ಕೂಡಿಗೆ, ಜು. ೨೭: ಹಾರಂಗಿ ಅಣೆಕಟ್ಟೆ ಭರ್ತಿಯಾಗಿ ಅಣೆಕಟ್ಟೆಯಿಂದ ನದಿಗೆ ಹೆಚ್ಚುವರಿಯಾಗಿ ನೀರನ್ನು ಹರಿಸುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ನವರು ಭೇಟಿ ನೀಡಿ ನೀರಿನ ಮಟ್ಟವನ್ನು ಪರಿಶೀಲನೆ ನಡೆಸಿದರು.
ಹಾರಂಗಿಯ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆ ಮತ್ತು ಮದಲಾಪುರ ಹೊಳೆ ಮತ್ತು ಹಟ್ಟಿಹೊಳೆ ಭಾಗಗಳಿಂದ ಹೆಚ್ಚು ನೀರು ಹರಿಯುತ್ತಿರುವುದರಿಂದ ನದಿಯ ಮೂಲಕ ಅಣೆಕಟ್ಟೆಗೆ ಹೆಚ್ಚು ನೀರು ಬರುತ್ತಿದೆ.
ಅಣೆಕಟ್ಟೆಯು ಭರ್ತಿಯಾದ ಹಿನ್ನೆಲೆಯಲ್ಲಿ ಒಳ ಹರಿವಿನ ಪ್ರಮಾಣವನ್ನು ನೋಡಿಕೊಂಡು ಹೆಚ್ಚುವರಿ ನೀರನ್ನು ನದಿಗೆ ಹರಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕರು ತಿಳಿಸಿದರು. ಅಣೆಕಟ್ಟೆಯಿಂದ ೧೨ ಸಾವಿರದಿಂದ ೨೦ ಸಾವಿರ ಕ್ಯೂಸೆಕ್ಸ್ನವರೆಗೆ ನೀರು ಹರಿಸುತ್ತಿದ್ದು, ಅಣೆಕಟ್ಟೆಯ ಒಳ ಹರಿವಿನ ಏರಿಳಿತ ನೋಡಿಕೊಂಡು ಅಣೆಕಟ್ಟೆಯ ಭದ್ರತೆಯ ಹಿತದೃಷ್ಟಿಯಿಂದ ಒಳ ಹರಿವಿನ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತದೆ. ಇದೀಗ ಒಳ ಹರಿವು ಕಡಿಮೆಯಾಗುತ್ತಿದ್ದು, ಅಣೆಕಟ್ಟೆಯಿಂದ ೧೨ ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಅಭಿಯಂತರ ಚನ್ನಕೇಶವ, ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್ ಮತ್ತು ಇಂಜಿನಿಯರ್ ಕಿರಣ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಾಸ್ಕರ್ ನಾಯಕ್, ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಮೂಡ ಅಧ್ಯಕ್ಷ ಎಂ.ಎA. ಚರಣ್, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಲುವರಾಜ್, ಪಟ್ಟಣ ಪಂಚಾಯಿತಿ ಸದಸ್ಯ ಅಮೃತರಾಜ್, ಪ್ರಮುಖರಾದ ಶಿವಕುಮಾರ್
ವೈಶಾಕ್, ಪುಡರಿಕ್ಷಾ, ಮಣಿ, ಕುಮಾರ್ ಮೊದಲಾದವರು ಇದ್ದರು.