ಮಡಿಕೇರಿ, ಜು. ೨೩: ನಗರದ ಸ್ಟೋನ್ ಹಿಲ್ ಬಳಿ ಇರುವ ಕಸ ವಿಲೇವಾರಿ ಪ್ರದೇಶದಲ್ಲಿ ರೂ. ೩೦.೫೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಹಸಿಕಸ ಸಂಸ್ಕರಣಾ ಘಟಕಕ್ಕೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ ನೀಡಿದರು.
ಬಳಿಕ ಮಾತನಾಡಿ ಶಾಸಕ ಅಪ್ಪಚ್ಚು ರಂಜನ್, ಹಸಿಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ಯೋಜನೆ ಇದಾಗಿದ್ದು, ಪ್ರಾಯೋಗಿಕ ವಾಗಿ ೩ ಘಟಕ ಸ್ಥಾಪಿಸಿದ್ದು, ಇದರಿಂದ ಕಸದ ಸಮಸ್ಯೆ ಪರಿಹಾರ ಗೊಂಡಲ್ಲಿ, ಘಟಕವನ್ನು ಹೆಚ್ಚಿಸುವ ಯೋಜನೆ ಇದೆ. ಮಡಿಕೇರಿ ನಗರದಲ್ಲಿ ತ್ಯಾಜ್ಯ ನಿರ್ಮೂಲನೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ. ಸ್ವಚ್ಛ ಪರಿಸರವನ್ನು ನಿರ್ಮಿಸಲು ಶ್ರಮಿಸಬೇಕು. ಹಸಿ ಕಸವನ್ನು ಗೊಬ್ಬರವನ್ನಾಗಿ ಮಾಡುವ ನಿಟ್ಟಿನಲ್ಲಿ ಪೈಲೆಟ್ ಮಾದರಿಯಲ್ಲಿ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಪೌರಾಯುಕ್ತ ಎಸ್.ವಿ. ರಾಮದಾಸ್ ಮಾತನಾಡಿ, ಪ್ರತಿದಿನ ಒಂದು ಘಟಕದಲ್ಲಿ ೪೦೦ ರಿಂದ ೪೫೦ ಕೆ.ಜಿ ಹಸಿಕಸವನ್ನು ಸಂಸ್ಕರಿಸಬಹು ದಾಗಿದೆ. ೩ ಘಟಕ ಸದ್ಯಕ್ಕೆ ನಿರ್ಮಿಸಲಾಗಿದ್ದು, ೨೦೨೦-೨೧ ನೇ ಸಾಲಿನ ೧೫ನೇ ಹಣಕಾಸು ಆಯೋಗದ ಮೂಲಕ ಯೋಜನೆ ಕೈಗೊಳ್ಳಲಾಗಿತ್ತು ಎಂದು ಮಾಹಿತಿ ನೀಡಿದರು.
ಘಟಕ ಅಳವಡಿಸಿದ ಸಂಸ್ಥೆಯ ಸುರೇಶ್ ನಾಯರ್ ಮಾತನಾಡಿ, ಹಸಿಕಸದಿಂದ ಗೊಬ್ಬರ ಮಾಡುವಲ್ಲಿ ಸಂಸ್ಥೆಯು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಒಂದು ಘಟಕದಲ್ಲಿ ತಿಂಗಳಿಗೆ ೭ ಟನ್ ಹಸಿಕಸವನ್ನು ಸಂಗ್ರಹಿಸಿ ಬಳಿಕ ದೊರೆಯುವ ಗೊಬ್ಬರವನ್ನು ನೈಸರ್ಗಿಕ ಕೃಷಿಗೆ ಬಳಸಬಹುದಾಗಿದೆ. ಇದರಿಂದ ಕಸದ ಪ್ರಮಾಣ ಇಳಿಕೆಯಾಗಲಿದೆ ಎಂದರು.
ಎಇಇ ರಾಜೇಂದ್ರ ಕುಮಾರ್, ಎಇ ಶಮಂತ್, ನಗರಸಭಾ ಸದಸ್ಯರಾದ ಅರುಣ್ ಶೆಟ್ಟಿ, ಉಮೇಶ್ ಸುಬ್ರಮಣಿ, ಸವಿತಾ ರಾಕೇಶ್, ಮಂಜುಳ, ಚಂದ್ರಶೇಖರ, ಶ್ವೇತ, ಬಿಜೆಪಿ ನಗರಾಧ್ಯಕ್ಷ ಮನು ಮಂಜುನಾಥ್ ಸೇರಿದಂತೆ ಇನ್ನಿತರರು ಹಾಜರಿದ್ದರು.