ಚೆಯ್ಯಂಡಾಣೆ, ಜು. ೨೭: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಕೇರಿ ಸುತ್ತಮುತ್ತ ಕಾಡಾನೆಗಳ ದಾಂಧಲೆಯಿAದ ಅಪಾರ ಪ್ರಮಾಣದಲ್ಲಿ ತೋಟಗಳಿಗೆ ಹಾನಿಯಾಗಿದ್ದು, ಸೂಕ್ತ ಪರಿಹಾರಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗ್ರಾಮದ ಹಲವು ಕುಟುಂಬಸ್ಥರ ತೋಟಗಳಿಗೆ ಹಾಗೂ ನೆರೆಯ ಚೇಲಾವರ, ಕರಡ, ಅರಪಟ್ಟು, ಕೊಕೇರಿ, ತೋಟಗಳಿಗೂ ಪದೇ ಪದೇ ಕಾಡಾನೆಗಳು ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಫಸಲು ನಾಶಪಡಿಸಿವೆ. ಕಾಡಾನೆಗಳು ತೋಟಗಳಲ್ಲೇ ಬೀಡುಬಿಟ್ಟಿದ್ದು ಅರಣ್ಯಾಧಿಕಾರಿಗಳು ಕಾಡಾನೆಯನ್ನು ಕಾಡಿಗಟ್ಟಿದ್ದರೂ ಪುನಃ ಮರಳಿ ತೋಟಗಳಿಗೆ ಲಗ್ಗೆ ಇಡುತ್ತಿವೆ. ಗ್ರಾಮಸ್ಥರಾದ ಎಸ್.ಎಸ್.ಸುಮಂತ್ ಹಾಗೂ ಬಿದ್ದಂಡ ಕುಶಾಲಪ್ಪ ಮಾತನಾಡಿ, ಕಾಡಾನೆಗಳ ದಾಳಿಯಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು, ಕಾಡಾನೆಗಳು ತೋಟಗಳಿಂದ ನಿರ್ಗಮಿಸುತ್ತಿಲ್ಲ. ಸುಮಾರು ೧೦೦ ಕ್ಕೂ ಹೆಚ್ಚು ಕಾಫಿ ಗಿಡಗಳು ನಾಶವಾಗಿದ್ದು, ಸುಮಾರು ೨೫-೩೦ ವರ್ಷದ ಗಿಡಗಳು ಕಾಡಾನೆ ದಾಳಿಗೆ ಹಾನಿಯಾಗಿವೆ. ಸರಕಾರ ಒಂದು ಗಿಡಕ್ಕೆ ೨೦೦ ರೂಪಾಯಿಯಂತೆ ಪರಿಹಾರ ನೀಡುತ್ತಿದ್ದು, ಕನಿಷ್ಟ ಒಂದು ಗಿಡಕ್ಕೆ ೨ ಸಾವಿರ ರೂಪಾಯಿಯಾದರು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಅಲ್ಲದೆ ಕಾಡಾನೆಗಳ ಕಾಟ ತಡೆಯಲು ರೈತರಿಗೆ ಸೌರಶಕ್ತಿ ಬೇಲಿ ಅಳವಡಿಸಲು ಪ್ರೋತ್ಸಾಹಧನವನ್ನು ನೀಡಬೇಕು. ಕೊಡಗಿನ ಅರಣ್ಯ ಪ್ರದೇಶಗಳ ಸುತ್ತಲೂ ರೈಲ್ವೆ ಬ್ಯಾರಿಕೇಡ್ ಅಳವಡಿಸಬೇಕು ಹಾಗೂ ಅರಣ್ಯಪ್ರದೇಶದಲ್ಲಿ ತೇಗದ ಮರಗಳನ್ನು ನೆಡುವ ಬದಲು ಆನೆ ಮತ್ತು ಕಾಡುಪ್ರಾಣಿಗಳಿಗೆ ಉಪಯುಕ್ತ ಹಲಸಿನ ಗಿಡ, ಹಣ್ಣು ಹಂಪಲು ಹಾಗೂ ಹುಲ್ಲುಗಳನ್ನು ಯಥೇಚ್ಛವಾಗಿ ಬೆಳೆಯಬೇಕು ಎಂದು ತಿಳಿಸಿದ್ದಾರೆ. -ಅಶ್ರಫ್