ಮಡಿಕೇರಿ, ಜು. ೨೩: ವಿದ್ಯುತ್ ಕಡಿತದಿಂದ ವೈದ್ಯಕೀಯ ವಿದ್ಯಾರ್ಥಿನಿ ಲಿಫ್ಟ್ ನಲ್ಲಿ ಸಿಲುಕಿಕೊಂಡ ಘಟನೆ ನಗರದ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.

ಕಳೆದ ಮೂರು ದಿನಗಳಿಂದ ಕಾಲೇಜಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಜನರೇಟರ್ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಈ ಮೂಲಕವೇ ಲಿಫ್ಟ್ ಕೂಡ ಕಾರ್ಯನಿರ್ವಹಿಸುತಿತ್ತು. ತಾ. ೨೩ ರಂದು ವಿದ್ಯಾರ್ಥಿನಿ ಲಿಫ್ಟ್ ನಲ್ಲಿ ಮತ್ತೊಂದು ಮಹಡಿಗೆ ತೆರಳುವ ಸಂದರ್ಭ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಇದರಿಂದ ಲಿಫ್ಟ್ ನೊಳಗೆ ಸಿಲುಕಿದ ವಿದ್ಯಾರ್ಥಿನಿ ಸ್ನೇಹಿತರಿಗೆ ಕರೆ ಮಾಡಿದ್ದಾರೆ. ಆದರೆ, ತರಗತಿ ನಡೆಯುತ್ತಿದ್ದ ಹಿನ್ನೆಲೆ ಯಾರು ಕರೆ ಸ್ವೀಕರಿಸಿಲ್ಲ. ಇದರಿಂದ ವಿದ್ಯಾರ್ಥಿನಿ ಲಿಫ್ಟ್ ನೊಳಗೆ ಸಿಲುಕಿರುವುದು ಕೂಡ ಯಾರಿಗೂ ತಿಳಿದಿಲ್ಲ. ಪರಿಣಾಮ ಸುಮಾರು ೪೫ ನಿಮಿಷಗಳ ಕಾಲ ಒಳಭಾಗದಲ್ಲಿ ವಿದ್ಯಾರ್ಥಿನಿ ಸಿಲುಕಿ ತೊಂದರೆ ಅನುಭವಿಸಿದ್ದಾರೆ. ನಂತರ ತರಗತಿ ಮುಗಿದ ಬಳಿಕ ಮಿಸ್ ಕಾಲ್ ಗಮನಿಸಿ ಮರಳಿ ಸ್ನೇಹಿತರು ಕರೆ ಮಾಡಿದಾಗ ಸಿಲುಕಿರುವುದು ಗೊತ್ತಾಗಿದೆ. ಇದನ್ನು ಸಿಬ್ಬಂದಿಗಳಿಗೆ ತಿಳಿಸಿದ್ದು, ಲಿಫ್ಟ್ ನಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿ ವಿದ್ಯಾರ್ಥಿನಿಯನ್ನು ರಕ್ಷಿಸಿದ್ದಾರೆ.