ಸೋಮವಾರಪೇಟೆ, ಜು. ೨೩: ಬಟ್ಟೆಯನ್ನು ಒಣಗಿಸಲೆಂದು ತಂತಿಯ ಮೇಲೆ ಹಾಕುತ್ತಿದ್ದ ಸಂದರ್ಭ ವಿದ್ಯುತ್ ಪ್ರವಹಿಸಿ ಮಹಿಳೆಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಬಳೂರು ಗ್ರಾಮದಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಬೆಂಬಳೂರು ಗ್ರಾಮ ನಿವಾಸಿ ಕಾಳಯ್ಯ ಅವರ ಪತ್ನಿ ಜಾನಕಿ (೫೫) ಎಂಬವರೇ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದವರು. ಇಂದು ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ವಿದ್ಯುತ್ ಶಾಕ್ನಿಂದ ಕೆಳಬಿದ್ದ ಜಾನಕಿ ಅವರನ್ನು ತಕ್ಷಣ ಪತಿ ಕಾಳಯ್ಯ ಹಾಗೂ ಸ್ಥಳೀಯರಾದ ಕಾರ್ತಿಕ್ ಅವರುಗಳು ಶನಿವಾರಸಂತೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಅಷ್ಟರಲ್ಲಾಗಲೇ ಮೃತಪಟ್ಟಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ.
ಹಳೆಯ ಮನೆಯನ್ನು ಭಾಗಶಃ ಕೆಡವಿ ನೂತನ ಮನೆಯನ್ನು ನಿರ್ಮಿಸುತ್ತಿದ್ದ ಕಾಳಯ್ಯ ಅವರು, ಹಳೆಯ ಮನೆಗೆ ಅಳವಡಿಸಿದ್ದ ಮೀಟರ್ನಿಂದಲೇ ಹೊಸ ಮನೆಗೂ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದರು. ನೂತನ ಮನೆಗೆ ಕಬ್ಬಿಣದ ಛಾವಣಿ ಅಳವಡಿಸಲಾಗಿದ್ದು, ಇದಕ್ಕೆ ಹೊಂದಿಕೊAಡAತೆ ವಿದ್ಯುತ್ ವಯರ್ಗಳನ್ನೂ ಎಳೆದಿದ್ದರು. ಮೀಟರ್ನಿಂದ ಹೊರಬಂದಿರುವ ವಿದ್ಯುತ್ ವಯರ್ ಹಳೆಯದಾಗಿದ್ದು, ಅಲ್ಲಲ್ಲಿ ಮೇಲ್ಪದರ ಕಿತ್ತುಬಂದಿದ್ದರಿAದ ಮನೆಯ ಛಾವಣಿಯಲ್ಲಿ ವಿದ್ಯುತ್ ಪ್ರವಹಿಸುತ್ತಿತ್ತು. ಇದೇ ಚಾವಣಿಗೆ ಬೇರೊಂದು ತಂತಿಯನ್ನು ಕಟ್ಟಿ ಬಟ್ಟೆ ಒಣಗಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು.
(ಮೊದಲ ಪುಟದಿಂದ) ಅದರಂತೆ ಇಂದು ಮಧ್ಯಾಹ್ನ ಬಟ್ಟೆ ಒಣಗಿಸಲು ತೆರಳಿದ ಸಂದರ್ಭ ಜಾನಕಿ ಅವರಿಗೆ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಶನಿವಾರಸಂತೆ ಪೊಲೀಸ್ ಇನ್ಸ್ಪೆಕ್ಟರ್ ಪರಶಿವಮೂರ್ತಿ ಹಾಗೂ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಮೃತರು ಪತಿ ಸೇರಿದಂತೆ ಈರ್ವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.