ಬೂಕನಕೆರೆ ಯಡಿಯೂರಪ್ಪ ಎಂಬ ಹೋರಾಟಗಾರ ತನ್ನ ನೇತೃತ್ವದ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಸಂತೋಷದ ಘಳಿಗೆಯಲ್ಲಿಯೇ ಮುಖ್ಯಮಂತ್ರಿ ಹುದ್ದೆಗೆ ಕಣ್ಣೀರಿಡುತ್ತಲೇ ರಾಜೀನಾಮೆ ನೀಡಿದ್ದಾರೆ.

ಶಿಕಾರಿಪುರದ ಈ ಕ್ರಾಂತಿಕಾರ, ಛಲಗಾರನ ಅಧಿಕಾರದ ಅಂತ್ಯ ಈ ರೀತಿ ಆಗುತ್ತದೆ ಎಂದು ಕೆಲವೇ ವಾರಗಳ ಮುನ್ನ ಯಾರೂ ಊಹಿಸಿರಲಿಲ್ಲ. ಊಹಿಸುವುದು ಕೂಡ ಸಾಧ್ಯವಿರಲಿಲ್ಲ. ಯಾಕೆಂದರೆ, ಬಿಜೆಪಿಯನ್ನು ಕರ್ನಾಟಕದಲ್ಲಿ ಮಾತ್ರ ಅಲ್ಲ, ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಕಾರಣಕರ್ತರಾದ ಯಡಿಯೂರಪ್ಪ ಅವರನ್ನು ಬಿಟ್ಟು ಕರ್ನಾಟಕದಲ್ಲಿ ಬೇರೊಬ್ಬ ಮುಖ್ಯಮಂತ್ರಿ ಆಗುವುದನ್ನು ಯೋಚಿಸಲೇ ಅಸಾಧ್ಯವಾದ ಸ್ಥಿತಿಯಿತ್ತು.

ಆದರೆ, ಯಡಿಯೂರಪ್ಪ ಬಿಜೆಪಿಯಿಂದ ಮುಖ್ಯಮಂತ್ರಿ ಹುದ್ದೆಗೇರಿದ್ದವರು. ವ್ಯಕ್ತಿಗಿಂತ ಪಕ್ಷ ಮುಖ್ಯ. ವ್ಯಕ್ತಿ ಎಷ್ಟೇ ಪ್ರಭಾವಶಾಲಿಯಾಗಿರಲಿ ಬಿಜೆಪಿಯಲ್ಲಿನ ಹೈಕಮಾಂಡ್ ಎಂಬುದು ಎಲ್ಲರಿಗಿಂತ ದೊಡ್ಡದು. ಮುಖ್ಯಮಂತ್ರಿ ಹುದ್ದೆಗಿಂತ, ಮುಖ್ಯಮಂತ್ರಿ ಆದವನಿಗಿಂತ ದೆಹಲಿಯ ಹೈಕಮಾಂಡ್ ಫವರ್‌ಫುಲ್ ಎಂಬುದು ಮತ್ತೊಮ್ಮೆ ಯಡಿಯೂರಪ್ಪ ರಾಜೀನಾಮೆಯಲ್ಲಿಯೂ ಸಾಬೀತಾಗಿದೆ.

ಇಂಥದ್ದೊAದು ಸಂದೇಶ ದೇಶವ್ಯಾಪಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಿಗೆ ತಲುಪಿಸುವುದು ಹೈಕಮಾಂಡ್‌ಗೆ ಬೇಕಾಗಿತ್ತು. ೭೫ ವರ್ಷ ಮೀರಿದವರಿಗೆ ಬಿಜೆಪಿಯಲ್ಲಿ ಅಧಿಕಾರ ಇಲ್ಲ ಎಂಬ ನೀತಿಯಂತೆ ೭೮ ವಯಸ್ಸಿನ ಯಡಿಯೂರಪ್ಪ ಹೈಕಮಾಂಡ್ ಸಂದೇಶಕ್ಕೆ ಸುಲಭವಾಗಿ ಮಣಿದಿದ್ದಾರೆ. ರಾಜಕೀಯ ಜೀವನ ಪ್ರಾರಂಭಿಸಿ ೫೦ ವರ್ಷಗಳಾಗಿದ್ದ ೨೦೨೧ ರಲ್ಲಿಯೇ ಯಡಿಯೂರಪ್ಪ ಪ್ರಮುಖ ಹುದ್ದೆಯಿಂದ ಮಹಾನಿರ್ಗಮನ ತೋರಿದ್ದಾರೆ.

ವಿಪರ್ಯಾಸ ನೋಡಿ. ಯಾವ ಪಕ್ಷವನ್ನು ತಾನು ಅಧಿಕಾರಕ್ಕೆ ತಂದೆನೋ.. ಆ ಪಕ್ಷದ ಮುಖ್ಯಮಂತ್ರಿಯಾಗಿ ಎರಡು ವರ್ಷ ಪೂರೈಸಿದ ದಿನವೇ ತಾನು ಸಿಎಂ ಹುದ್ದೆಗೆ ರಾಜೀನಾಮೆ ನೀಡಬೇಕಾದ ಸಂದಿಗ್ಗತೆಯಲ್ಲಿ ಯಡಿಯೂರಪ್ಪ ಸಿಲುಕಿದರು.

ಕರ್ನಾಟಕದಲ್ಲಿ ಅತ್ಯಂತ ಹೆಚ್ಚಿನ ಅವಧಿಗೆ ಅಂದರೆ ೪ ಬಾರಿ ಮುಖ್ಯಮಂತ್ರಿ ಆದ ಹೆಗ್ಗಳಿಕೆ ಯಡಿಯೂರಪ್ಪ ಅವರದ್ದು. ಹಾಗೆಯೇ ೪ ವರ್ಷಗಳೂ ಮುಖ್ಯಮಂತ್ರಿ ಹುದ್ದೆಯನ್ನೂ ನಿಗದಿತ ೫ ವರ್ಷಗಳ ಕಾಲ ಪೂರೈಸಲಾಗದ ಅಸಹಾಯಕತೆಯೂ ಯಡಿಯೂರಪ್ಪ ಅವರದ್ದು.

ನಾಲ್ಕೂ ವರ್ಷಗಳು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಕಳೆದ ದಿನಗಳ ಒಟ್ಟು ಲೆಕ್ಕ ಹಾಕಿದರೆ ಅದು ೫ ವರ್ಷಗಳನ್ನು ಪೂರೈಸುತ್ತದೆ. ತಾವು ೪ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ ತಿಂಗಳಿನಲ್ಲಿಯೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕಾದ ಅನಿವಾರ್ಯತೆ ಯಡಿಯೂರಪ್ಪ ಅವರನ್ನು ಕಾಡಿದ್ದು ಮತ್ತೊಂದು ವಿಪರ್ಯಾಸ.

ಯಡಿಯೂರಪ್ಪ ಅಂದರೆ ಕೆಂಡದAಥ ಕೋಪ.. ಯಡಿಯೂರಪ್ಪ ಅಂದರೆ ನಿಷ್ಟೂರವಂತ. ಯಡಿಯೂರಪ್ಪ ಅಂದರೆ ಹಠವಾದಿ, ಛಲಗಾರ... ಯಾರ ಮಾತನ್ನೂ ಕೇಳದೆ ತನ್ನ ಹಾದಿಯಲ್ಲಿಯೇ ತಾನು ನಡೆಯುವ ಮೊಂಡುತನದ ರಾಜಕೀಯ ನಾಯಕ..

ಈ ವರ್ಣನೆ ಕೆಲವೇ ವರ್ಷಗಳ ಹಿಂದಿನವರೆಗೂ ಇತ್ತು. ಆದರೆ ಕಳೆದ ವಾರ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಎಂಬ ಕ್ರಾಂತಿಕಾರಿಯನ್ನು ದೆಹಲಿಗೆ ಕರೆಯಿಸಿಕೊಂಡು ಮಾತುಕತೆ ನಡೆಸಿ ರಾಜೀನಾಮೆ ಕೊಟ್ಟು ಬಿಡಿ ಎಂದು ಆದೇಶ ನೀಡಿದ ಬಳಿಕ ಬೆಂಗಳೂರಿಗೆ ಮರಳಿದ ಯಡಿಯೂರಪ್ಪ ಅವರಲ್ಲಿ ಸಾಕಷ್ಟು ಬದಲಾವಣೆ ಕಂಡುಬAದಿದ್ದವು.

ಯಡಿಯೂರಪ್ಪ ಮೆತ್ತಗಾಗಿದ್ದರು. ತಣ್ಣಗಾಗಿದ್ದರು.. ಮೃದುವಾಗಿದ್ದರು.. ಬಿಜೆಪಿ ಹೈಕಮಾಂಡ್ ನಿರ್ಣಯದ ವಿರುದ್ಧ ಯಾರಲ್ಲೂ ಹೇಳಿಕೊಳ್ಳಲಾಗದ ಅಸಹಾಯಕ ಸ್ಥಿತಿ ಅವರನ್ನು ಕಾಡಿತ್ತು. ಹೀಗಾಗಿ ತನ್ನ ಪರ ಪ್ರತಿಭಟನೆಗೆ ಮುಂದಾದವರನ್ನು ಮತ್ತು ಪರ ವಹಿಸಿ ಹೇಳಿಕೆ ನೀಡುತ್ತಿದ್ದ ರಾಜ್ಯದ ೫೦೦ಕ್ಕೂ ಅಧಿಕ ಮಠಾಧೀಶರನ್ನೂ ಯಡಿಯೂರಪ್ಪ ಹೀಗೆ ಮಾಡದಂತೆ ವಿನಮ್ರರಾಗಿ ವಿನಂತಿಸಿದ್ದರು.

ಬಿ.ಎಸ್. ಯಡಿಯೂರಪ್ಪ - ದೇಶದಲ್ಲಿಯೇ ಮೊದಲ ಬಾರಿಗೆ ರೈತಪರ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಎಂಬ ಹಿರಿಮೆ ಹೊಂದಿದವರು. ಹಸಿರು ಶಾಲು ಹೊದ್ದು ೨೦೧೧-೧೨ನೇ ಸಾಲಿನಲ್ಲಿ ೧೭,೮೫೭ ಕೋಟಿ ಮೊತ್ತದ ಕೃಷಿ ಬಜೆಟ್ ಮಂಡಿಸಿ ತಾನು ರೈತ ಪರ ಎಂದು ಸಂದೇಶ ಸಾರಿದರು. ದೇಶದಲ್ಲಿಯೇ ಮೊದಲ ಬಾರಿಗೆ ಕೃಷಿ ಜಾಗತಿಕ ಬಂಡವಾಳ ಸಮಾವೇಶ ಆಯೋಜಿಸಿದರು. ಆರೋಗ್ಯ ಕವಚ ಆ್ಯಂಬ್ಯುಲೆನ್ಸ್ ಸೇವೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಪ್ರಾರಂಭಿಸಿದರು.

ಸಹಕಾರಿ ಸಂಸ್ಥೆಗಳಿAದ ಪಡೆಯುವ ರೂ. ೩ ಲಕ್ಷವರೆಗಿನ ಬೆಳೆ ಸಾಲದ ಬಡ್ಡಿಯನ್ನು ಶೇ.೧ಕ್ಕೆ ಇಳಿಸಿದ ಕೀರ್ತಿಯೂ ಯಡಿಯೂರಪ್ಪ ಅವರದ್ದು. ರಾಜ್ಯದಲ್ಲಿನ ಮಠಗಳಿಗೆ, ದೇವಾಲಯಗಳಿಗೆ ಬಜೆಟ್‌ನಲ್ಲಿ ಭರ್ಜರಿ ಅನುದಾನ ನೀಡಿದ ಹಿರಿಮೆಯೂ ಇವರದ್ದು. ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆ, ವಿದ್ಯಾರ್ಥಿಗಳಿಗೆ ಉಚಿತ ಸೈಕಲ್, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಹೀಗೆ ಸಾಕಷ್ಟು ಹೊಸ ರೀತಿಯ ಯೋಜನೆಗಳನ್ನೂ ಯಡಿಯೂರಪ್ಪ ಜಾರಿಗೊಳಿಸಿ ದೇಶದಲ್ಲಿ ಗಮನ ಸೆಳೆದಿದ್ದರು. ರಾಜ್ಯದಲ್ಲಿ ೪ ಬಾರಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮಂಡಿಸಿದ ಬಜೆಟ್‌ಗಳು ೮. ಉಪ ಮುಖ್ಯಮಂತ್ರಿಯಾಗಿ ೨ ಸಲ, ಮುಖ್ಯಮಂತ್ರಿಯಾಗಿ ೬ ಸಲ ಬಜೆಟ್ ಮಂಡಿಸಿದ ದಾಖಲೆಯೂ ಯಡಿಯೂರಪ್ಪ ಅವರದ್ದು.

...

ಬಾಲ್ಯದಲ್ಲಿ ಕಡುಬಡತನದಿಂದ ನಲುಗಿದ್ದ ಕುಟುಂಬಕ್ಕೆ ಆರ್ಥಿಕ ನೆರವಿಗಾಗಿ ನಿಂಬೆ ಹಣ್ಣು ಮಾರಾಟ ಮಾಡುತ್ತಾ ಖರ್ಚಿಗೆ ಹಣ ಕೂಡಿಸುತ್ತಿದ್ದ ಸ್ವಾಭಿಮಾನಿ ಮನೋಧರ್ಮದ ಹುಡುಗನೋರ್ವ ಮುಂದೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಛಾಪು ಬೀರಿದ್ದೇ ಒಂದು ಇತಿಹಾಸ..

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಹಿನ್ನೆಲೆ ೪೫ ವರ್ಷಗಳ ಸುದೀರ್ಘ ಹೋರಾಟದ ಫಲವಿದೆ. ಆ ಹೋರಾಟದ ಹಿಂದಿನ ಶಕ್ತಿಯೇ ಯಡಿಯೂರಪ್ಪ ಎಂಬುದು ಬಿಜೆಪಿ ಮಾತ್ರವಲ್ಲ ಕರ್ನಾಟಕದ ರಾಜಕೀಯ ಬಲ್ಲವರಿಗೆ ತಿಳಿದಿದೆ. ಯಡಿಯೂರಪ್ಪ ಅವರದ್ದು ಛಲದಂಕ ಮಲ್ಲನ ಹೋರಾಟ.

ಹೀಗಾಗಿಯೇ ೧೯೮೫ ರಲ್ಲಿ ಕರ್ನಾಟಕದಲ್ಲಿ ಕೇವಲ ೨ ಸ್ಥಾನವಿದ್ದ ಶಾಸಕ ಸ್ಥಾನವನ್ನು ೨೦೧೮ ರಲ್ಲಿ ೧೨೦ಕ್ಕೆ ಏರಿಸಿದ ಕೀರ್ತಿ ಅವರದ್ದು. ದಕ್ಷಿಣ ಭಾರತದ ಬಿಜೆಪಿಯಲ್ಲಿಯೇ ಅತೀದೊಡ್ಡ ಶಕ್ತಿವಂತ ನಾಯಕ ಎಂಬ ಹಿರಿಮೆಯೂ ಈ ಕಾರಣಕ್ಕಾಗಿಯೇ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ.

...

ದಕ್ಷಿಣದಲ್ಲಿ ಕಮಲ ಅರಳಿಸಿದ ಹಿರಿಮೆ

ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದವರು ಅಂದಿನ ಕರ್ನಾಟಕ ಬಿಜೆಪಿಯ ಅಧ್ಯಕ್ಷರಾಗಿದ್ದ ಯಡಿಯೂರಪ್ಪ ಅವರು.. ಶಿವಮೊಗ್ಗದ ಶಿಕಾರಿಪುರದಲ್ಲಿ ೧೯೮೩ ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ವಿಧಾನಸೌಧ ಪ್ರವೇಶಿಸಿದ್ದ ಯಡಿಯೂರಪ್ಪ ಬಿಜೆಪಿಯನ್ನು ಕರ್ನಾಟಕದಾದ್ಯಂತ ಬೆಳೆಸಿ ೨೩ ವರ್ಷಗಳ ಸತತ ಹೋರಾಟ ಫಲಶ್ರುತಿಯಾಗಿ ೨೦೦೬ ರ ಫೆಬ್ರವರಿಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿ ಪೀಠ ಅಲಂಕರಿಸಿದರು.

ಜೆಡಿಎಸ್‌ನ ೪೬ ಶಾಸಕರು ಬಿಜೆಪಿಯ ೭೯ ಶಾಸಕರು ಸೇರಿಕೊಂಡು ಜೆಡಿಎಸ್ ಬಿಜೆಪಿ ಮೈತ್ರಿ ಸರ್ಕಾರ ರಚನೆಯಾದಾಗ ಹೆಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ಚಾಣಕ್ಷತೆ ಗುರುತಿಸಿ ಯಡಿಯೂರಪ್ಪ ಅವರೇ ಕುಮಾರಸ್ವಾಮಿ ಅವರನ್ನು ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗುವAತೆ ಪ್ರೋತ್ಸಾಹಿಸಿದರು. ತಾವು ಉಪಮುಖ್ಯಮಂತ್ರಿ ಹುದ್ದೆಯಲ್ಲಿ ಆಸೀನರಾದರು. ನಂತರ ೨೦ ತಿಂಗಳ ಅಧಿಕಾರ ಮುಗಿದ ಬಳಿಕ ಕುಮಾರಸ್ವಾಮಿ ನಿರೀಕ್ಷೆಯಂತೆ ಬಿಜೆಪಿಗೆ ಅಧಿಕಾರ ಬಿಟ್ಟುಕೊಡದೆ ಹೋದಾಗ ಕೆಂಡಾಮAಡಲರಾದ ಯಡಿಯೂರಪ್ಪ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ರಾಜ್ಯವ್ಯಾಪಿ ಸಂಚರಿಸಿ ಯಶಸ್ವಿಯಾದರು.

ಯಡಿಯೂರಪ್ಪ ಪ್ರಯತ್ನದ ಫಲ, ಅವರಿಗಿದ್ದ ವರ್ಚಸ್ಸಿನಿಂದಾಗಿಯೇ ಕರ್ನಾಟಕದಲ್ಲಿ ೨೦೦೮, ೨೦೧೩ ಮತ್ತು ೨೦೧೮ರ ಚುನಾವಣೆಗಳಲ್ಲಿ ಕಮಲ ಪಕ್ಷ ಅರಳಿತು. ೨೦೧೮ - ಯಡಿಯೂರಪ್ಪ ಅವರ ಪಾಲಿಗೆ ಮತ್ತೊಂದು ಅಗ್ನಿಪರೀಕ್ಷೆಯ ದಿನಗಳು. ವಿಧಾನಸಭೆಯಲ್ಲಿ ಸಂಪೂರ್ಣ ಬಹುಮತ ಸಾಬೀತುಪಡಿಸಲು ಅಗತ್ಯವಿದ್ದ ೧೧೩ ಸ್ಥಾನಗಳನ್ನು ಪಡೆಯಲಾಗದೇ ೧೧೦ ಸ್ಥಾನಗಳಿಗೆ ಬಂದು ತಲುಪಿದ್ದ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಯಡಿಯೂರಪ್ಪ ಹೊಸ ತಂತ್ರ ಬಳಸಿದರು. ಪಕ್ಷೇತರ ಶಾಸಕರನ್ನು ಸೆಳೆದು ಮತ್ತೆ ಮುಖ್ಯಮಂತ್ರಿಯಾದರು.

ಲೋಕಸಭಾ ಚುನಾವಣೆಯಲ್ಲಿಯೂ ಯಡಿಯೂರಪ್ಪ ವರ್ಚಸ್ಸು ಕೆಲಸ ಮಾಡಿತ್ತು. ಕರ್ನಾಟಕದಲ್ಲಿ ೨೫ ಬಿಜೆಪಿ ಸಂಸದರು ಆಯ್ಕೆಯಾದರು. ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಚಾಣಕ್ಷತನವನ್ನು ನಿಬ್ಬೆರಗಾಗಿ ನೋಡಿದ್ದಂತೂ ಸತ್ಯ.

೨೦೧೯ ರ ಜುಲೈನಲ್ಲಿ ರಾಜಕೀಯ ಕ್ರಾಂತಿ ಕಂಡುಬAದಾಗ ೧೭ ಶಾಸಕರನ್ನು ಕಾಂಗ್ರೆಸ್‌ನಿAದ ಬಿಜೆಪಿಗೆ ಸೆಳೆದ ಯಡಿಯೂರಪ್ಪ ಮಾತು ಕೊಟ್ಟಂತೆ ೧೧ ಮಂದಿಗೆ ಸಚಿವ ಸ್ಥಾನ ನೀಡಿ ಕಮಲ ಪಡೆಯನ್ನು ಮುಂದಕ್ಕೆ ಕೊಂಡೊಯ್ದರು.

ಬಹುಷ ಈ ಎಲ್ಲಾ ಕಾರಣದಿಂದಾಗಿಯೇ ಯಡಿಯೂರಪ್ಪ ಅವರಿಗೆ ೭೮ ವರ್ಷ ಆಗಿದ್ದರೂ ಅಧಿಕಾರದಲ್ಲಿ ಈವರೆಗೆ ಮುಂದುವರೆಯುವ ಅವಕಾಶವನ್ನು ಹೈಕಮಾಂಡ್ ದಯಪಾಲಿಸಿತ್ತು. ಅದೇ ರೀತಿ ಹೈಕಮಾಂಡ್ ಯಡಿಯೂರಪ್ಪ ಅವರಿಂದ ನಿಷ್ಟೂರವಾಗಿ ಅಧಿಕಾರವನ್ನೂ ಕಿತ್ತುಕೊಂಡು ತನ್ನ ಪವರ್ ಏನೆಂಬುದನ್ನು ನಿರೂಪಿಸಿತು.

....

ಸಿಎಂ ಆದರೂ ಸವಾಲುಗಳ ಸರಮಾಲೆ - ನೆಮ್ಮದಿಯೇ ಇಲ್ಲದ ದಿನಗಳನ್ನು ಕಳೆದರು.

...

ದೇಶದಲ್ಲಿ ಗಮನಿಸುವುದಾದರೆ ಅನೇಕ ರಾಜ್ಯಗಳಲ್ಲಿ ಮುಖ್ಯಮಂತ್ರಿಯಾದವರು ಆ ಹುದ್ದೆಗೆ ಬಂದ ನಂತರ ಸಂತೋಷದಿAದ ಇರುತ್ತಾರೆ. ನೆಮ್ಮದಿಯಿಂದ ಅಧಿಕಾರ ಚಲಾಯಿಸುತ್ತಾರೆ.

ಆದರೆ ರಾಜ್ಯದ ಇತಿಹಾಸದಲ್ಲಿ ಅತ್ಯಧಿಕ ಬಾರಿ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದರೂ ಯಡಿಯೂರಪ್ಪ ಮಾತ್ರ ಒಂದೇ ಒಂದು ಅವಧಿಗೂ ನೆಮ್ಮದಿಯಿಂದ ಅಧಿಕಾರ ನಡೆಸಲು ಸಾಧ್ಯವಾಗಲೇ ಇಲ್ಲ. ಇದುವೇ ವಿಪರ್ಯಾಸ. ಸದಾ ಒಂದಲ್ಲ ಒಂದು ಸಂಕಷ್ಟ, ಸಂಕಟ, ಸವಾಲು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಇವರನ್ನು ಕಾಡುತ್ತಲೇ ಇತ್ತು. ಹೀಗಿದ್ದರೂ ಯಾವುದಕ್ಕೂ ದೃತಿಗೆಡದೇ ಎಂಥಾ ಸವಾಲುಗಳನ್ನೂ ಕೂಡ ಕೆಚ್ಚೆದೆಯಿಂದ ಎದುರಿಸಿ ಸಾಮರ್ಥ್ಯ ತೋರಿದ್ದ ಹೆಗ್ಗಳಿಕೆ ಇವರದ್ದು.

ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಮೈತ್ರಿ ರಾಜಕಾರಣಿಗಳೊಂದಿಗೆ ಸಂಘರ್ಷದಿAದ ಸರ್ಕಾರ ಮುಂದೋಡಿಸಿಕೊAಡದ್ದು ಒಂದೆಡೆಯಾದರೆ ತನ್ನ ಮೇಲಿನ ಆರೋಪಕ್ಕೆ ಪ್ರತಿಯಾಗಿ ಜೈಲು ಸೇರಿ ಸಿಎಂ ಪದವಿಯಿಂದ ಕೆಳಕ್ಕಿಳಿದ ನೋವಿನ ಅನುಭವ ಕೂಡ ಮತ್ತೊಂದೆಡೆ.

ಎಷ್ಟೇ ವರ್ಚಸ್ಸು ಇದ್ದರೂ ೨೦೧೮ ರಲ್ಲಿ ನಿಗದಿತ ಸಂಖ್ಯೆಯನ್ನು ತಲುಪದೇ ಹೋದಾಗಲೂ ಕಂಗೆಟ್ಟು, ಕೊನೆಗೆ ಮಹಾತಂತ್ರಗಾರಿಕೆಯಿAದ ಶಾಸಕರನ್ನೆಲ್ಲಾ ಸೆಳೆದು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತರೂ ಪಕ್ಷ ಮತ್ತು ವಲಸಿಗ ಶಾಸಕ, ಸಚಿವರ ಒತ್ತಡದಲ್ಲಿ ಅಧಿಕಾರವನ್ನು ತಾನು ಅಂದುಕೊAಡAತೆ ನಡೆಸಲಾಗದೇ ಹೈರಾಣಾದದ್ದು ಅಷ್ಟೇ ಸತ್ಯ.

ಹೋರಾಟಗಾರನಾಗಿಯೇ ಸಮಾಜದಲ್ಲಿ ಮತ್ತು ರಾಜಕೀಯದಲ್ಲಿ ಬೆಳೆಯುತ್ತಲೇ ಬಂದ ಕ್ರಾಂತಿಕಾರಿ ಮುಖ್ಯಮಂತ್ರಿಯಾದರೂ ಹೋರಾಟಗಾರನಾಗಿಯೇ ನೆಮ್ಮದಿ ರಹಿತವಾಗಿ ಜೀವನ ಕಾಣುವಂತಾದದ್ದು ವಿಪರ್ಯಾಸ.

ಈ ರೀತಿ ನೋಡಿದ್ದಲ್ಲಿ ಯಡಿಯೂರಪ್ಪ ಅವರಿಗಿಂತ ವಿಷಾದಭರಿತ ನಾಯಕ ಬೇರೋರ್ವ ಇರಲಿಕ್ಕಿಲ್ಲ. ಎಲ್ಲಾ ಸರಿಯಾಯಿತು ಎಂದು ಅಧಿಕಾರ ನಡೆಸಲು ಮುಂದಾದರೆ ತನಗಿಂತ ಶಕ್ತಿಶಾಲಿಯಾದ ಹೈಕಮಾಂಡ್ ನಾಯಕರ ಕಾಟ ಈ ಶಿಕಾರಿಪುರದ ಸರದಾರನನ್ನು ಕಾಡುತ್ತಿತ್ತು. ತನಗೆ ಬೇಕಾದವರನ್ನು ಮುಖ್ಯಮಂತ್ರಿಯಾಗಿ ತನ್ನದೇ ಸಂಪುಟದಲ್ಲಿ ಸೇರಿಸಲು ಹೈಕಮಾಂಡ್ ನಾಯಕರು ಬಿಡಲಿಲ್ಲ.

ಸಂತೋಷದಿAದ ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸುತ್ತಿದ್ದೇನೆ ಎಂದು ಅಧಿಕಾರ ಬಿಡುವ ಮುನ್ನ ಯಡಿಯೂರಪ್ಪ ಭಾವುಕರಾಗಿ ಹೇಳಿದರು.

ಸಂತೋಷದಿAದ ನಿರ್ಗಮನ..? ನಿಜವಾಗಿಯೂ? ನಂಬುವವರು ನಂಬಬಹುದು....!!!! - ಅನಿಲ್ ಎಚ್.ಟಿ.