ಕೂಡಿಗೆ, ಜು. ೨೬: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಜಲಾಶಯದ ಆವರಣದಲ್ಲಿರುವ ಸಂಗೀತ ಕಾರಂಜಿ ಜಾಗದಲ್ಲಿ ಗ್ಯಾಲರಿ ನಿರ್ಮಾಣ ಮಾಡಲು ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್ ಅವರಿಗೆ ಸಮಾಜ ಸೇವಾ ಸಂಸ್ಥೆ ರಿಜಿಡ್ ಗ್ರೂಪ್ ವತಿಯಿಂದ ಮನವಿ ಸಲ್ಲಿಸಲಾಯಿತು.
ಸಂಗೀತ ಕಾರಂಜಿ ವೀಕ್ಷಿಸಲು ಬರುವ ಜನರಿಗೆ ಅರ್ಧ ಗಂಟೆ ಕಾಲ ನಡೆಯುವ ಸಂಗೀತ ಕಾರಂಜಿಯನ್ನು ವೀಕ್ಷಿಸಲು ಕುಳಿತುಕೊಳ್ಳಲು ಮತ್ತು ಮಳೆಯಿಂದ ರಕ್ಷಣೆ ಪಡೆಯಲು ಯಾವುದೇ ವ್ಯವಸ್ಥೆ ಇಲ್ಲದಿರುವುದನ್ನು ಅಧಿಕಾರಿ ಗಮನಕ್ಕೆ ತಂದು ಆದಷ್ಟು ಬೇಗ ಗ್ಯಾಲರಿ ನಿರ್ಮಾಣ ಮಾಡಲು ರಿಜಿಡ್ ಗ್ರೂಪ್ ನ ಸಂಚಾಲಕ ಎ.ಎಸ್. ಕುಮಾರ್ ನೇತೃತ್ವದಲ್ಲಿ ಮನವಿ ಮಾಡಲಾಯಿತು.
ಈ ಸಂದರ್ಭ ಮಹೇಂದ್ರ ಕುಮಾರ್ ಮಾತನಾಡಿ, ತಮ್ಮ ಗಮನದಲ್ಲೂ ಗ್ಯಾಲರಿ ನಿರ್ಮಾಣ ಮಾಡುವ ಉದ್ದೇಶವಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಆದ್ಯತೆ ಮೇರೆಗೆ ಕಾಮಗಾರಿ ನಡೆಸಲಾಗುವುದು ಎಂದು ಭರವಸೆ ನೀಡಿದ್ದರು. ಈ ಸಂದರ್ಭ ರಿಜಿಡ್ ಗ್ರೂಪ್‌ನ ಸದಸ್ಯ ಎನ್.ವಿ. ಬಾಬು, ವಿ.ಆರ್. ಮಂಜುನಾಥ್, ಕೆ.ಎಸ್. ನಾಗೇಶ್ ಇದ್ದರು.