗೆಗೆ ಓಡಿಸಿ ಜೀವನ ಸಾಗಿಸುತ್ತಿರುವ ಚಾಲಕರ ಕುಟುಂಬದ ಪಡಿತರ ಚೀಟಿಯನ್ನು ಕೂಡ ರದ್ದುಗೊಳಿಸುತ್ತಿರುವುದು ಖಂಡನೀಯ ಎಂದರು.

ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು ೫೦ಕ್ಕೂ ಅಧಿಕ ಕುಟುಂಬಗಳ ಬಿಪಿಎಲ್ ಪಡಿತರ ಚೀಟಿಯು ರದ್ದಾಗಿದ್ದು, ಮತ್ತಷ್ಟು ಪಡಿತರ ಚೀಟಿಯನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಇದೀಗ ನ್ಯಾಯಬೆಲೆ ಅಂಗಡಿ ಮೂಲಕ ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ ಕೊಡಲು ತಿಳಿಸಿದ್ದು, ಹಲವಾರು ಬಡ ಜನರ ಪಡಿತರ ಚೀಟಿಯನ್ನು ಸರ್ಕಾರ ರದ್ದುಗೊಳಿಸಲು ಹುನ್ನಾರ ನಡೆಸುತ್ತಿದೆ ಎಂದು ದೂರಿದರು.

ಪ್ರತಿಭಟನೆಯ ಸಂದರ್ಭದಲ್ಲಿ ಪಕ್ಷದ ಪದಾಧಿಕಾರಿಗಳಾದ ಟಿ.ಟಿ ಉದಯ ಕುಮಾರ್, ಚಂದ್ರನ್, ಬೋಜಿ, ಯೂಸಫ್, ಶಿವರಾಮ್, ರಾಜ ಇನ್ನಿತರರು ಹಾಜರಿದ್ದರು.