ಕಣಿವೆ, ಜು. ೨೫: ಕಾವೇರಿ ಕಣಿವೆಯ ಪ್ರಮುಖ ಜಲಾಶಯ ಗಳಲ್ಲೊಂದಾದ ಹಾರಂಗಿ ಜಲಾಶಯ ಲಕ್ಷಾಂತರ ಮಂದಿ ಕೃಷಿಕರ ಜೀವನಾಡಿ. ನಾಡಿನ ಜನ ಹಾಗೂ ಜಾನುವಾರುಗಳು ಸೇರಿದಂತೆ ಅಸಂಖ್ಯ ಜೀವ ಕೋಟಿಗಳ ದಣಿವಾರಿಸುವ ಸಂಜೀವಿನಿ.

ಈ ಜಲಾಶಯಕ್ಕೆ ೧೯೬೯ರಲ್ಲಿ ಅಂದು ರಾಜ್ಯದ ಮುಖ್ಯಮಂತ್ರಿ ಯಾಗಿದ್ದ ದಿ. ವೀರೇಂದ್ರ ಪಾಟೀಲ್ ಭೂಮಿ ಪೂಜೆ ನೆರವೇರಿಸಿದ್ದರು. ಕೊಡಗಿನ ಕೃಷಿಕರಿಗೆ ವರದಾನವಲ್ಲದ ನೆರೆ ಜಿಲ್ಲೆಯ ಕೃಷಿಕರಿಗೆ ಲಾಭದಾಯಕವಾಗಿದ್ದ ಈ ಜಲಾಶಯದ ನಿರ್ಮಾಣಕ್ಕೆ ಶಂಕುಸ್ಥಾಪನೆಗೂ ಮುನ್ನಾ ಸ್ಥಳೀಯರು ವ್ಯಾಪಕವಾದ ವಿರೋಧ ವ್ಯಕ್ತಪಡಿಸಿದ್ದರು.

ಅಂದರೆ ಹುಲಗುಂದದ ಬಳಿ ಜಲಾಶಯ ನಿರ್ಮಾಣವಾದರೆ ಸುತ್ತಲಿನ ಹತ್ತಾರು ಕಿ.ಮೀ. ಪ್ರದೇಶದ ಸಾವಿರಾರು ಎಕರೆ ಕೃಷಿ ಭೂಮಿ ನೀರುಪಾಲಾಗುತ್ತದೆ, ಹತ್ತಾರು ಗ್ರಾಮಗಳನ್ನು ತೊರೆಯುವ ಭೀತಿಯಲ್ಲಿ ಅಂದು ಸ್ಥಳೀಯ ಮುಖಂಡರಾಗಿದ್ದ ಯಡವನಾಡಿನ ಡಿ. ಹನುಮರಾಜೇ ಅರಸು ಮತ್ತು ಕರಿಯಪ್ಪ ಅವರ ನೇತೃತ್ವದಲ್ಲಿ ಹಲವು ಬಾರಿ ಪ್ರತಿಭಟನೆಗಳು ಜರುಗಿದ್ದವು.

ಆದರೆ ರೈತರ ಹಿತದೃಷ್ಟಿಯ ಏಕೋದ್ದೇಶ ಹೊಂದಿದ್ದ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಸ್ಥಳೀಯರ ವಿರೋಧ-ಪ್ರತಿಭಟನೆಯ ನಡುವೆಯೂ ಜಲಾಶಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ನಿಗದಿಪಡಿಸಿದ್ದ ‘ಶುಕ್ರವಾರ’ ದಿನದಂದು ಹುಲಗುಂದ ಗ್ರಾಮಕ್ಕೆ ಆಗಮಿಸಿಯೇ ಬಿಟ್ಟರು.

ಇನ್ನೇನು ಪುರೋಹಿತರು ಪೂಜೆ ಆರಂಭಿಸಬೇಕು ಎನ್ನುವಷ್ಟರಲ್ಲಿ ಸ್ಥಳಕ್ಕಾಗಮಿಸಿದ ಸ್ಥಳೀಯ ರೈತರು ಜಲಾಶಯ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನಡೆಯಕೂಡದು, ಹಾಗೊಂದು ವೇಳೆ ಇಷ್ಟೆಲ್ಲಾ ನಮ್ಮ ವಿರೋಧದ ನಡುವೆ ಅಣೆಕಟ್ಟೆ ಕಟ್ಟುವುದೇ ಆದರೆ ನಮ್ಮನ್ನು ಮೊದಲು ಜೀವಂತ ಸಮಾಧಿ ಮಾಡಿ ಆಮೇಲೆ ಅದರ ಮೇಲೆ ಜಲಾಶಯ ಕಟ್ಟಿ ಎಂದು ಆಕ್ರೋಶ ವ್ಯಕ್ತಪಡಿಸಿ, ಪೂಜೆಗೆಂದು ಇರಿಸಿದ್ದ ಕಲಶವನ್ನು ಉರುಳಿಸಿ ರೊಚ್ಚಿಗೆದ್ದರು.

ಇತ್ತ ರೈತರ ಪ್ರತಿರೋಧವನ್ನು ನೋಡುತ್ತಲೇ ನಿಂತಿದ್ದ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಭವಿಷ್ಯದ ರೈತರ ಆಶಾಕಿರಣವಾದ ಈ ಹಾರಂಗಿ ಜಲಾಶಯ ನಿರ್ಮಾಣಕ್ಕೆ ವಿರೋಧ ಮಾಡಬೇಡಿ ಎಂದು ಕೈಮುಗಿದು ನೀವು ಒಂದು ವೇಳೆ ತಡೆಯೊಡ್ಡುವುದೇ ಆದರೆ ಮೊದಲು ನನ್ನ ಎದೆಗೆ ಗುಂಡು ಹಾರಿಸಿ ಎಂದು ನೀಳಕಾಯದ ದೇಹಕ್ಕೆ ಹೊದಿಕೆಯಾಗಿದ್ದ ಕಪ್ಪು ಕೋಟನ್ನು ಬಿಚ್ಚಿ ಪ್ರತಿಭಟನಾಕಾರರೆದುರು ಎದೆಯೊಡ್ಡಿ ನಿಂತರು. ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿ ಪೂಜೆಗಿದ್ದ ಅಡ್ಡಿಯನ್ನು ನಿವಾರಿಸಿದರು.

ಕರ್ನಾಟಕದ ದಕ್ಷಿಣದಲ್ಲಿ ತಲೆ ಎತ್ತಿ ನಾಡಿನ ದಣಿವಾರಿಸುತ್ತಿರುವ ಹಾರಂಗಿ, ಹೇಮಾವತಿ ಹಾಗೂ ಕಬಿನಿ ಜಲಾಶಯಗಳ ಲಾಭ ಪಡೆಯುತ್ತಿರುವ ಸಹಸ್ರಾರು ರೈತರ ಮನೆ-ಮನಗಳಲ್ಲಿ ಇಂದಿಗೂ ವೀರೇಂದ್ರ ಪಾಟೀಲರ ಸ್ಮರಣೆ ಇದೆ.

ಜಲಾಶಯಕ್ಕಾಗಿ ಹತ್ತಾರು ಗ್ರಾಮಗಳು ಮುಳುಗಡೆ

ಹಾರಂಗಿ ಜಲಾಶಯ ನಿರ್ಮಾಣಕ್ಕಾಗಿ ಹಾರಂಗಿ ಹಿನ್ನೀರಿನಲ್ಲಿದ್ದ ನಾಕೂರು, ಶಿರಂಗಾಲ, ಹರದೂರು, ಅಂಜನಗೇರಿ, ಬೆಟ್ಟಗೇರಿ, ಯಡವಾರೆ, ಜಂಬೂರು, ಹುಲುಗುಂದ, ಹಾರಂಗಿ, ಸಜ್ಜಳ್ಳಿ, ಕಾಜೂರು ಗ್ರಾಮಗಳ ೪,೭೧೭ ಎಕರೆ ಕೃಷಿ ಭೂಮಿ ಮುಳುಗಡೆಯಾಯಿತು.

ಇಲ್ಲಿನ ಕೃಷಿಕರಿಗೆ ಪರ್ಯಾಯವಾಗಿ ಹಾರಂಗಿ ಎಡ ಮತ್ತು ಬಲ ಬದಿಯ ಅತ್ತೂರಿನಲ್ಲಿ ೧,೩೦೦ ಎಕರೆ ಹಾಗೂ ಯಡವನಾಡಿನಲ್ಲಿ ೧,೫೦೦ ಎಕರೆ ಭೂಮಿಯನ್ನು ಹಂಚಲಾಯಿತು. ಈ ವೇಳೆ ೮೦೦ ಎಕರೆ ದಟ್ಟಾರಣ್ಯವನ್ನು ಕೂಡ ನೆಲಸಮ ಮಾಡಲಾಯಿತು.

ಜಿಲ್ಲೆಗೆ ಪ್ರಯೋಜನ ಕಡಿಮೆ

ಹಾರಂಗಿ ಜಲಾಶಯ ನಿರ್ಮಾಣದಿಂದ ಕೊಡಗು ಜಿಲ್ಲೆಯ ಶೇ. ೫ ರಷ್ಟು ಕೃಷಿಕರಿಗೆ ಮಾತ್ರ ಪ್ರಯೋಜನವಾಗುತ್ತಿದೆ. ಅಂದರೆ ಕೂಡಿಗೆ, ಹೆಬ್ಬಾಲೆ, ತೊರೆನೂರು ಹಾಗೂ ಶಿರಂಗಾಲ ಗ್ರಾಮ ಪಂಚಾಯಿತಿಗಳ ೧೫-೨೦ ಗ್ರಾಮಗಳ ಕೃಷಿಕರಿಗೆ ಮಾತ್ರ ಇದರ ಸೌಲಭ್ಯ ಸಿಗುತ್ತಿದೆಯಾದರೂ, ತೊರೆನೂರು ಹಾಗೂ ಶಿರಂಗಾಲ ಗ್ರಾಮಗಳ ಕೊನೆ ಭಾಗದ ಕೃಷಿಕರ ಗದ್ದೆಗಳಿಗೆ ಈ ಕಾಲುವೆಗಳ ನೀರೇ ಹರಿಯುತ್ತಿಲ್ಲ ಎಂಬದು ಇಲ್ಲಿನ ರೈತರ ಅಳಲು.

೧೯೬೯ರಲ್ಲಿ ಭೂಮಿ ಶಂಕುಸ್ಥಾಪನೆಗೊAಡು ೩೭೩ ಕೋಟಿ ವೆಚ್ಚದಲ್ಲಿ ಕಟ್ಟಿದ ಈ ಜಲಾಶಯವನ್ನು ೨೭.೧೧.೧೯೮೦ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕುಶಾಲನಗರದವರೇ ಆದ ದಿ. ಆರ್. ಗುಂಡೂರಾವ್ ಉದ್ಘಾಟಿಸಿದ್ದರು.

ಜಲಾಶಯದ ವಿವರ

೧೬೨ ಚದರ ಮೈಲಿಗಳ ಜಲಾನಯನ ಪ್ರದೇಶವುಳ್ಳ ಇಲ್ಲಿ ವಾರ್ಷಿಕವಾಗಿ ಸರಾಸರಿ ೫೦ ರಿಂದ ೧೫೦ ಇಂಚು ಮಳೆ ಸುರಿಯುತ್ತದೆ. ಜಲಾಶಯಕ್ಕೆ ಹರಿದು ಬರುವ ನೀರಿನ ಶೇಖರಣಾ ಸಾಮರ್ಥ್ಯ ೮.೫೦ ಟಿಎಂಸಿ. ಸಮುದ್ರ ಮಟ್ಟದಿಂದ ೨೮೫೯ ಅಡಿ ಎತ್ತರದಲ್ಲಿರುವ ಈ ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ ೮.೫೦ ಟಿಎಂಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ ಘಟಿಸಿದ ಜಲಪ್ರವಾಹಗಳಿಂದಾಗಿ ಒಂದು ಟಿಎಂಸಿಯಷ್ಟು ಹೂಳು ತುಂಬಿರುವ ಬಗ್ಗೆ ಅಂದಾಜಿಸಿರುವ ಅಧಿಕಾರಿಗಳು ಇದರ ಹೂಳು ತೆಗೆಯಲು ೧೩೩ ಕೋಟಿ ರೂ.ಗಳನ್ನು ಕಾಯ್ದಿರಿಸಿದ್ದಾರೆ. ಹಾಗಾಗಿ ಜಲಾಶಯದಲ್ಲಿ ಪ್ರಸ್ತುತ ನೀರಿನ ಸಂಗ್ರಹಣಾ ಸಾಮರ್ಥ್ಯ ೭.೫೦ ಟಿಎಂಸಿಯಷ್ಟಿರಬಹುದು ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ.

ಜಲಾಶಯದ ಎಡದಂಡೆ ಹಾಗೂ ಬಲದಂಡೆ ನಾಲೆಗಳಲ್ಲಿ ೧,೪೮,೧೯೩ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಬೇಕಿದ್ದು, ೧೨೦ ದಿನಗಳ ಅವಧಿಗೆ ಎಡ ಹಾಗೂ ಬಲದಂಡೆ ನಾಲೆಗಳಲ್ಲಿ ೧೯೩೪ ಕ್ಯೂಸೆಕ್ಸ್ನಂತೆ ೨೦.೦೫ ಟಿಎಂಸಿ ಹಾಗೂ ಅಣೆಕಟ್ಟು ನಾಲೆಗಳಾದ ಕಟ್ಟೇಪುರ, ಚಾಮರಾಜ, ಮಿರ್ಲೆ ಮತ್ತು ರಾಮಸಮುದ್ರ ನಾಲೆಗಳಿಗೆ ವಿನ್ಯಾಸಿತ ೨೦೧೫ ಕ್ಯೂಸೆಕ್ಸ್ನಂತೆ ೧೨೦ ದಿನಗಳ ಅವಧಿಗೆ ಹರಿಸಲು ೨೦.೮೯ ಟಿಎಂಸಿ ನೀರಿನ ಅವಶ್ಯಕತೆ ಇದೆ. ಹಾಗೆಯೇ ಜಲಾಶಯದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ೨೯೨ ಕೆರೆಗಳಿದ್ದು ಅವುಗಳಿಗೂ ನೀರು ತುಂಬಿಸಲಾಗುತ್ತಿದೆ.

ವಾರ್ಷಿಕ ಆಹಾರೋತ್ಪತ್ತಿ?

ಜಲಾಶಯದ ಎಡ ಹಾಗೂ ಬಲದಂಡೆ ಕಾಲುವೆಗಳ ಅಚ್ಚುಕಟ್ಟು ಪ್ರದೇಶದಲ್ಲಿ ವಾರ್ಷಿಕ ೪೨,೬೭೦ ಟನ್ ಭತ್ತ ಬೆಳೆಯುವ ಗುರಿ ಇದೆ. ಅಂದರೆ ಎಡದಂಡೆ ಕಾಲುವೆಯ ಸೋಮವಾರ ಪೇಟೆ ತಾಲೂಕಿನ ಕೂಡಿಗೆ, ಹೆಬ್ಬಾಲೆ, ತೊರೆನೂರು ಹಾಗೂ ಶಿರಂಗಾಲ ಗ್ರಾಮ ಪಂಚಾಯಿತಿಗಳ ೨೦ ಗ್ರಾಮಗಳಿಗೆ ಸೇರಿದ ಕೇವಲ ೫೪೦೦ ಎಕರೆ ಕೃಷಿ ಭೂಮಿಗೆ ನೀರು ಹರಿಸಿದರೆ, ಅರಕಲಗೂಡು ತಾಲೂಕಿನ ೧೨,೩೮೨ ಎಕರೆ, ಪಿರಿಯಾಪಟ್ಟಣ ತಾಲೂಕಿನ ೧೧೬೮ ಎಕರೆ ಹಾಗೆಯೇ ಬಲದಂಡೆ ಕಾಲುವೆಯ ಕೆ.ಆರ್.ನಗರ ತಾಲೂಕಿನಲ್ಲಿ ೫೬೯೫ ಎಕರೆ, ಹುಣಸೂರು ತಾಲೂಕಿನ ೪೬೮೦೦ ಎಕರೆ ಹಾಗೆಯೇ ಪಿರಿಯಾಪಟ್ಟಣ ತಾಲೂಕಿನ ಬಲದಂಡೆ ಕಾಲುವೆಯ ೧೮೨೨೬ ಎಕರೆ ಭೂಮಿಗೆ ನೀರು ಹರಿಸಲಾಗುತ್ತಿದೆ.

ಹಾರಂಗಿಯ ನದಿಗಳು

ಹಾರಂಗಿ ೮.೫೦ ಟಿಎಂಸಿ ನೀರು ಶೇಖರಣಾ ಸಾಮರ್ಥ್ಯದ ಜಲಾಶಯಕ್ಕೆ ಹಟ್ಟಿಹೊಳೆ, ಅಬ್ಬಿಫಾಲ್ಸ್, ಮುಕ್ಕೋಡ್ಲು ಹೊಳೆ ಸೇರಿದಂತೆ ಸಣ್ಣ ಪುಟ್ಟ ತೊರೆಗಳು ಒಂದೆಡೆ ಹರಿದುಬಂದರೆ, ಮತ್ತೊಂದೆಡೆ ಕೋಟೆಬೆಟ್ಟದ ಕಡೆಯಿಂದ ಮೇದುರ ಹೊಳೆ, ನಾಪಂಡ ಹೊಳೆ ತೊರೆಗಳು ಮಾದಾಪುರದ ಬಳಿ ಸಂಗಮಗೊAಡು ನದಿಯಾಗಿ ಹಾರಂಗಿ ಜಲಾಶಯಕ್ಕೆ ಬಂದು ಸೇರುತ್ತವೆ.

ಕ್ಯೂಸೆಕ್ಸ್ ಎಂದರೆ ಏನು?

ಸಾಮಾನ್ಯವಾಗಿ ಜಲಾಶಯಗಳಲ್ಲಿ ನದಿ ಹಾಗೂ ಕಾಲುವೆಗಳಿಗೆ ನೀರು ಹರಿಸುವಾಗ ಕ್ಯೂಸೆಕ್ಸ್ ಲೆಕ್ಕಾಚಾರದಲ್ಲಿ ಹರಿಸಲಾಗುತ್ತದೆ. ಒಂದು ಕ್ಯೂಸೆಕ್ಸ್ ಅಂದರೆ ಪ್ರತೀ ಸೆಕೆಂಡ್‌ಗೆ ೨೮.೩ ಲೀಟರ್ ನೀರು ಹರಿದು ಹೋಗುವುದನ್ನು ಕ್ಯೂಸೆಕ್ಸ್ ಎಂದು ಕರೆಯಲಾಗುತ್ತದೆ.

ಒಂದು ಟಿಎಂಸಿ ಅಂದರೇನು?

ಒಂದು ಟಿಎಂಸಿ ಅಂದರೆ ಥೌಸಂಡ್ ಮಿಲಿಯನ್ ಕ್ಯುಬಿಕ್ ಫೀಟ್ ಎಂದು ಅರ್ಥ. ಅಂದರೆ ಒಂದು ಸಾವಿರ ದಶಲಕ್ಷ ಘನ ಅಡಿ. ಇನ್ನೂ ವಿಸ್ತರಿಸಿ ಹೇಳುವುದಾದರೆ ಒಂದು ಸಾವಿರ ಅಡಿ ಅಗಲ, ಒಂದು ಸಾವಿರ ಅಡಿ ಉದ್ದ, ಒಂದು ಸಾವಿರ ಅಡಿ ಆಳದ ಟ್ಯಾಂಕ್ ಕಟ್ಟಿದರೆ ಅದರಲ್ಲಿ ಹಿಡಿಸಬಹುದಾದಷ್ಟು ನೀರು. ಬಹುತೇಕ ಮೂರು ಕಿಮೀ ಉದ್ದ-ಅಗಲದ. ವಿಸ್ತೀರ್ಣದಲ್ಲಿ ನಿಲ್ಲಬಹುದಾದ ಹತ್ತು ಅಡಿ ಎತ್ತರದ ನೀರು.

೧೧ ಸಾವಿರ ಕ್ಯೂಸೆಕ್ಸ್ ನೀರನ್ನು ೨೪ ಗಂಟೆಗಳ ಕಾಲ ಹರಿಬಿಟ್ಟರೆ ಅದು ಒಂದು ಟಿಎಂಸಿ. ಒಂದು ಟಿಎಂಸಿಗೆ ೨೮೩೦ ಕೋಟಿ ಲೀಟರ್ ನೀರು. ಒಂದು ಟಿಎಂಸಿ ನೀರಿನಲ್ಲಿ ೪,೫೦೦ ಎಕರೆ ಭೂಮಿಯಲ್ಲಿ ಕಬ್ಬು ಅಥವಾ ಭತ್ತ ಬೆಳೆಯಬಹುದು ಎನ್ನಲಾಗುತ್ತದೆ.

ಹಾರಂಗಿಗೆ ೧೧.೬೭ ಟಿಎಂಸಿ ಒಳ ಹರಿವು

ಕೇವಲ ೮.೫೦ ಟಿಎಂಸಿ ನೀರು ಶೇಖರಣಾ ಸಾಮರ್ಥ್ಯದ ಹಾರಂಗಿ ಜಲಾಶಯಕ್ಕೆ ಪ್ರಸಕ್ತ ಜಲ ವರ್ಷದಲ್ಲಿ ಡಿಸೆಂಬರ್ ಮಾಸಾಂತ್ಯದವರೆಗೆ ಕಳೆದ ೨೦ ವರ್ಷಗಳ ಕನಿಷ್ಟ ಒಳಹರಿವನ್ನು ಆಧರಿಸಿ ಈ ಬಾರಿ ೧೧.೬೭ ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬರಲಿದೆ ಎಂದು ಅಧಿಕಾರಿಗಳು ಅಂದಾಜಿ ಸಿದ್ದಾರೆ. ಅಂದರೆ ಜಲಾಶಯದ ಒಟ್ಟು ಸಾಮರ್ಥ್ಯದ ಮುಕ್ಕಾಲು ಭಾಗದಷ್ಟು ನೀರನ್ನು ಪ್ರತೀ ವರ್ಷ ನದಿಯ ಮೂಲಕ ಕೆಆರ್‌ಎಸ್‌ಗೆ ಹರಿಸಲಾಗುತ್ತದೆ.

ಈ ಪೈಕಿ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ೧,೧೧,೪೯೬ ಎಕರೆ ಅಚ್ಚುಕಟ್ಟು ಪ್ರದೇಶವುಳ್ಳ ೪.೧೩೪ ಟಿಎಂಸಿಯಷ್ಟು ನೀರನ್ನು ಸಂಗ್ರಹಿಸುವ ಸಾಮರ್ಥ್ಯದ ೨೯೨ ಕೆರೆಗಳಿವೆ.

ಕಳೆದ ವರ್ಷ ಜಲಾಶಯದಿಂದ ನಾಲೆಗಳಿಗೆ ೩೧.೭.೨೦೨೦ ರಂದು ನೀರನ್ನು ಹರಿಸಿ ೨೪.೧೨.೨೦೨೦ ರಂದು ಸ್ಥಗಿತಗೊಳಿಸಲಾಗಿತ್ತು. ಈ ಬಾರಿ ಜುಲೈ ೧೬ ರಿಂದ ಹರಿಸಲಾಗುತ್ತಿದೆ.

ಅಧೀಕ್ಷಕ ಇಂಜಿನಿಯರ್ ಮೇಲುಸ್ತುವಾರಿ

ಗರಿಷ್ಠ ೨೮೫೯ ಅಡಿಗಳ ಸಾಮರ್ಥ್ಯವಿರುವ ಹಾರಂಗಿ ಜಲಾಶಯವು ಪ್ರತೀ ವರ್ಷ ಮಳೆಗಾಲದಲ್ಲಿ ಭರ್ತಿಯಾದಾಗ ಅದರಿಂದ ಹೆಚ್ಚುವರಿಯಾಗುವ ನೀರನ್ನು ನದಿಗೆ ಹರಿಸಲು ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಇಂಜಿನಿಯರ್ ಮೇಲುಸ್ತುವಾರಿಯಲ್ಲಿ ಕಾರ್ಯಪಾಲಕ ಇಂಜಿನಿಯರ್ ಆದೇಶಿಸುತ್ತಾರೆ.

ಹಾಗಾಗಿ ಅಣೆಕಟ್ಟು ಹಾಗೂ ಅಣೆಕಟ್ಟೆಯ ನೀರಿನ ಜವಬ್ದಾರಿ ಇರುವಂತಹ ಸಹಾಯಕ ಕಾರ್ಯಪಾಲಕ ಅಭಿಯಂತರ ಹಾಗೂ ಸಹಾಯಕ ಅಭಿಯಂತರರು ಅಣೆಕಟ್ಟೆಯಲ್ಲಿ ಕಾರ್ಯನಿರ್ವಹಿಸುವ ಆರು ಸಿಬ್ಬಂದಿಗಳ ನೆರವಿನೊಂದಿಗೆ ಜಲಾಶಯದಲ್ಲಿನ ನಾಲ್ಕು ಕ್ರೆಸ್ಟ್ ಗೇಟುಗಳ ಮೂಲಕ ನೀರನ್ನು ನದಿಗೆ ಬಿಡುತ್ತಾರೆ.

ಈ ಜಲಾಶಯ ವ್ಯಾಪ್ತಿಯಲ್ಲಿ ಒಟ್ಟು ಹನ್ನೊಂದು ಸೆಕ್ಷನ್‌ಗಳಿದ್ದು ಪ್ರತೀ ಸೆಕ್ಷನ್‌ಗಳ ಅಧಿಕಾರಿಗಳು ವಾರಪೂರ್ತಿ ನಿಗಧಿಪಡಿಸಿದ ದಿನಗಳಂದು ಜಲಾಶಯದ ನೀರಿನ ನಿರ್ವಹಣೆ ಮಾಡುತ್ತಾರೆ.

ಜಲಾಶಯಕ್ಕೆ ಒಂದು ವೇಳೆ ದಿಢೀರನೇ ಲಕ್ಷಾಂತರ ಕ್ಯೂಸೆಕ್ಸ್ ನೀರು ಹರಿದು ಬಂದರೂ ಕೂಡ ನಾಲ್ಕು ಕ್ರೆಸ್ಟ್ ಗೇಟುಗಳನ್ನು ತೆರೆಯುವ ಮುನ್ನಾ ಗರಿಷ್ಠ ಮಟ್ಟವನ್ನು ದಾಟಿದ ನಂತರ ಮಾತ್ರ ಹೆಚ್ಚುವರಿ ನೀರು ಜಲಾಶಯದ ಮೇಲು ಕಟ್ಟೆ ಹಾಗೂ ಕ್ರೆಸ್ಟ್ ಗೇಟುಗಳ ನಡುವಿನ ಅಂತರ ದಲ್ಲಿರುವ ಜಾಗದಲ್ಲಿ ಅದರಷ್ಟಕ್ಕೆ ಅದು ನದಿಗೆ ಧುಮುಕುತ್ತದೆ. ಆದರೆ ಇಂತಹ ಪರಿಸ್ಥಿತಿಗೆ ಅಧಿಕಾರಿಗಳು ಅವಕಾಶವನ್ನು ಮಾಡಿಕೊಡುವುದಿಲ್ಲ.

ಜಲಾಶಯದಲ್ಲಿನ ನಾಲ್ಕು ಕ್ರೆಸ್ಟ್ ಗೇಟುಗಳಲ್ಲಿ ಹೆಚ್ಚುವರಿ ನೀರು ಹರಿಸುವಾಗ ಆಧುನಿಕ ತಂತ್ರಜ್ಞಾನದೊAದಿಗೆ ಅಳವಡಿಸಿರುವ ಮಾಪನದಲ್ಲಿ ಒಂದು ಕ್ಯೂಸೆಕ್ಸ್ನಿಂದ ಹಿಡಿದು ಲಕ್ಷ ಕ್ಯೂಸೆಕ್ಸ್ ತನಕವೂ ಜಲಾಶಯದಿಂದ ನದಿಗೆ ಹರಿದು ಹೋಗುವ ಪ್ರತೀ ಲೀಟರ್ ನೀರಿನ ಲೆಕ್ಕ ಮಾಪನದಲ್ಲಿ ದಾಖಲಾಗುತ್ತದೆ.

ಉದ್ಯಾನವನ

ಹಾರಂಗಿ ಜಲಾಶಯದ ಮುಂಭಾಗದಲ್ಲಿ ಕಾಲಿಯಿರುವ ನೂರಾರು ಎಕರೆ ವಿಶಾಲ ಜಾಗದ ಪೈಕಿ ಕೇವಲ ೧೦ ರಿಂದ ೧೨ ಎಕರೆ ಜಾಗದಲ್ಲಿ ಕಳೆದ ಏಳು ವರ್ಷಗಳ ಹಿಂದೆ ರೂ. ೫ ಕೋಟಿ ವೆಚ್ಚದಲ್ಲಿ ಆಕರ್ಷಕವಾದ ಉದ್ಯಾನವನವನ್ನು ನಿರ್ಮಿಸಲಾಗಿತ್ತು. ಆದರೆ ನಾಡಿನ ಎಲ್ಲಾ ಜಲಾಶಯಗಳಿಗೂ ಉಗ್ರರ ಭೀತಿಯ ಭೂತ ಆವರಿಸಿದ್ದರಿಂದ ಹಾರಂಗಿ ಜಲಾಶಯಕ್ಕೂ ಕಳೆದ ಆರೇಳು ವರ್ಷಗಳಿಂದ ಬಿಗಿ ಬಂದೋಬಸ್ತ್ ಕೈಗೊಂಡು ಪ್ರವಾಸಿಗರ ಪ್ರವೇಶಕ್ಕೆ ನಿಷೇಧವಿದ್ದ ಹಿನ್ನೆಲೆಯಲ್ಲಿ ಈ ಉದ್ಯಾನವನವೂ ಕಳೆಗುಂದಿತ್ತು.

ಇದೀಗ ಕೆಲವು ದಿನಗಳಿಂದ ಜಲಾಶಯದ ಉದ್ಯಾನವನ ಸೇರಿದಂತೆ ಜಲಾಶಯದ ಮುಂಭಾಗಕ್ಕೆ ಪ್ರವಾಸಿಗರ ಪ್ರವೇಶವನ್ನು ಮುಕ್ತಗೊಳಿಸಿದ್ದು ದಿನಂಪ್ರತೀ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ವಿಶ್ವವಿಖ್ಯಾತಿಯ ಕೆಆರ್‌ಎಸ್ ಜಲಾಶಯದಲ್ಲಿನ ಜಾಗಕ್ಕೆ ಹೋಲಿಸಿದಲ್ಲಿ ಹಾರಂಗಿ ಅಣೆಕಟ್ಟೆಯ ಮುಂಬದಿಯಲ್ಲಿ ಇರುವ ಜಾಗ ಬಹಳಷ್ಟು ವಿಶಾಲವಾಗಿರುವುದರಿಂದ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಈಗಿರುವ ಉದ್ಯಾನ ವನವನ್ನು ಮತ್ತಷ್ಟು ಅಭಿವೃದ್ಧಿ ಗೊಳಿಸಬೇಕಿದೆ.

ಸಂಗೀತ ಕಾರಂಜಿ

ಹಾರAಗಿ ಜಲಾಶಯದ ಉದ್ಯಾನದೊಳಗೆ ಕಳೆದ ಎರಡು ವರ್ಷಗಳ ಹಿಂದೆ ರೂ. ೨.೪೯ ಕೋಟಿ ವೆಚ್ಚದಲ್ಲಿ ಸಂಗೀತ ಕಾರಂಜಿಯನ್ನು ಅಳವಡಿಸ ಲಾಗಿದ್ದು, ಅದು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.

ಹಾರಂಗಿ ಜಲಾಶಯದ ಉದ್ಯಾನ ಹಾಗೂ ಸಂಗೀತ ಕಾರಂಜಿ ನೋಡಲು ಆಗಮಿಸುವ ಪ್ರವಾಸಿಗರಿಗೆ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಪ್ರವಾಸಿಗರಿಗೆ ಬೆಳಿಗ್ಗೆ ೧೦ ಗಂಟೆಯಿAದ ರಾತ್ರಿ ೭.೩೦ ರವರೆಗೆ ಸಮಯ ನಿಗದಿ ಗೊಳಿಸಲಾಗಿದೆ ಎಂದು ಅಣೆಕಟ್ಟೆ ವಿಭಾಗದ ಎಇಇ ಮಹೇಂದ್ರ ಕುಮಾರ್ ತಿಳಿಸಿದ್ದಾರೆ.

- ಕೆ.ಎಸ್. ಮೂರ್ತಿ