ಚೆಟ್ಟಳ್ಳಿ, ಜು. ೨೪: ಕೋವಿಡ್ ನಿರೋಧಕ ಎರಡನೆ ಡೋಸ್ ಪಡೆಯಲು ಬೆಳ್ಳಂಬೆಳಿಗ್ಗೆ ೩ ಗಂಟೆಗೆ ಕಾದು ನಿಂತ ಘಟನೆ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

ಶುಕ್ರವಾರ ಎರಡನೇ ಲಸಿಕೆ ಪಡೆಯುವವರಿಗೆ ಹಾಗೂ ವಿದ್ಯಾರ್ಥಿಗಳಿಗೆ ನೀಡಲು ೨೦೦ ಲಸಿಕೆ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಲಾಗಿತ್ತು. ಎರಡು ದಿನಗಳ ಹಿಂದೆ ಲಸಿಕೆ ಪಡೆಯಲು ಬಂದವರಿಗೆ ಲಸಿಕೆ ಸಿಗದ ಹಿನ್ನೆಲೆ ಬೆಳ್ಳಂಬೆಳಿಗ್ಗೆ ಟೋಕನ್‌ಗಾಗಿ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರತೊಡಗಿದರು. ರಾತ್ರಿ ಪಾಳಿಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳು ಚೆಟ್ಟಳ್ಳಿ ಪ್ರಾಥಮಿಕ ಶಾಲೆ ಕೋವಿಡ್ ಲಸಿಕಾ ಕೇಂದ್ರವಾಗಿದ್ದು ಅಲ್ಲಿಗೆ ತೆರಳುವಂತೆ ಸೂಚಿಸಿದರು. ಬೆಳಿಗ್ಗೆ ೭ ಗಂಟೆಯ ನಂತರ ಆರೋಗ್ಯ ಸಿಬ್ಬಂದಿಗಳು ಬಂದು ಟೋಕನ್ ನೀಡಿದರು. ಟೋಕನ್ ಪಡೆದವರು ಚೆಟ್ಟಳ್ಳಿ ಪಟ್ಟಣದ ಹೊಟೇಲ್‌ನಲ್ಲಿ ಬೆಳಗ್ಗಿನ ಉಪಹಾರವನ್ನು ಸೇವಿಸಿ ಲಸಿಕೆ ಪಡೆಯಲು ತೆರಳುತಿದ್ದ ದೃಶ್ಯ ಕಂಡು ಬಂದವು. - ಕರುಣ್ ಕಾಳಯ್ಯ