ಪಾಲಿಬೆಟ್ಟ, ಜು. ೨೭: ಯುದ್ಧದಲ್ಲಿ ಮಡಿದ ಹುತಾತ್ಮ ಯೋಧರಿಗೆ ಸರ್ವ ಸಹಾಯಿ ಮಿತ್ರ ಮಂಡಳಿ ವತಿಯಿಂದ ನಮನ ಸಲ್ಲಿಸುವದರೊಂದಿಗೆ ಎಪಿಜೆ ಅಬ್ದುಲ್ ಕಲಾಂ ಸ್ಮರಣೆಯನ್ನು ಚೆನ್ನಯ್ಯನಕೋಟೆಯಲ್ಲಿ ಆಚರಿಸಿದರು.

ಬಸ್ ನಿಲ್ದಾಣದ ಬಳಿಯಿರುವ ಯೋಧರು ಹಾಗೂ ಅಬ್ದುಲ್ ಕಲಾಂ ಅವರ ಸ್ಮರಣಿಕೆಯ ಚಿತ್ರ ಅನಾವರಣಗೊಳಿಸುವ ಮೂಲಕ ನಮನ ಸಲ್ಲಿಸಲಾಯಿತು. ನಂತರ ಶಾಲಾ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕೋವಿಡ್ ಸೇವೆಯ ಸಾಧಕರಾದ ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಪಂಚಾಯಿತಿಯ ಟಾಸ್ಕ್ಫೋರ್ಸ್ ತಂಡ ಸೇರಿದಂತೆ ಇತರರಿಗೆ ಸನ್ಮಾನಿಸಿ, ಗೌರವಿಸಲಾಯಿತು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಗಡಿಯಲ್ಲಿ ದೇಶ ಕಾಯುವ ಯೋಧರಿಗೆ ಧೈರ್ಯ ತುಂಬುವ ಮೂಲಕ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸುವುದರೊಂದಿಗೆ ಪ್ರತಿಯೊಬ್ಬರು ದೇಶಾಭಿಮಾನದಿಂದ ಗೌರವ ಸೂಚಿಸಬೇಕಾಗಿದೆ ಎಂದರು. ಜಿಲ್ಲಾ ಆರೋಗ್ಯಾಧಿಕಾರಿ ಕೆ. ಮೋಹನ್ ಮಾತನಾಡಿ, ಪ್ರತಿಯೊಬ್ಬರೂ ದೇಶ ಪ್ರೇಮವನ್ನು ಮೈಗೂಡಿಸಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಕೈಜೋಡಿಸುವುದರ ಮೂಲಕ ಕೋವಿಡ್ ಮುಕ್ತ ಜಿಲ್ಲೆಯನ್ನಾಗಿಸಲು ಕೈಜೋಡಿಸ ಬೇಕೆಂದರು.

ವೀರಾಜಪೇಟೆ ತಾಲೂಕು ವೈದ್ಯಾಧಿಕಾರಿ ಯತಿರಾಜ್ ಮಾತನಾಡಿ, ಕೋವಿಡ್ ಸಂದರ್ಭ ಗ್ರಾಮದ ಹಿತಕಾಪಾಡುವ ಮೂಲಕ ಹಗಲಿರುಳು ತಮ್ಮದೇ ಆದ ಸೇವೆ ಸಲ್ಲಿಸುವುದರೊಂದಿಗೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಖ್ಯ ಪಾತ್ರ ವಹಿಸಿರುವ ಆಶಾ, ಆರೋಗ್ಯ ಕಾರ್ಯಕರ್ತರು ಹಾಗೂ ಸಮಾಜ ಸೇವಕರ ಪರಿಶ್ರಮದಿಂದ ಕೋವಿಡ್ ಮುಕ್ತ ಗ್ರಾಮವನಾ ್ನಗಿಸಲು ಪಣತೊಟ್ಟಿರುವ ಕಾರ್ಯ ಕರ್ತರಿಗೆ ಸರ್ವ ಸಹಾಯ ಮಿತ್ರ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸುತ್ತಿರು ವುದು ಶ್ಲಾಘನೀಯ ಎಂದರು. ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯಿತ್ರಿ, ಉಪಾಧ್ಯಕ್ಷೆ ಶಿಲ್ಪಾ, ಸದಸ್ಯರುಗಳಾದ ಗಣೇಶ್, ವಿಜು, ಶೀಲಾ, ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮೀರ್, ಜಿಲ್ಲಾ ಆರೋಗ್ಯಾಧಿಕಾರಿ ಮೋಹನ್, ಸರ್ವ ಸಹಾಯ ಮಿತ್ರ ಮಂಡಳಿ ಅಧ್ಯಕ್ಷ ಅಬ್ದುಲ್ ರಹಿಮಾನ್, ಉಪಾಧ್ಯಕ್ಷ ಸಲಾಂ, ಕಾರ್ಯದರ್ಶಿ ಶಶಿ ಅಚ್ಚುತನ್, ಸಹ ಕಾರ್ಯದರ್ಶಿ ಇಂದಿರಾ ಮುರುಗೇಶ್, ಖಜಾಂಜಿ ಶಶಿ, ಗೌರವ ಅಧ್ಯಕ್ಷ ವಿಜು, ಸದಸ್ಯರಾದ ನಿಜಾಮುದ್ದೀನ್, ಸವಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್, ಉಪಠಾಣೆಯ ರಮೇಶ್, ಶಿವಕುಮಾರ್ ಸೇರಿದಂತೆ ಶಾಲಾ ಶಿಕ್ಷಕರುಗಳು ಹಾಜರಿದ್ದರು.

- ಪುತ್ತಂ ಪ್ರದೀಪ್