ಪೊನ್ನಂಪೇಟೆ, ಜು.೨೫: ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಸೇರಿದಂತೆ ಶ್ರೀಘ್ರದಲ್ಲೇ ಘೋಷಣೆಯಾಗಲಿರುವ ನೂತನ ಡಿಸಿಸಿಗೆ ಕಾಂಗ್ರೆಸ್ ಪಕ್ಷದಲ್ಲಿ ಇರುವ ಸಕ್ರಿಯ ಅಲ್ಪಸಂಖ್ಯಾತ ಪ್ರಮುಖರನ್ನು ಪರಿಗಣಿಸಬೇಕು ಎಂದು ಒಮ್ಮತದ ನಿರ್ಣಯ ಅಂಗೀಕರಿಸಲಾಗಿದೆ.
ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಎಂ.ಎ. ಉಸ್ಮಾನ್ ಅವರ ಅಧ್ಯಕ್ಷತೆಯಲ್ಲಿ ಮಡಿಕೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಕಾಂಗ್ರೆಸ್ ಅಲ್ಪಸಂಖ್ಯಾತ ಪ್ರಮುಖರ ಮಹತ್ವದ ಸಭೆಯಲ್ಲಿ ಈ ನಿರ್ಣಯವನ್ನು ಸರ್ವಾನುಮತದಿಂದ ಅನುಮೋದಿಸಲಾಯಿತು.
ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿದ್ದಾರೆ. ಪಕ್ಷದ ಮೇಲೆ ಹಿಂದಿನಿAದಲೂ ವಿಶ್ವಾಸವಿರಿಸಿ ಕೊಂಡಿರುವ ಅಲ್ಪಸಂಖ್ಯಾತರು, ಯಾವುದೇ ಸಂಕಷ್ಟದಲ್ಲೂ ಕಾಂಗ್ರೆಸ್ಸನ್ನು ಕೈ ಬಿಟ್ಟವರಲ್ಲ. ಇದನ್ನು ಕಾಂಗ್ರೆಸ್ ಮರೆಯುವಂತಿಲ್ಲ. ಕಾಂಗ್ರೆಸ್ ಅಲ್ಪಸಂಖ್ಯಾತರ ಕಾರ್ಯಕರ್ತರ ಭಾವನೆಗಳನ್ನು ಪಕ್ಷ ಇನ್ನಾದರೂ ಅರ್ಥಮಾಡಿಕೊಳ್ಳಬೇಕು ಎಂದು ಸೂಕ್ಷö್ಮವಾಗಿ ಸಲಹೆ ನೀಡಿದ್ದಾರೆ.
ಪಕ್ಷದಿಂದ ದೂರ ಉಳಿದಿರುವ ಅಲ್ಪಸಂಖ್ಯಾತರನ್ನು ಮತ್ತೆ ಪಕ್ಷಕ್ಕೆ ಕರೆತರುವ ಕೆಲಸವಾಗಬೇಕಿದೆ. ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಪ್ರತಿಯೊಬ್ಬರೂ ಶಕ್ತಿಮೀರಿ ಶ್ರಮಿಸಬೇಕಿದೆ ಎಂದು ಸಭೆ ಅಭಿಪ್ರಾಯಪಟ್ಟಿತು.
ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಘೋಷಣೆಯಾಗಲಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಕಾರ್ಯಕಾರಿ ಸಮಿತಿಗೆ ಜಿಲ್ಲಾ ಅಲ್ಪಸಂಖ್ಯಾತ ಘಟಕ ಸೂಚಿಸುವ ಸುಮಾರು ೧೫ ಅಲ್ಪಸಂಖ್ಯಾತ ಪ್ರಮುಖರನ್ನು ಆಯ್ಕೆ ಮಾಡಬೇಕು. ಅಲ್ಲದೇ ಮುಂಬರುವ ಜಿ.ಪಂ. ಹಾಗೂ ತಾ.ಪಂ. ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮತದಾರರು ಹೆಚ್ಚಾಗಿ ಇರುವ ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯದ ಆಧಾರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಅರ್ಹ ಹಾಗೂ ಯೋಗ್ಯರಿಗೆ ಟಿಕೆಟ್ ನೀಡಲೇಬೇಕು ಎಂದು ಈ ಸಭೆ ಒತ್ತಾಯಿಸಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಕೊಡಗು ಜಿಲ್ಲೆಯಿಂದ ಅಲ್ಪಸಂಖ್ಯಾತ ಕಾಂಗ್ರೆಸ್ ನಾಯಕರೊಬ್ಬರನ್ನು ಪದಾಧಿಕಾರಿಯಾಗಿ ನೇಮಿಸಬೇಕು.
ಕಾರ್ಯಕ್ರಮದಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಹೆಚ್.ಎ. ಹಂಸ ಕೊಟ್ಟಮುಡಿ, ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಘಟಕದ ಪ್ರಧಾನ ಕಾರ್ಯದರ್ಶಿ ಯಾದ ಸೋಮವಾರಪೇಟೆಯ ಅಶ್ರಫ್, ಕೆಪಿಸಿಸಿ ಮಾಧ್ಯಮ ಸಂವಾಹಕರಾದ ವೀರಾಜಪೇಟೆಯ ಆರ್. ಕೆ. ಸಲಾಂ ಅವರನ್ನು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಶರೀಫಾಜಿ ಮಾದಾಪುರ, ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆಯಾಗಿ ನೇಮಕಗೊಂಡ ಫರ್ಜಾನ, ಕುಶಾಲನಗರ ನಗರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಅಶ್ರಫ್ ಅವರಿಗೆ ಪಕ್ಷದ ವತಿಯಿಂದ ಆದೇಶ ಪತ್ರವನ್ನು ಹಸ್ತಾಂತರಿಸಲಾಯಿತು.
ಸಭೆಯಲ್ಲಿ ಘಟಕದ ಉಪಾಧ್ಯಕ್ಷ ಆರಿಸ್ ಎಡಪಾಲ, ಕೆಪಿಸಿಸಿ ಮಾಧ್ಯಮ ಸಂವಾಹಕ ಆರ್.ಕೆ. ಸಲಾಂ, ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಕೆ.ಎಂ. ಅಬ್ದುಲ್ ರಹಿಮಾನ್ (ಬಾಪು), ಜಿಲ್ಲಾ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಸಯ್ಯದ್ ಬಾವ, ಉಪಾಧ್ಯಕ್ಷರಾದ ಸುನಿಲ್ ಮಡಿಕೇರಿ, ಇಸ್ಮಾಯಿಲ್ ಗುಂಡಿಗೆರೆ, ಸಲೀಂ ಹೊಸಕೋಟೆ, ಉಪಾಧ್ಯಕ್ಷೆ ಅಮೀನಾ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ ಕೊಟ್ಟಮುಡಿ, ಉಪಾಧ್ಯಕ್ಷ ಇಬ್ರಾಹಿಂ ಸೀದಿ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷ ಖಲೀಲ್ ಭಾಷಾ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಬ್ದುಲ್ ರಝಾಕ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಜುಬೇರ್ ಕಡಂಗ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೋಳುಮಂಡ ರಫೀಕ್, ವೀರಾಜಪೇಟೆಯ ಪಟ್ಟಣ ಪಂಚಾಯತ್ ಸದಸ್ಯರಾದ ರಾಫಿ ಹಾಗೂ ಬೆನ್ನಿ ಅಗಸ್ತಿಯ ಮೊದಲಾದ ವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.