ಸೋಮವಾರಪೇಟೆ, ಜು. ೨೪: ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯ ಬದಿಯಲ್ಲಿ ಚರಂಡಿ ನಿರ್ಮಿಸದ ಹಿನ್ನೆಲೆ ಮಳೆಯ ನೀರು ಸಂಗ್ರಹಗೊAಡಿದ್ದು, ಲೋಕೋಪಯೋಗಿ ಇಲಾಖೆಯ ಕ್ರಮವನ್ನು ಖಂಡಿಸಿ ಗ್ರಾಮಸ್ಥರು ಗುಂಡಿಗಳಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿದರು. ಲೋಕೋಪಯೋಗಿ ಇಲಾಖೆಗೆ ಸರ್ಕಾರದಿಂದ ವಾರ್ಷಿಕ ಕೋಟ್ಯಾಂತರ ರೂಪಾಯಿ ಅನುದಾನ ಬರುತ್ತಿದ್ದರೂ ಹೆದ್ದಾರಿ ಬದಿಗಳಲ್ಲಿ ಸೂಕ್ತ ಚರಂಡಿ ನಿರ್ಮಿಸುತ್ತಿಲ್ಲ. ವಾರ್ಷಿಕ ರಸ್ತೆ ನಿರ್ವಹಣೆಗಾಗಿ ಬರುತ್ತಿರುವ ಅನುದಾನ ಅಭಿಯಂತರ ಹಾಗೂ ಗುತ್ತಿಗೆದಾರರ ಜೇಬಿಗೆ ಇಳಿಯುತ್ತಿದೆಯೇ ಹೊರತು ಕಾಮಗಾರಿ ನಡೆಯುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಹೆದ್ದಾರಿಯಲ್ಲಿ ಕೆರೆಯಂತೆ ನೀರು ಸಂಗ್ರಹವಾಗಿದ್ದು, ರಸ್ತೆ ಬದಿಯಲ್ಲಿ ನಡೆದಾಡಲೂ ಅಸಾಧ್ಯವಾಗಿದೆ. ವಾಹನಗಳು ಸಂಚರಿಸುವ ಸಂದರ್ಭ ಪಾದಚಾರಿಗಳಿಗೆ ಕೆಸರಿನ ಸಿಂಚನವಾಗುತ್ತಿದೆ. ತಕ್ಷಣ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸಿ, ಮಳೆ ನೀರಿನ ಸರಾಗ ಹರಿವಿಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.