ಕೂಡಿಗೆ, ಜು. ೨೧: ಹಾರಂಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಗೆ ಹೆಚ್ಚು ನೀರು ಬರುತ್ತಿದ್ದು ಅಣೆಕಟ್ಟೆಯಿಂದ ನದಿಗೆ ೧೪ ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸಲಾಗಿದೆ.
ಇಂದು ಸುರಿದ ಭಾರಿ ಮಳೆಗೆ ಹಾರಂಗಿ ಜಲಾನಯನ ಪ್ರದೇಶಗಳಾದ ಮಾದಾಪುರ ಹೊಳೆ ಮತ್ತು ಹಟ್ಟಿಹೊಳೆಗಳಿಂದ ಅಧಿಕ ಪ್ರಮಾಣದ ನೀರು ಹಾರಂಗಿಯ ಜಲಾಶಯಕ್ಕೆ ಸೇರುತ್ತಿರುವುದರಿಂದ ಅಣೆಕಟ್ಟೆಗೆ ೧೫ ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹರಿದು ಬಂದಿದೆ. ಅಣೆಕಟ್ಟೆಯ ಭದ್ರತೆಯ ಹಿತದೃಷ್ಟಿಯಿಂದ ಹಾಗೂ ಈಗಾಗಲೇ ಅಣೆಕಟ್ಟೆಯು ಸಂಪೂರ್ಣ ವಾಗಿ ಭರ್ತಿ ಯಾಗಿರುವ ಹಿನ್ನೆಲೆಯಲ್ಲಿ ಒಳಹರಿವಿನ ಪ್ರಮಾಣವನ್ನು ನೋಡಿಕೊಂಡು ನದಿಗೆ ಹೆಚ್ಚುವರಿ ನೀರನ್ನು ಹರಿಸುವಂತೆ ಶಾಸಕ ಅಪ್ಪಚ್ಚುರಂಜನ್ ಅವರ ಸೂಚನೆಯಂತೆ ೧೪ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗಿದೆ. ನಾಲೆಗೆ ೧೯೨ ಕ್ಯೂಸೆಕ್ಸ್ ನೀರನ್ನು ಹರಿಬಿಡಲಾಗಿದೆ ಎಂದು ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್ ತಿಳಿಸಿದ್ದಾರೆ.