ಜಿಲ್ಲಾ ಯುವ ಜೆಡಿಎಸ್

ಮಡಿಕೇರಿ, ಜು. ೨೪: ಜೀವನದಿ ಕಾವೇರಿ ಮಾತೆ ಮೇಲಿನ ಗೌರವದಿಂದ ಕೊಡಗಿನ ಸರ್ವ ಧರ್ಮೀಯರು ಸ್ವಯಂ ಪ್ರೇರಣೆಯಿಂದ ಗೋಹತ್ಯೆಯನ್ನು ವಿರೋಧಿಸುತ್ತಾರೆ. ಆದರೆ ಗೋಮಾಂಸದ ವಿಚಾರದಲ್ಲಿ ಕಾನೂನನ್ನು ಕೈಗೆ ತೆಗೆದುಕೊಂಡು ಸಂಘರ್ಷಕ್ಕೆ ಪ್ರಚೋದನೆ ನೀಡುವುದು ಸರಿಯಲ್ಲವೆಂದು ಜಿಲ್ಲಾ ಯುವ ಜಾತ್ಯತೀತ ಜನತಾದಳದ ಪ್ರಧಾನ ಕಾರ್ಯದರ್ಶಿ ಕೆ.ಜಿ. ಜಾಶಿರ್ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡಗಿನಲ್ಲಿ ಇತ್ತೀಚಿನ ದಿನಗಳಲ್ಲಿ ಗೋಮಾಂಸದ ಹೆಸರಿನಲ್ಲಿ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಸುಂಟಿಕೊಪ್ಪ ಸಮೀಪ ಗರಗಂದೂರು ಗ್ರಾಮದಲ್ಲಿ ಆಟೋಚಾಲಕನ ಮೇಲೆ ಇದೇ ಕಾರಣಕ್ಕಾಗಿ ಕೆಲವರಿಂದ ಹಲ್ಲೆ ನಡೆದಿದ್ದು, ಪೊಲೀಸರು ಹಲ್ಲೆ ಮಾಡಿದವರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವ ಮೂಲಕ ಈ ರೀತಿಯ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಜಿಲ್ಲೆಯ ಎಲ್ಲ ಧರ್ಮೀಯರು ಕಾವೇರಿ ಮಾತೆಯ ಮೇಲಿನ ಗೌರವದಿಂದ ಗೋಹತ್ಯೆಯನ್ನು ಸ್ವಯಂ ಪ್ರೇರಿತರಾಗಿ ವಿರೋಧಿಸುತ್ತಲೇ ಬಂದಿದ್ದಾರೆ. ಒಂದು ವೇಳೆ ಕಾನೂನು ಬಾಹಿರವಾಗಿ ಗೋಹತ್ಯೆ ಅಥವಾ ಗೋಮಾಂಸ ಮಾರಾಟ ಮಾಡುವುದು ಕಂಡುಬAದಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನದ ಮೇಲೆ ಗೌರವವಿರುವವರು ಪೊಲೀಸರಿಗೆ ದೂರು ನೀಡಬೇಕೆ ಹೊರತು ದೌರ್ಜನ್ಯ ನಡೆಸಬಾರದು ಎಂದು ಕಿವಿಮಾತು ಹೇಳಿದ್ದಾರೆ.