ಅಭಿನಯ ಶಾರದೆ ಜಯಂತಿ ಇನ್ನಿಲ್ಲ
ಬೆಂಗಳೂರು, ಜು. ೨೬: ಅಭಿನಯ ಶಾರದೆ ಎಂದು ಪ್ರೀತಿಯಿಂದ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದ ಹಿರಿಯ ನಟಿ ಜಯಂತಿ ನಿಧನರಾಗಿದ್ದಾರೆ. ಸೋಮವಾರ ನಸುಕಿನ ಜಾವ ಬೆಂಗಳೂರಿನ ತಮ್ಮ ನಿವಾಸದಲ್ಲಿ ಅವರು ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.ಅವರಿಗೆ ೭೬ ವರ್ಷ ವಯಸ್ಸಾಗಿತ್ತು. ಕಳೆದ ಕೆಲ ವರ್ಷಗಳಿಂದ ಅಸ್ತಮಾ, ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಹಿರಿಯ ನಟಿ ಕಳೆದ ವರ್ಷ ಕೋವಿಡ್-೧೯ ಸಮಯದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ೪೦ ದಿನಗಳ ಕಾಲ ಇದ್ದು ಚೇತರಿಸಿಕೊಂಡು ಮನೆಗೆ ಹಿಂತಿರುಗಿದ್ದರು. ಆದರೆ ಇಂದು ಕೊನೆಯುಸಿರೆಳೆದಿದ್ದಾರೆ. ಅವರು ಪುತ್ರ ಕೃಷ್ಣ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಕನ್ನಡ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿ ಜಯಂತಿಯವರ ಹೆಸರು ಚಿರಪರಿಚಿತ. ಕನ್ನಡದಲ್ಲಿಯೇ ೧೯೦ ಚಿತ್ರಗಳಲ್ಲಿ ಅಭಿನಯಿಸಿದ್ದ ಜಯಂತಿಯವರು ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಸೇರಿದಂತೆ ೫೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಜೊತೆ ೪೫ ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಜಯಂತಿಯವರದ್ದು. ದಕ್ಷಿಣ ಭಾರತದ ಚಿತ್ರರಂಗದ ದಂತಕಥೆಗಳಾದ ಎಂಜಿಆರ್, ಎನ್ಟಿಆರ್ ಅವರೊಂದಿಗೆ ಸಹ ನಟಿಸಿದ್ದರು.
ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿ ಸದಾಶಿವ ಶೆಣೈ
ಬೆಂಗಳೂರು, ಜು. ೨೬: ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಕೆ. ಸದಾಶಿವ ಶೆಣೈ ಅವರನ್ನು ನೇಮಕ ಮಾಡಲಾಗಿದೆ. ಸದಸ್ಯರುಗಳಾಗಿ ಶಿವಮೊಗ್ಗದ ಗೋಪಾಲ ಸಿಂಗಪ್ಪಯ್ಯ, ಕೆ.ವಿ. ಶಿವಕುಮಾರ್, ಮೈಸೂರಿನ ಕೂಡ್ಲಿ ಗುರುರಾಜ್, ಐ.ಕೆ. ಮಹೇಂದರ್, ಬೆಂಗಳೂರಿನ ಕೆ.ಕೆ. ಮೂರ್ತಿ, ಶಿವಕುಮಾರ್ ಬೆಳ್ಳಿತಟ್ಟೆ, ಶಿವಾನಂದ ತಗಡೂರು, ಮಂಗಳೂರಿನ ಜಗನ್ನಾಥ ಬಾಳ, ಕಲಬುರ್ಗಿಯ ದೇವೇಂದ್ರಪ್ಪ ಕಪನೂರು ಇವರುಗಳನ್ನು ನೇಮಿಸಲಾಗಿದೆ.
ಕರೆನ್ಸಿ ನೋಟುಗಳ ಮುದ್ರಣ ಯೋಜನೆ ಪ್ರಸ್ತಾವನೆ ಇಲ್ಲ
ನವದೆಹಲಿ, ಜು. ೨೬: ಕೋವಿಡ್-೧೯ ಸಾಂಕ್ರಾಮಿಕದಿAದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಹೊರಬರಲು ಕರೆನ್ಸಿ ನೋಟುಗಳ ಮುದ್ರಣ ಯೋಜನೆ ಪ್ರಸ್ತಾವನೆ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಗೆ ತಿಳಿಸಿದ್ದಾರೆ. ಕರೆನ್ಸಿ ನೋಟು ಮುದ್ರಣದ ಕುರಿತ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಉತ್ತರಿಸುತ್ತಿದ್ದರು. ಕೋವಿಡ್-೧೯ನಿಂದ ಉಂಟಾಗಿರುವ ಉದ್ಯೋಗ ನಷ್ಟವನ್ನು ತಪ್ಪಿಸಲು ಹಾಗೂ ಆರ್ಥಿಕತೆಗೆ ಚೇತರಿಕೆ ನೀಡಲು ಕರೆನ್ಸಿ ನೋಟುಗಳ ಮುದ್ರಣದ ಆಯ್ಕೆಯನ್ನು ಪರಿಗಣಿಸುವಂತೆ ಹಲವು ಅರ್ಥಶಾಸ್ತçಜ್ಞರು ಮತ್ತು ತಜ್ಞರು ಸಲಹೆ ನೀಡಿದ್ದರು. ಭಾರತದ ರಿಯಲ್ ಜಿಡಿಪಿ ೨೦೨೦-೨೧ ರ ಅವಧಿಯಲ್ಲಿ ಶೇ.೭.೩ ರಷ್ಟು ಕುಸಿತ ಕಂಡಿರುವ ಅಂದಾಜಿದೆ ಎಂದು ಲೋಕಸಭೆಗೆ ವಿತ್ತ ಸಚಿವರು ಲಿಖಿತ ಉತ್ತರ ನೀಡಿದ್ದಾರೆ. ಈ ಕುಸಿತ ಸಾಂಕ್ರಾಮಿಕದ ಪರಿಣಾಮ ಹಾಗೂ ಸಾಂಕ್ರಾಮಿಕವನ್ನು ತಡೆಗಟ್ಟುವುದಕ್ಕೆ ಕೈಗೊಂಡ ಕ್ರಮಗಳನ್ನು ಸೂಚಿಸುತ್ತವೆ ಎಂದೂ ಸಚಿವರು ಹೇಳಿದ್ದಾರೆ. ಆದರೆ ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳು ಬಲಿಷ್ಠವಾಗಿದೆ. ಆತ್ಮ ನಿರ್ಭರ ಭಾರತ ಮಿಷನ್ ೨೦೨೦-೨೧ ರ ಉತ್ತರಾರ್ಧದಲ್ಲಿ ಆರ್ಥಿಕತೆಯನ್ನು ಚೇತರಿಕೆಯ ಹಾದಿಯಲ್ಲಿಟ್ಟಿದೆ. ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಪೆಗಾಸಸ್ ವಿವಾದ:ತನಿಖೆಗೆ ಸಮಿತಿ ರಚಿಸಿದ ಪಶ್ಚಿಮ ಬಂಗಾಳ ಸರಕಾರ
ಕೋಲ್ಕತಾ, ಜು. ೨೬: ಕೇಂದ್ರ ಸರ್ಕಾರ ಇಸ್ರೇಲ್ ಮೂಲದ ಪೆಗಾಸಸ್ ಸ್ಪೆöÊವೇರ್ ಬಳಸಿ ಅನೇಕ ಗಣ್ಯರ, ರಾಜಕಾರಣಿಗಳ, ಅಧಿಕಾರಿಗಳು ಮತ್ತು ಪತ್ರಕರ್ತರ ದೂರವಾಣಿ ಕದ್ದಾಲಿಕೆ ಆರೋಪದ ಕುರಿತು ತನಿಖೆ ನಡೆಸಲು ತಮ್ಮ ಸರ್ಕಾರ ಇಬ್ಬರು ಸದಸ್ಯರ ತನಿಖಾ ಸಮಿತಿ ರಚಿಸಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ನಿವೃತ್ತ ನ್ಯಾಯಾಧೀಶರು ಈ ಸಮಿತಿಯ ಸದಸ್ಯರಾಗಿರಲಿದ್ದಾರೆ. ಫೋನ್ ಹ್ಯಾಕಿಂಗ್ ಕುರಿತು ತನಿಖೆಗೆ ಕೇಂದ್ರ ಸರ್ಕಾರ ತನಿಖಾ ಸಮಿತಿ ರಚಿಸುತ್ತದೆ ಅಥವಾ ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆಗೆ ಆದೇಶಿಸುತ್ತದೆ ಎಂದು ನಾವು ಭಾವಿಸಿದ್ದೇವೆ. ಆದರೆ ಕೇಂದ್ರವು ಸುಮ್ಮನೆ ಕುಳಿತಿದೆ. ಆದ್ದರಿಂದ ನಾವು ತನಿಖೆ ನಡೆಸಲು ತನಿಖಾ ಸಮಿತಿ ರಚಿಸಲು ನಿರ್ಧರಿಸಿದ್ದೇವೆ ಎಂದು ಮಮತಾ ಬ್ಯಾನರ್ಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕೋಲ್ಕತ್ತಾ ಮಾಜಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜ್ಯೋತಿರ್ಮಯ್ ಭಟ್ಟಾಚಾರ್ಯ ನೇತೃತ್ವ ವಹಿಸಲಿದ್ದಾರೆ. ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶ ಮದನ್ ಭೀಮರಾವ್ ಲೋಕೂರ್ ಇದರ ಇತರ ಸದಸ್ಯರಾಗಿರಲಿದ್ದಾರೆ. ಪಶ್ಚಿಮ ಬಂಗಾಳ ಜನರ ಹೆಸರುಗಳು ಪೆಗಾಸಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಕೇಂದ್ರವು ಎಲ್ಲರ ಮೇಲೆ ಕಣ್ಣಿಡಲು ಪ್ರಯತ್ನಿಸುತ್ತಿದೆ. ಈ ಅಕ್ರಮ ಹ್ಯಾಕಿಂಗ್ ಬಗ್ಗೆ ಸಮಿತಿ ತನಿಖೆ ನಡೆಸಲಿದೆ" ಎಂದು ಸಿಎಂ ಹೇಳಿದ್ದಾರೆ.
ಮಹಿಳಾ ಹಾಕಿ ತಂಡಕ್ಕೆ ಸೋಲು
ಟೋಕಿಯೊ, ಜು. ೨೬: ಟೋಕಿಯೊ ಒಲಂಪಿಕ್ಸ್ನಲ್ಲಿ ಸೋಮವಾರ ನಡೆದ ಎ ಗುಂಪಿನ ಹಣಾಹಣಿಯಲ್ಲಿ ಭಾರತದ ಮಹಿಳಾ ಹಾಕಿ ತಂಡ ಸತತ ಎರಡನೇ ಬಾರಿಗೆ ಸೋಲಿಗೆ ಶರಣಾಗಿದೆ. ರಿಯೋ ಗೇಮ್ಸ್ ಕಂಚಿನ ಪದಕ ವಿಜೇತ ತಂಡ ಜರ್ಮನಿ ಎದುರು ೦-೨ ಅಂತರದಿAದ ಭಾರತದ ವನಿತೆಯರು ಸೋತಿದ್ದಾರೆ. ವಿಶ್ವದ ನಂಬರ್ ೧ ತಂಡವಾದ ನೆದರ್ ಲ್ಯಾಂಡ್ಸ್ನಿAದ ೧-೫ ಅಂತರದಿAದ ಪಂದ್ಯವನ್ನು ಕೈ ಚೆಲ್ಲಿದ್ದ ಬಳಿಕ ಒಂದು ಹಂತದಲ್ಲಿ ಭಾರತೀಯ ಮಹಿಳೆಯರು ಪಂದ್ಯವನ್ನು ಗೆಲ್ಲುವ ವಿಶ್ವಾಸ ಮೂಡಿಸಿದ್ದರು. ಆದರೆ, ವಿಶ್ವದ ನಂಬರ್ ೩ ತಂಡವಾದ ಜರ್ಮನಿಯಿಂದ ಸೋಲನ್ನು ತಪ್ಪಿಸಿಕೊಳ್ಳಲು ಅದು ಸಾಕಾಗಿರಲಿಲ್ಲ.
ರೂ. ೨೦,೮೦೦ ಕೋಟಿ ಸಾಲ ನೀಡಲು ನಿರ್ಧಾರ
ಮೈಸೂರು, ಜು. ೨೬: ಡಿಸಿಸಿ ಬ್ಯಾಂಕ್ ಮತ್ತು ಎಪೆಕ್ಸ್ ಬ್ಯಾಂಕ್ ಮೂಲಕ ರೈತರಿಗೆ ರೂ.೨೦,೮೦೦ ಕೋಟಿ ಸಾಲ ನೀಡಲು ನಿರ್ಧರಿಸಲಾಗಿದ್ದು, ಇದರಿಂದ ಸುಮಾರು ೩೦ ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಭಾನುವಾರ ಹೇಳಿದ್ದಾರೆ. ನಗರದ ಗೋವಿಂದ ರಾವ್ ಮೆಮೋರಿಯಲ್ ಹಾಲ್ನಲ್ಲಿ ಭಾನುವಾರ ನಡೆದ ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರಿಗೆ ನೆರವಾಗುವ ಉದ್ದೇಶದಿಂದ ರಾಜ್ಯದ ಪ್ರತಿ ಎಪಿಎಂಸಿಗೆ ರೂ. ೨-೫ ಕೋಟಿ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಪ್ಪಿಗೆ ಸೂಚಿಸಿದ್ದಾರೆ. ಎಪಿಎಂಸಿಗಳ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲಾಗುತ್ತದೆ. ಅಲ್ಲದೆ, ಸಹಕಾರಿ ಬ್ಯಾಂಕ್ ಮೂಲಕ ರೈತರಿಗೆ ರೂ. ೨೦,೮೦೦ ಕೋಟಿ ಸಾಲ ನೀಡಲು ನಿರ್ಧರಿಸಲಾಗಿದ್ದು, ಇದರಿಂದ ೩೦ ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಯ ಮೂಲಕ ನೀಡುತ್ತಿದ್ದ ಅನುದಾನಕ್ಕೆ ತಡೆ
ಬೆಂಗಳೂರು, ಜು. ೨೬: ದೇವಸ್ಥಾನಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಅನ್ಯಮತೀಯ ಪ್ರಾರ್ಥನ ಕೇಂದ್ರಗಳಿಗೆ ತಸ್ತಿಕ್ ಮತ್ತು ವರ್ಷಾಸನ ಬಿಡುಗಡೆ ಕುರಿತು ಎದ್ದಿರುವ ಚರ್ಚೆಯ ಕುರಿತು ಸರ್ಕಾರ ಅಂತಿಮ ತೀರ್ಮಾನ ಕೈಗೊಂಡಿದ್ದು, ರಾಜ್ಯದ ೭೫೭ ಪ್ರಾರ್ಥನ ಕೇಂದ್ರಗಳಿಗೆ ಹಾಗೂ ೧೧೧ ವರ್ಷಾಸನ ಪಡೆಯುತ್ತಿರುವ ಪ್ರಾರ್ಥನ ಕೇಂದ್ರಗಳಿಗೆ ಸರ್ಕಾರ ದೇವಸ್ಥಾನಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಯ ಮೂಲಕ ನೀಡುತ್ತಿದ್ದ ಅನುದಾನ ತಡೆ ಹಿಡಿದಿದ್ದು, ಇಂದು ಅಧಿಕೃತ ಆದೇಶ ಹೊರಡಿಸಿದೆ. ಇನಾಂ ರದ್ಧತಿ ಕಾಯ್ದೆ ೧೯೭೭ರ ಪರಿಹಾರಾರ್ಥವಾಗಿ ನೀಡುತ್ತಿರುವ ತಸ್ತಿಕ್ ಮತ್ತು ವರ್ಷಾಸನವನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮತ್ತು ದೇವಸ್ಥಾನಗಳಿಂದ ನೀಡುವ ಬದಲು, ಇನ್ನು ಮುಂದೆ ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಮೂಲಕ ತಸ್ತಿಕ್ ಮತ್ತು ವರ್ಷಾಸನ ನೀಡಲು ಅನುದಾನ ಬಿಡುಗಡೆ ಮಾಡತಕ್ಕದ್ದು ಎಂದು ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವರದಿಯನ್ನಾದರಿಸಿ ಸರ್ಕಾರ ಆದೇಶ ನೀಡಿದೆ.