ನಾಪೋಕ್ಲು, ಜು. ೨೩: ನಾಪೋಕ್ಲು ಬ್ಲಾಕ್ ಕಾಂಗ್ರೆಸ್, ಕಿಸಾನ್ ಘಟಕದ ವತಿಯಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.
ಈ ಪ್ರಯುಕ್ತ ಏರ್ಪಡಿಸಲಾಗಿದ್ದ ಸರಳ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ|| ಕರುಂಬಯ್ಯ, ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ಕಡೆಗಳಲ್ಲಿಯೂ ಜಾತಿ ಧರ್ಮಗಳ ನಡುವೆ ಸಂಘರ್ಷಗಳು ನಡೆಯುತ್ತಿವೆ. ಆದರೆ, ರಕ್ತದಲ್ಲಿ ಯಾವದೇ ಜಾತಿ, ಧರ್ಮ, ವರ್ಣ ಬೇಧಗಳಿಲ್ಲ. ಯಾವದೇ ರಾಜಕೀಯವೂ ಇಲ್ಲ. ರಕ್ತದಾನದಿಂದ ಯಾವದೇ ಅಡ್ಡ ಪರಿಣಾಮಗಳಿಲ್ಲ. ೧೮ರಿಂದ ೬೦ ವರ್ಷದ ಒಳಗಿನ ಆರೋಗ್ಯವಂತ ವ್ಯಕ್ತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದು ತಿಳಿಸಿದರು.
ಈ ಸಂದರ್ಭ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ಕಿಸಾನ್ ಘಟಕದ ಅಧ್ಯಕ್ಷ ನೆರವಂಡ ಉಮೇಶ್, ನಾಪೋಕ್ಲು ವಲಯ ಕಾಂಗ್ರೆಸ್ ಅಧ್ಯಕ್ಷ ಮಾಚೆಟ್ಟಿರ ಕುಶು ಕುಶಾಲಪ್ಪ, ಯುವ ಘಟಕದ ಅಧ್ಯಕ್ಷ ಸಿರಾಜ್, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಆಮೀನಾ, ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯ ಕೋಡಿರ ವಿನೋದ್ ನಾಣಯ್ಯ, ಸುಧೀರ್, ಮಹಮ್ಮದ್, ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.