ಪೊನ್ನಂಪೇಟೆ, ಜು. ೨೪: ಮಳೆಗಾಲದ ಸಂದರ್ಭದಲ್ಲಿ ಹಲವು ಪ್ರವಾಹಪೀಡಿತ ಪ್ರದೇಶಗಳು ಒಳಪಡುವ ಹೊದ್ದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೂಡಲೇ ಕೋವಿಡ್ ಲಸಿಕಾ ಶಿಬಿರವನ್ನು ಆಯೋಜಿಸಬೇಕು ಎಂದು ಹೊದ್ದೂರು ಗ್ರಾ.ಪಂ. ಸದಸ್ಯರೂ ಆಗಿರುವ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎಚ್.ಎ. ಹಂಸ ಆಗ್ರಹಿಸಿದ್ದಾರೆ. ಕಾವೇರಿ ನದಿ ತೀರ ಪ್ರದೇಶ ಒಳಪಡುವ ಹೊದ್ದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಪ್ರತಿವರ್ಷ ಪ್ರವಾಹ ಎದುರಾಗುತ್ತದೆ. ಈ ವೇಳೆ ಹೊಳೆ ಅಂಚಿನಲ್ಲಿ ವಾಸಿಸುವ ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗುತ್ತದೆ. ಇದೀಗ ಕೋವಿಡ್ ಸೋಂಕಿನ ಆತಂಕವಿರುವುದರಿAದ ಪ್ರವಾಹ ಉಂಟಾಗುವ ಪ್ರದೇಶದ ಜನರಿಗೆ ಕೂಡಲೇ ಲಸಿಕೆ ದೊರೆಯಬೇಕಾಗಿದೆ ಎಂದು ಹೇಳಿದ್ದಾರೆ.
ಹೊದ್ದೂರು ಗ್ರಾ.ಪಂ. ವ್ಯಾಪ್ತಿಯ ನದಿದಡದಲ್ಲಿ ವಾಸಿಸುವವರ ಕುರಿತು ಈಗಾಗಲೇ ಮೂರ್ನಾಡು ಹೋಬಳಿಯ ಕಂದಾಯ ಇಲಾಖೆಯ ಸಿಬ್ಬಂದಿಗಳು ಸಮೀಕ್ಷೆ ನಡೆಸಿ ವರದಿ ತಯಾರಿಸಿದ್ದಾರೆ. ಸಮೀಕ್ಷೆ ನಡೆಸಿ ೧೫ ದಿನ ಕಳೆದರೂ ಇಲ್ಲಿನ ನಿವಾಸಿಗಳಿಗೆ ಇದುವರೆಗೂ ಕೋವಿಡ್ ಲಸಿಕೆ ದೊರೆತಿಲ್ಲ. ನಾಗರಿಕರಿಗೆ ಮೂರ್ನಾಡು ಮತ್ತು ನಾಪೋಕ್ಲು ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿಲ್ಲ. ಹೀಗಿರುವಾಗ ಜನತೆ ಎಲ್ಲಿಂದ ಲಸಿಕೆ ಪಡೆಯಬೇಕು ಎಂದು ಪ್ರಶ್ನಿಸಿದ್ದಾರೆ.